ರಾಮನಗರದಲ್ಲಿ ಆರ್‍ಎಸ್‍ಎಸ್ ಪಥ ಸಂಚಲನ
ಮೈಸೂರು

ರಾಮನಗರದಲ್ಲಿ ಆರ್‍ಎಸ್‍ಎಸ್ ಪಥ ಸಂಚಲನ

February 10, 2020

ರಾಮನಗರ, ಫೆ.9-ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಭದ್ರಕೋಟೆಯಾದ ಕನಕಪುರದಲ್ಲಿ ಬಲ ಪ್ರದರ್ಶನ ಮಾಡಿದ್ದ ಆರ್‍ಎಸ್‍ಎಸ್, ಭಾನುವಾರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕೋಟೆಗೆ ಲಗ್ಗೆ ಇಟ್ಟಿದೆ. 6 ಸಾವಿರಕ್ಕೂ ಹೆಚ್ಚು ಆರ್‍ಎಸ್‍ಎಸ್ ಕಾರ್ಯ ಕರ್ತರು ಪಥ ಸಂಚಲನ ನಡೆಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

ಇದೇ ಮೊದಲ ಬಾರಿಗೆ ಆರ್‍ಎಸ್‍ಎಸ್ ದಕ್ಷಿಣ ಮಧ್ಯ ಕೇಂದ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಿಜೆಪಿ ಪ್ರಾಬಲ್ಯವಿಲ್ಲ ದಿರುವ ರಾಮನಗರಕ್ಕೆ ಕರೆತರಲಾಯಿತು. ಈ ಪಥ ಸಂಚಲನದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇ ಶ್ವರ್, ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್, ಯೋಗೇಶ್ವರ್ ಅವರ ಪುತ್ರರಾದ ಶ್ರವಣ್ ಮತ್ತು ಧ್ಯಾನ್ ಅವರುಗಳು ಆರ್‍ಎಸ್‍ಎಸ್ ಧಿರಿಸಿನೊಂ ದಿಗೆ ಪಥ ಸಂಚಲನದಲ್ಲಿ ಭಾಗವಹಿಸಿ ಗಮನ ಸೆಳೆದರು. ಆರ್‍ಎಸ್‍ಎಸ್‍ನ ಪಥ ಸಂಚಲನವು ಭಾನುವಾರ ರಾಮನಗರದ ಬಾಲಗೇರಿ ವೃತ್ತ ಹಾಗೂ ಕೆಂಪೇಗೌಡ ವೃತ್ತದಿಂದ ಏಕಕಾಲಕ್ಕೆ ಆರಂಭಗೊಂಡಿತು. ಬಾಲಗೇರಿ ವೃತ್ತದಿಂದ ಆರಂಭಗೊಂಡ ಪಥ ಸಂಚಲನ ಟೌನ್ ಪೊಲೀಸ್ ಠಾಣೆ ರಸ್ತೆ, ಬನ್ನಿಮಹಾನ್ ಕಾಳಮ್ಮ ವೃತ್ತದ ಮೂಲಕ ಜೂನಿಯರ್ ಕಾಲೇಜು ಮೈದಾನ ತಲುಪಿತು. ಕೆಂಪೇಗೌಡ ವೃತ್ತದಿಂದ ಆರಂಭಗೊಂಡ ಪಥ ಸಂಚಲನವು ಬೆಂಗಳೂರು-ಮೈಸೂರು ರಸ್ತೆ, ಖಾಸಗಿ ಬಸ್ ನಿಲ್ದಾಣ ರಸ್ತೆ, ಬನ್ನಿಕಾಳಮ್ಮ ವೃತ್ತ, ಎಂ.ಬಿ.ರಸ್ತೆ, ಕಾಳಮ್ಮನ ಗುಡಿ ವೃತ್ತದ ಮೂಲಕ ಜೂನಿಯರ್ ಕಾಲೇಜು ಮೈದಾನ ತಲುಪಿತು. ಗಣವೇಷ ಧರಿಸಿದ್ದ ಸ್ವಯಂ ಸೇವಕರು ಕೈಯ್ಯಲ್ಲಿ ಲಾಠಿ ಹಿಡಿದು ಶಿಸ್ತಿನಿಂದ ಹೆಜ್ಜೆ ಹಾಕಿದರು. ಸ್ಥಳೀಯರು ಹೂವುಗಳನ್ನು ಎರಚುವ ಮೂಲಕ ಅವರನ್ನು ಸ್ವಾಗತಿಸಿದರು. ನಂತರ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ದಿಕ್ಸೂಚಿ ಭಾಷಣ ಮಾಡಿದರು.

ಮುಸಲ್ಮಾನರು ಅತ್ಯಂತ ಸಂತೋಷದಿಂದ ಬದುಕುತ್ತಿರುವುದು ಭಾರತದಲ್ಲಿ ಮಾತ್ರ
ರಾಮನಗರ, ಫೆ.9-ಮುಸಲ್ಮಾನರು ಅತ್ಯಂತ ಸಂತೋಷ ದಿಂದ ಬದುಕುತ್ತಿರುವುದು ಭಾರತದಲ್ಲಿ ಮಾತ್ರ. ಎಲ್ಲಾ ಸಮುದಾಯಗಳನ್ನೂ ಒಪ್ಪಿ ಅಪ್ಪಿಕೊಳ್ಳುವುದು ಹಿಂದೂ ಸಮಾಜ ಒಂದೇ ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದರು.

ರಾಮನಗರದಲ್ಲಿ ಭಾನುವಾರ ನಡೆದ ಆರ್‍ಎಸ್‍ಎಸ್ ಪಥ ಸಂಚಲನದ ನಂತರ ನಡೆದ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಮುಸ್ಲಿಂ ಲೀಗ್‍ನವರು `ನಮಗೂ ಹಿಂದೂಗಳಿಗೂ ಸರಿ ಬರುವುದಿಲ್ಲ. ನಮಗೆ ಬೇರೆ ಭೂಮಿ ಕೊಡಿ’ ಎಂದು ಹೇಳಿದಾಗ ಹಿಂದೂಗಳು ಕಾಂಗ್ರೆಸ್ ನಮ್ಮ ಪರ ನಿಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಕಾಂಗ್ರೆಸ್ ಹಿಂದೂ ಪರ ನಿಲ್ಲಲೇ ಇಲ್ಲ. ಆನಂತರ ಗೋಳ್ವಳ್ಕರ್ ಅವರು ಹಿಂದೂಗಳ ಪರ ನಿಂತರು ಎಂದರು.

ಇಲ್ಲೇ ಇದ್ದುಕೊಂಡು ಪಾಕಿಸ್ತಾನಕ್ಕೆ `ಜೈ’ ಎಂದು ಹೇಳು ವವರು ಪಾಕಿಸ್ತಾನಕ್ಕೆ ಹೋಗುವುದೇ ಇಲ್ಲ. ಯಾಕೆಂದರೆ ಮುಸಲ್ಮಾನರು ಅತ್ಯಂತ ಸಂತೋಷದಿಂದ ಬದುಕುತ್ತಿರು ವುದು ಭಾರತದಲ್ಲಿ ಮಾತ್ರ. ಎಲ್ಲಾ ಸಮುದಾಯಗಳನ್ನೂ ಅಪ್ಪಿ ಒಪ್ಪಿಕೊಳ್ಳುವ ಹಿಂದೂ ಸಮಾಜವು ದೇಶದ ಲಕ್ಷಾಂತರ ಮಸೀದಿಗಳು ಹಾಗೂ ಚರ್ಚ್‍ಗಳಿಗೆ ಭೂಮಿ ನೀಡಿದೆ. ಆದರೂ ಹಿಂದೂ ಸಮಾಜ ವನ್ನು ಜಾತ್ಯಾತೀತ ವಿರೋಧಿ ಎಂದು ಕೆಲವರು ಕರೆಯುವುದು ಸರಿಯೇ? ಎಂದು ಪ್ರಭಾಕರ್ ಪ್ರಶ್ನಿಸಿದರು.

ಸಾವಿರಾರು ವರ್ಷಗಳ ಹಿಂದೆ ನಮ್ಮ ದೇಶದ ಮೇಲೆ ಮುಸ್ಲೀಮರು ದಾಳಿ ಮಾಡಿದ್ದರು. ಕ್ರಿಶ್ಚಿಯನ್ನರೂ ದಾಳಿ ಮಾಡಿದ್ದರು. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇದ್ದ ಪರಿಣಾಮ ಬ್ರಿಟಿಷರು ಹಿಂದೂಗಳನ್ನು ಗುಲಾಮರನ್ನಾಗಿ ಮಾಡಿದರು. ಇಷ್ಟೆಲ್ಲಾ ಆದರೂ ಹಿಂದೂಗಳಿಗಾಗಿ ಹೋರಾಟ ಮಾಡಿದ ಭೂಮಿ ಇದು. ಸ್ವಾಮಿ ವಿವೇಕಾನಂದರ ಭಾಷಣವನ್ನು 125 ವರ್ಷಗಳ ನಂತರವೂ ಜಗತ್ತಿನಲ್ಲಿ ಹೇಳಲಾಗುತ್ತಿದೆ. ದೇಶದ 130 ಕೋಟಿ ಜನರೂ ಹಿಂದೂಗಳೇ. ಕೆಲವರು ಯಾರದ್ದೋ ಭಯಕ್ಕೆ ಅಥವಾ ಬೇರೇನೋ ಆಸೆಗೆ ಮತಾಂತರವಾಗಿದ್ದಾರೆ. ಈ ದೇಶವನ್ನು ಎಂದಿಗೂ ಕ್ರಿಶ್ಚಿಯನ್ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲ. ಇದು ಕ್ರೈಸ್ತ ಅಥವಾ ಪೈಗಂಬರರ ದೇಶವಲ್ಲ. ಇದು ಕೃಷ್ಣನ ದೇಶ ಎಂದರು. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡಿದ ಅವರು, ಜನರಿಗೆ ನ್ಯಾಯ ಕೊಡಿಸುವ ಸಲುವಾಗಿ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ಸಂಕಷ್ಟದಲ್ಲಿರುವ ಜನರಿಗೆ ಊಟ, ವಸತಿ ಕೊಟ್ಟು ನೆಮ್ಮದಿಯ ಜೀವನ ನಡೆಸಲು ಅವಕಾಶ ನೀಡುವುದು ತಪ್ಪೇ? ನೆರೆ ರಾಷ್ಟ್ರದಲ್ಲಿ ಕೋಮುವಾದಿ ಗಳಿಂದ ಹಿಂಸೆ ಅನುಭವಿಸಿದ ಜನರಿಗೆ ನ್ಯಾಯ ನೀಡುವ ಸಲುವಾಗಿ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದೆ. ಇದು ಪೌರತ್ವ ನೀಡುವ ಕಾಯ್ದೆಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳುವ ಕಾಯ್ದೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Translate »