ಮೈಸೂರು, ಫೆ.9(ಎಂಕೆ)- ಮೈಸೂರಿನ ಇತಿಹಾಸ ಪ್ರಸಿದ್ಧ ಲಲಿತಾದ್ರಿಪುರ ಗ್ರಾಮ ಹಾಗೂ ಶಾಲೆಯ ಶತಮಾನೋತ್ಸವ ಸಮಾರಂಭ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 1920 ರಲ್ಲಿ ಸ್ಥಾಪಿತವಾದ ಲಲಿತಾದ್ರಿಪುರ ನೂರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಡಗರ-ಸಂಭ್ರಮದೊಂದಿಗೆ ಶತಮಾನೋತ್ಸವ ಆಚರಣೆ ಮಾಡಲಾಯಿತು.
ರಸ್ತೆಯುದ್ದಕ್ಕೂ ತಳಿರು-ತೋರಣಗಳು ರಾರಾಜಿಸುತ್ತಿದ್ದು, ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬೃಹತ್ ಬ್ಯಾನರ್ ಮತ್ತು ಕಟೌಟ್ ಗಳ ಆಕರ್ಷಣೀಯವಾಗಿದ್ದವು. ಬಣ್ಣ ಬಣ್ಣದ ಉಡುಗೆ-ತೊಡುಗೆ ತೊಟ್ಟು ಕಂಗೊಳಿಸುತ್ತಿದ್ದ ಗ್ರಾಮಸ್ಥರು ಸಂಭ್ರಮದಲ್ಲಿ ಮಿಂದೆದ್ದರು.
ಈ ವೇಳೆ ಲಲಿತಾದ್ರಿಪುರದ ಶ್ರೀ ಬಸವೇಶ್ವರ ದೇವಸ್ಥಾನದ ಬಳಿ ಸಿದ್ಧಪಡಿಸಲಾಗಿದ್ದ ಬೃಹತ್ ವೇದಿಕೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶತಮಾ ನೋತ್ಸವ ಸಮಾರಂಭವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯನ್ನು ಸ್ಮರಿಸಿಕೊಂಡು ಶತಮಾನೋತ್ಸವ ಆಚರಿ ಸುತ್ತಿರುವುದಕ್ಕೆ ಅರಮನೆಯ ಪರವಾಗಿ ಶುಭಾಶಯ ಕೋರು ತ್ತೇನೆ. ನಾಲ್ವಡಿಯವರ ಕೊಡುಗೆ ಅಪಾರ. ಲಲಿತಾದ್ರಿಪುರ ಗ್ರಾಮ ನಿರ್ಮಾಣದೊಂದಿಗೆ ಶಾಲೆ, ಕುಡಿಯುವ ನೀರು ಹೀಗೆ ಸಕಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದಾರೆ. ಹಿರಿಯರು, ಪೂರ್ವಜರು ನಮಗೆ ನೀಡಿರುವ ಕೊಡುಗೆಯಂತೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಸ್ತುತ ಸಮಸ್ಯೆಗಳನ್ನು ತಿಳಿದು ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಇತ್ತೀಚೆಗೆ ಪ್ಲಾಸ್ಟಿಕ್ ದೊಡ್ಡ ಸಮಸ್ಯೆ ಯಾಗಿದ್ದು, ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸ ಬೇಕಿದೆ ಎಂದು ಜಾಗೃತಿ ಮೂಡಿಸಿದರು.
ಕರಿಮಣ್ಣಿನ ನಾಡು ಕರ್ನಾಟಕವಾಗಿದೆ. ಇಲ್ಲಿ ನಾವು ಬೆಳೆದು ತಿನ್ನಬೇಕು. ಇಂದು ನಮ್ಮ ಅಸ್ತಿತ್ವ. ಪಾರಂಪರಿಕ ಕಟ್ಟಡಗಳ ಉಳಿವು ಅಗತ್ಯವಾಗಿದೆ. ದೇವರಾಜ ಮಾರುಕಟ್ಟೆಯೂ ಅಷ್ಟೆ. ರೈತರಿಂದ ನೇರವಾಗಿ ಉತ್ಪನ್ನಗಳನ್ನು ಕೊಳ್ಳುವುದಕ್ಕೆ ದೇವರಾಜ ಮಾರುಕಟ್ಟೆಯು ಸಹಕಾರಿಯಾಗಿದೆ. ಮಾರುಕಟ್ಟೆಯ ಜಾಗದಲ್ಲಿ ಮಾಲ್‍ಗಳು ಬರ ಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಅರಮನೆಯವರು ಮಾರುಕಟ್ಟೆಗೆ ಬುಟ್ಟಿಗಳನ್ನು ಹಿಡಿದು ಹೋಗುತ್ತಿದ್ದರು. ಆದರೆ, ಇಂದು ಪ್ಲಾಸ್ಟಿಕ್ ಬಾಟಲ್, ಕ್ಯಾರಿಬ್ಯಾಗ್‍ಗಳ ಸಮಸ್ಯೆ ಹೆಚ್ಚಾಗಿದೆ. ಪ್ಲಾಸ್ಟಿಕ್ ಮುಕ್ತಗೊಳಿಸುವ ಕಾರ್ಯವನ್ನು ಲಲಿತಾದ್ರಿಪುರದಿಂದ ಆರಂಭಿಸೋಣ. ಮುಂದೆ ಇದು ರಾಜ್ಯಕ್ಕೆ ಮಾದರಿಯಾಗಲಿ ಎಂದು ಕರೆ ನೀಡಿದರು.
ಇದೇ ವೇಳೆ ಲಲಿತಾದ್ರಿಪುರ ಸಮುದಾಯ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಿಜೆಪಿ ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜ ಯೇಂದ್ರ ಮಾತನಾಡಿ, ಮೈಸೂರು ಎಂದರೆ ನೆನಪಾಗುವುದು ಮಹಾರಾಜರು. ಮಹಾರಾಜರು ಎಂದರೆ ಪ್ರಜಾರಾಜರು. ಪ್ರಜಾಸೇವೆ ದೇವರ ಸೇವೆ ಎಂದು ಅಧಿಕಾರ ನಡೆಸಿದವರು ಮೈಸೂರು ಮಹಾರಾಜರು. ಅವರು ಕಟ್ಟಿದ ಗ್ರಾಮದ ಹಾಗೂ ಶಾಲೆಯ ಶತ ಮಾನೋತ್ಸವ ಆಚರಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೈಸೂರಿನೊಂದಿಗೆ ಅವಿನಾಭಾವ ಸಂಬಂಧವಿದ್ದು, ಅವರ ಅಧಿಕಾರ ಅವಧಿಯಲ್ಲಿ ನಾಡಹಬ್ಬ ದಸರಾ ಆಚರಣೆಯನ್ನು ವೈಭವದಿಂದ ನಡೆಸಿರುವುದು ಇದಕ್ಕೆ ಸಾಕ್ಷಿಯಾಗಿದೆ. ಮೈಸೂರು ಪ್ರಸಿದ್ದ ಪ್ರವಾಸಿ ತಾಣವಾದ ಕಾರಣ ಪ್ರವಾಸೋದ್ಯಮ ಅಭಿವೃದ್ಧಿಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೆಚ್ಚಿನ ಅನುದಾನ ನೀಡಿದ್ದಾರೆ. ಮುಂದಿನ ತಿಂಗಳಲ್ಲಿ ಬಜೆಟ್ ಮಂಡನೆಯಾಗಲಿದ್ದು, ಮೈಸೂರು ಅಭಿವೃದ್ಧಿಗೆ, ರೈತರ ಸಂಕಷ್ಟ ಪರಿಹಾರ, ನೀರಾವರಿ ಅಭಿವೃದ್ಧಿಗೆ ಸೇರಿದಂತೆ ಹಲವು ಕಾರ್ಯಗಳಿಗೆ ಒತ್ತು ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಜಿ.ಟಿ.ದೇವೇಗೌಡ ಅವರು ಮಾತನಾಡಿ, ಮೈಸೂರು ರಾಜ್ಯವನ್ನು ರಾಮರಾಜ್ಯ ದಂತೆ ಆಳಿದವರು ನಾಲ್ವಡಿ ಕೃಷ್ಣರಾಜ ಒಡೆಯರ್. ಕೆಆರ್‍ಎಸ್, ಕೆ.ಆರ್ ಆಸ್ಪತ್ರೆ, ನಗರಪಾಲಿಕೆ ಹೀಗೆ ಅನೇಕ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿದ್ದು, ನೂರು ವರ್ಷಗಳನ್ನು ಪೂರೈಸಿವೆ. ಜನರ ಕೈಗೆ ಆಡಳಿತ ನೀಡುವ ಕಾರ್ಯವನ್ನು ಮಹಾರಾಜರು ಮಾಡಿದರು. ಮೀಸಲಾತಿ ಮೂಲಕ ಮಹಿಳೆಯರಿಗೂ ಮತದಾನದ ಹಕ್ಕು ಕಲ್ಪಿಸಿದರು ಎಂದು ಗುಣಗಾನ ಮಾಡಿದರು. ಬಿ.ವೈ.ವಿಜಯೇಂದ್ರ ಅವರು, ಶಾಸಕರಾಗದಿದ್ದರೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಿಸಿದರೆ, ಲಲಿತಾದ್ರಿಪುರ ಸಮುದಾಯ ಭವನ ನಿರ್ಮಾಣಕ್ಕೆ ಸಹಕಾರ ನೀಡಲು ಅನುಕೂಲವಾಗುತ್ತದೆ ಎಂದು ಗಮನ ಸೆಳೆದರು.
ಸಮಾರಂಭದಲ್ಲಿ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ರಾಜೀವ್, ತಾಪಂ ಮಾಜಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಬಿಜೆಪಿ ಮುಖಂಡರಾದ ಸಿದ್ದಲಿಂಗಸ್ವಾಮಿ, ಕೌಟಿಲ್ಯ ರಘು, ಎಸ್.ಮಹೇಂದ್ರ, ಬಿ.ಹೆಚ್.ಮಂಜುನಾಥ್, ವಿಜಯಕುಮಾರ್, ವಸಂತ್ ಕುಮಾರ್, ಚಂದ್ರಶೇಖರ್, ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ರಾಣಿ ಮತ್ತಿತರರಿದ್ದರು.