ಯುವತಿಗೆ ಅಪಮಾನ ಪ್ರಕರಣ: ಚಾರ್ಜ್‍ಶೀಟ್ ಸಲ್ಲಿಕೆ ವಿಳಂಬ, ಯಳಂದೂರು ಠಾಣೆ ಪೊಲೀಸರ ವಿರುದ್ಧ ಆರೋಪ
ಚಾಮರಾಜನಗರ

ಯುವತಿಗೆ ಅಪಮಾನ ಪ್ರಕರಣ: ಚಾರ್ಜ್‍ಶೀಟ್ ಸಲ್ಲಿಕೆ ವಿಳಂಬ, ಯಳಂದೂರು ಠಾಣೆ ಪೊಲೀಸರ ವಿರುದ್ಧ ಆರೋಪ

July 17, 2018

ಕೊಳ್ಳೇಗಾಲ:  ಯುವತಿಯೊಬ್ಬಳಿಗೆ ಅಪಮಾನಿಸಿದ ಪ್ರಕರಣ ಸಂಬಂಧ ಯಳಂದೂರು ಪಟ್ಟಣ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸದೆ ಬೇಜಾಬ್ದಾರಿ ತನ ಪ್ರದರ್ಶಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪೊಲೀಸ್ ಇಲಾಖೆಯಲ್ಲಿ ಯಾವುದೇ ಪ್ರಕರಣ ದಾಖಲಾದರೂ ಅದರ ಸಂಬಂಧ ಕನಿಷ್ಠ 90ದಿನಗಳೊಳಗೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಗಂಭೀರ ಪ್ರಕರಣವಾಗಿದ್ದರೆ 60ದಿನಗಳೊಳಗೆ ದೋಷಾ ರೋಪಣಾ ಪಟ್ಟಿ ಸಲ್ಲಿಸಬೇಕು ಎಂಬ ನಿಯಮವಿದೆ. ಆದರೆ, ಯುವತಿಯೊಬ್ಬಳು ನೀಡಿದ ದೂರಿನ ಪ್ರಕರಣ 8 ತಿಂಗಳು ಕಳೆದರೂ ಯಳಂದೂರು ಪಟ್ಟಣ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸದೆ ಕಾನೂನು ಪಾಲನೆಯನ್ನು ಮರೆತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ತಾಲೂಕಿನ ಅಂಬಳೆಪಾಲ ಗ್ರಾಮದ ಯುವತಿ ಪುಷ್ಪಲತಾ ಅವರೊಂದಿಗೆ ಅದೇ ಗ್ರಾಮದ ಗುರು ಎಂಬಾತನು ಅಸಭ್ಯವಾಗಿ ವರ್ತಿಸಿ ಆಕೆಗೆ ಚಪ್ಪಲಿಯಿಂದ ಹೊಡೆದು ಅಪಮಾನ ಮಾಡಿದ್ದನು. ಈ ಸಂಬಂಧ ಯುವತಿ ಯಳಂದೂರು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಹಿನ್ನೆಲೆ ಯಲ್ಲಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ಸುಮ್ಮನಾಗಿದ್ದಾರೆ ಎಂದು ಆರೋಪಿಸಿಲಾಗಿದೆ.

ಏನಿದು ಪ್ರಕರಣ?: 2017ರ, ನ. 25ರಂದು ಪುಷ್ಪಲತಾ ಅವರು ಅಂಬಳೆ ಪಾಲದ ತನ್ನ ಮನೆಗೆ ತೆರುಳುತ್ತಿದ್ದಾಗ ಗುರು ಅವರನ್ನು ಅಡ್ಡಗಟ್ಟಿ ಅಪಮಾನಿಸಿದ್ದಾನೆ. ಈ ಸಂಬಂಧ ಯುವತಿ 2017ರ, ನ.26ರಂದು ಯಳಂದೂರು ಪಟ್ಟಣ ಠಾಣೆಯಲ್ಲಿ ದೂರು ನೀಡಿದ್ದರು. ಆ ವೇಳೆ ಪೊಲೀಸರು ಆರೋಪಿ ಗುರು ವಿರುದ್ಧ ಕಲಂ 341, 354, 355, 504ರ ರೀತ್ಯಾ ಪ್ರಕರಣ ದಾಖಲಿಸಿದ್ದರು. ಬಳಿಕ, ಗುರು ನ್ಯಾಯಾಲಯ ದಲ್ಲಿ ಷರತ್ತು ಬದ್ಧ ಜಾಮೀನು ಪಡೆದಿದ್ದಾನೆ ಎನ್ನಲಾಗಿದೆ.

ಆ ಬಳಿಕ, ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿ, ವೈದ್ಯಕೀಯ ವರದಿ ತರಿಸಿಕೊಂಡು ನ್ಯಾಯಾಲಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಬೇಕು. ಆದರೆ, ಅವರು ಪ್ರಭಾವಿಗಳ ಒತ್ತಡಕ್ಕೆ ಮಣಿದು 8 ತಿಂಗಳಾದರೂ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.

‘ದೂರು ನೀಡಿ ಇಷ್ಟು ದಿನಗಳು ಕಳೆದರೂ ಯಾಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿಲ್ಲ ಎಂದು ವಿಚಾರಿಸಿದರೆ, ಪೊಲೀಸರು ನಾಳೆ ಸಲ್ಲಿಸುತ್ತೇನೆ. ಒಂದು ವಾರದೊಳಗೆ ಸಲ್ಲಿಸುತ್ತೇನೆ ಎಂದು ಸಬೂಬು ಹೇಳುತ್ತಿದ್ದಾರೆ. ಪ್ರಕರಣ ನಡೆದು 8 ತಿಂಗಳಾದ ಬಳಿಕ ವೈದ್ಯಕೀಯ ವರದಿ ತರಿಸಿಕೊಂಡಿದ್ದಾರೆ’ ಎಂದು ಯುವತಿಯ ಸಂಬಂಧಿಕರು ಆರೋಪಿಸಿದ್ದಾರೆ.

ಪೊಲೀಸಪ್ಪನ ಮಗಳಿಗೆ ಪೊಲೀಸರಿಂದಲೇ ಅನ್ಯಾಯ: ಈ ಪ್ರಕರಣದಲ್ಲಿ ನೊಂದ ಯುವತಿ ಮೈಸೂರಿನ ಡಿಆರ್ ಮುಖ್ಯಪೇದೆ ರಂಗಸ್ವಾಮಿ ಅವರು ಪುತ್ರಿಯಾಗಿದ್ದಾಳೆ. ಆದರೆ, ಪಟ್ಟಣ ಠಾಣೆಯ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅವರಿಗೆ ನ್ಯಾಯ ಕೊಡಿಸುವ ಬದಲು ಅನ್ಯಾಯವೆಸಗಿದ್ದಾರೆ ಎಂಬ ಟೀಕೆ ಕೇಳಿಬಂದಿದೆ.

ಪೊಲೀಸರ ಪುತ್ರಿಗೆ ಹೀಗಾದರೆ ಇನ್ನೂ ಸಾಮಾನ್ಯ ಜನರಿಗೆ ಯಾವ ರೀತಿ ನ್ಯಾಯವನ್ನು ಪೊಲೀಸರು ನೀಡುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ಯುವತಿ ಪುಷ್ಪಲತಾ ನೀಡಿದ ದೂರಿನ್ವಯ ಪ್ರಕರಣವನ್ನು ಈಗಾಗಲೇ ದಾಖಲಿಸಿಕೊಳ್ಳಲಾಗಿದ್ದು, ದೋಷಾರೋಪಣ ಪಟ್ಟಿ ಸಲ್ಲಿಸಲು ಸರ್ಕಾರಿ ಅಭಿಯೋಜಕರಿಗೆ ಹಾಗೂ ಡಿವೈಎಸ್‍ಪಿ ಅವರ ಪರಿಶೀಲನೆಗಾಗಿ ನೀಡಲಾಗಿದೆ. – ಶ್ರೀಧರ್, ಯಳಂದೂರು ಪಿಎಸ್‍ಐ.

 

ಈ ಪ್ರಕರಣ ಸಂಬಂಧ ನನಗೆ ಯಳಂದೂರು ಠಾಣೆಯಿಂದ ದೋಷಾರೋಪಣೆ ಪಟ್ಟಿ ಸಲ್ಲಿಸುವ ಕುರಿತು ಪರಿಶೀಲನೆಗಾಗಿ ಯಾವುದೇ ಕಡತ ಬಂದಿಲ್ಲ. ಒಂದು ವೇಳೆ ಬಂದಿದ್ದರೆ ಪರಿಶೀಲಿಸಲಾಗುವುದು. – ಪುಟ್ಟಮಾದಯ್ಯ, ಡಿವೈಎಸ್‍ಪಿ ಕೊಳ್ಳೇಗಾಲ

Translate »