ಮೈಸೂರು, ಆ.24(ಎಸ್‍ಬಿಡಿ)- ಪಾರಂಪರಿಕ ನಗರಿ ಮೈಸೂರಿನಲ್ಲಿ ದಸರಾ ಚಟುವಟಿಕೆ ಆರಂಭವಾಗಿರುವ ಬೆನ್ನಲ್ಲೇ ಶತಮಾನ ಕಂಡ ಶಾಲಾ ಕಟ್ಟಡವನ್ನು ದಿಢೀರ್ ನೆಲ ಸಮಗೊಳಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಮೈಸೂರಿನ ಇಟ್ಟಿಗೆಗೂಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಾಜ ಮನೆತನದವರು ಶತಮಾನದ ಹಿಂದೆಯೇ ನಿರ್ಮಿಸಿದ್ದ ಈ ಕಟ್ಟಡ ಹಲವು ವರ್ಷಗಳಿಂದ ಖಾಲಿ ಯಿತ್ತು. ಹಾಗಾಗಿ 3 ತಿಂಗಳ ಹಿಂದೆಯೇ ಶತಮಾನದ ಶಾಲಾ ಕಟ್ಟಡವನ್ನು ನೆಲ ಸಮಗೊಳಿಸಲು ಮುಡಾ ಮುಂದಾಗಿತ್ತಾ ದರೂ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ ರಜಾದಿನವಾದ ಶನಿವಾರ ಬೆಳಿಗ್ಗೆ ಏಕಾಏಕಿ ಜೆಸಿಬಿ ಮೂಲಕ ಶಾಲಾ ಕಟ್ಟಡ ವನ್ನು ನೆಲಸಮಗೊಳಿಸಲಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮುಡಾ ಆಯುಕ್ತರು ದೂರವಾಣಿ ಸಂಪರ್ಕಕಕ್ಕೇ ಸಿಗುತ್ತಿಲ್ಲ. ಹಾಗಾದರೆ ಶತಮಾನದ ಶಾಲಾ ಕಟ್ಟಡವನ್ನು ವಿರೋಧದ ನಡುವೆಯೂ ನೆಲಕ್ಕುರುಳಿಸಿದ್ದು ಯಾರೆಂಬ ಪ್ರಶ್ನೆ ಉದ್ಭವಿಸಿರುವುದರ ಜೊತೆಗೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆ ಸಂದರ್ಭ ನಗರಾಭಿ ವೃದ್ಧಿ ಸಶಕ್ತ ಮಂಡಳಿ 1910ರಲ್ಲಿ ಇಟ್ಟಿಗೆಗೂಡಿನ ಮಕ್ಕಳ ಶಿಕ್ಷಣ ಕ್ಕಾಗಿ ಈ ಶಾಲೆಯನ್ನು ನಿರ್ಮಿಸಿತ್ತು. ಆದರೆ ಏಳೆಂಟು ವರ್ಷಗಳಿಂದ ಇಲ್ಲಿ ಶಾಲೆ ನಡೆಯುತ್ತಿರಲಿಲ್ಲ. ಹಾಗಾಗಿ ಪಾಳು ಬಿದ್ದಿತ್ತು. ಇದು ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಇಲ್ಲವಾದರೂ ಸಾರ್ವಜನಿಕ ರಲ್ಲಿ ಭಾವನಾತ್ಮಕ ನಂಟಿದೆ. ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಸಾಕಷ್ಟು ಜಾಗಗಳಿವೆ. ಅದಕ್ಕಾಗಿ ಐತಿಹಾಸಿಕ ಕಟ್ಟಡವನ್ನು ನೆಲಸಮಗೊಳಿಸುವುದು ಸರಿಯಲ್ಲ. ಆಕರ್ಷಕ ವಾಸ್ತುಶಿಲ್ಪ ಹೊಂದಿ ರುವ ಈ ಸುಂದರ ಕಟ್ಟಡವನ್ನು ಸಂರಕ್ಷಿಸಿಕೊಂಡು, ಗ್ರಂಥಾಲಯ ವಾಗಿ ಪರಿವರ್ತಿಸಬೇಕೆಂದು ಈ ಹಿಂದೆ ಕಟ್ಟಡ ತೆರವಿಗೆ ಇತಿಹಾಸ ತಜ್ಞರು ಹಾಗೂ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರು.
ಪರಿಣಾಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದ ಮುಡಾ ಅಧಿಕಾರಿಗಳು, ಶಾಲಾ ಕಟ್ಟಡ ಪಾಳು ಬಿದ್ದಿರುವುದರಿಂದ ಅದನ್ನು ಸದಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಡಳಿತಾತ್ಮಕ ಕ್ರಮ ಕೈಗೊಳ್ಳ ಲಾಗಿತ್ತು. ಈ ಕಟ್ಟಡ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಇಲ್ಲ. ಆದರೂ ಇತಿಹಾಸ ತಜ್ಞರು ವಿರೋಧ ವ್ಯಕ್ತಪಡಿಸಿದ್ದರಿಂದ ಕಾರ್ಯಾ ಚರಣೆ ಸ್ಥಗಿತಗೊಳಿಸಿರುವುದಾಗಿ ತಿಳಿಸಿದ್ದರು. ಅಲ್ಲದೆ ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸುವುದರ ಜೊತೆಗೆ ಪಾರಂಪರಿಕ ಸಮಿತಿಯಿಂದ ವರದಿ ಪಡೆದು ಸಮಾಲೋಚನೆ ನಡೆಸಲಾಗುವುದು. ಪಾರಂಪರಿಕ ಕಟ್ಟಡ ಪಟ್ಟಿಗೆ ಸೇರ್ಪಡೆಯಾಗದಿದ್ದರೆ ಯೋಜನೆಯಂತೆ ಕಟ್ಟಡ ಒಡೆದು, ಕಾಂಪ್ಲೆಕ್ಸ್ ನಿರ್ಮಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯದ ಅಧಿಕಾರಿಗಳು, ಶತಮಾನ ಕಂಡಿರುವ ಶಾಲಾ ಕಟ್ಟಡ ನೆಲಸಮಕ್ಕೆ ನಮ್ಮಿಂದ ಅನುಮತಿ ಪಡೆದಿರಲಿಲ್ಲ. ಹಾಗಾಗಿ ತೆರವು ಕಾರ್ಯಾಚರಣೆ ಯನ್ನು ತಡೆಯಲಾಗಿದೆ. ಈ ಕಟ್ಟಡ ಒಡೆಯಲು ಪಾರಂಪರಿಕ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳ ಅನುಮತಿಬೇಕೆಂದು ತಿಳಿಸಿ ದ್ದರು. ಆದರೀಗ ಎಲ್ಲಾ ಹೇಳಿಕೆಗಳೂ ಕಟ್ಟಡ ತ್ಯಾಜ್ಯದೊಂದಿಗೆ ಮಣ್ಣಾಗಿದೆ. ಕಟ್ಟಡ ನೆಲಸಮಗೊಳಿಸಿರುವ ಬಗ್ಗೆ ಮಾಹಿತಿ ಇಲ್ಲ ವೆಂದು ಡಿಸಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳದ್ದೂ ಇದೇ ಪ್ರತಿಕ್ರಿಯೆಯಾಗಿದೆ. ಇನ್ನು ಮುಡಾ ಆಯುಕ್ತ ಕಾಂತರಾಜು ಅವರ ದೂರವಾಣಿ ಸಂಪರ್ಕ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ದಸರಾ ಸಂಭ್ರಮ ಆರಂಭದಲ್ಲೇ ಶತಮಾನದ ಶಾಲಾ ಕಟ್ಟಡವೊಂದು ಸದ್ದಿಲ್ಲದೆ ಇತಿಹಾಸ ಪುಟ ಸೇರಿದೆ.