ಮೈಸೂರು: ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ಅಧಿಕಾರಿಗಳೊಂದಿಗೆ ಶುಕ್ರವಾರ 18ನೇ ವಾರ್ಡ್‍ನ ಚೆಲುವಾಂಬ ಉದ್ಯಾನವನ, ಯಾದವಗಿರಿ, ಮಂಜುನಾಥಪುರ ಬಡಾವಣೆಯಲ್ಲಿ ಪಾದಯಾತ್ರೆ ನಡೆಸಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಚೆಲುವಾಂಬ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಂದರ್ಭದಲ್ಲಿ ಪಾಲಿಕೆ ವತಿಯಿಂದ ಅಳವಡಿಸಿರುವ ವ್ಯಾಯಾಮ ಸಲಕರಣೆಗಳು ಕಳಪೆ ಗುಣಮಟ್ಟದ್ದಾಗಿದ್ದು, ಕೆಲ ಬೇರಿಂಗ್ ಹಾಗೂ ಕಬ್ಬಿಣದ ರಾಡ್‍ಗಳು ಮುರಿಯುವ ಸ್ಥಿತಿಯಲ್ಲಿವೆ. ವ್ಯಾಯಾಮ ಮಾಡುವಾಗ ಅವಘಡ ಸಂಭವಿಸಿದರೆ ಯಾರು ಹೊಣೆ?. ಸಲಕರಣೆಗಳ ದುರಸ್ತಿ ಜೊತೆಗೆ ಸೂಕ್ತ ನಿರ್ವಹಣೆ ಮಾಡುವಂತೆ ಸಂಬಂಧಿಸಿದ ಗುತ್ತಿಗೆದಾರನಿಗೆ ಸೂಚನೆ ನೀಡಬೇಕೆಂದು ವಾಯು ವಿಹಾರಿಗಳು ಆಗ್ರಹಿಸಿದರು. ಆಗ ಶಾಸಕ ನಾಗೇಂದ್ರ, ಇನ್ನು 3 ದಿನಗಳಲ್ಲಿ ವ್ಯಾಯಾಮ ಸಲಕರಣೆಗಳ ದುರಸ್ತಿ ಬಿಡಿ ಭಾಗಗಳನ್ನು ತೆಗೆದು, ಉತ್ತಮ ಗುಣಮಟ್ಟದ ವಸ್ತುಗಳನ್ನು ಅಳವಡಿಸಿ, ನಿರ್ವಹಿಸುವಂತೆ ಗುತ್ತಿಗೆದಾರನಿಗೆ ನೋಟೀಸ್ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉದ್ಯಾನದ ಪಕ್ಕದಲ್ಲಿರುವ ವಿವೇಕಾನಂದ ಪ್ರತಿಮೆಯ ಹಿಂಬಾಗದಲ್ಲಿರುವ ನೀರಿನ ಟ್ಯಾಂಕ್ ಬಿರುಕು ಬಿಟ್ಟಿದ್ದು, ನೀರು ಪೋಲಾಗುತ್ತಿದೆ. ಹಳೆಯ ಟ್ಯಾಂಕ್ ತೆರವು ಮಾಡಿ ಹೊಸದಾಗಿ ನಿರ್ಮಾಣ ಮಾಡುವುದರೊಂದಿಗೆ ಇಲ್ಲಿರುವ ಜಲಪಾತಕ್ಕೂ ಚಾಲನೆ ನೀಡಬೇಕು. ಉದ್ಯಾನ ವನದಲ್ಲಿ ಎಲ್‍ಇಡಿ ದೀಪದ ವ್ಯವಸ್ಥೆ ಮಾಡಬೇಕು. ಮುರಿದಿರುವ ಮಕ್ಕಳ ಆಟಿಕೆಗಳನ್ನು ದುರಸ್ತಿ ಮಾಡಿಸಬೇಕು. ವಾಕಿಂಗ್ ಪಾಥ್ ಸುಸ್ಥಿತಿಯಲ್ಲಿಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ ನಾಗೇಂದ್ರ ಅವರು, ಅಲ್ಲಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಕಂಡು ಉದ್ಯಾನದ ಮೇಲ್ವಿಚಾರಕರಿಗೆ ತರಾಟೆಗೆ ತೆಗೆದುಕೊಂಡು, ಕೂಡಲೇ ತೆರವುಗೊಳಿಸುವಂತೆ ಎಚ್ಚರಿಸಿದರು.
ಚೆಲುವಾಂಬ ಉದ್ಯಾನದಲ್ಲಿ ಬೆಂಚ್‍ಗಳ ಅಳವಡಿಕೆ ಹಾಗೂ ಒಂದು ಹಟ್ ನಿರ್ಮಾಣಕ್ಕೆ ಅಗತ್ಯವಾದ ಸುಮಾರು 10 ಲಕ್ಷ ರೂ.ಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಿಡುಗಡೆ ಮಾಡಿ, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿದ ಅವರು, ಯಾದವಗಿರಿಯ ಗಿರಿದರ್ಶಿನಿ ಉದ್ಯಾನದ ಬಳಿ ಅವೈಜ್ಞಾನಿಕವಾಗಿ ಮೋರಿ ಕಾಮಗಾರಿ ನಡೆಸಿರುವುದನ್ನು ಪರಿಶೀಲಿಸಿ, ಗುತ್ತಿಗೆದಾರನಿಗೆ ಬಿಲ್ ಪಾವತಿಯನ್ನು ತಡೆಹಿಡಿಯುವಂತೆ ಸೂಚಿಸಿದರು.
ಬಳಿಕ ಮಂಜುನಾಥಪುರ ಬಡಾವಣೆಯಲ್ಲಿ ಪರಿಶೀಲನೆ ನಡೆಸಿ, ಯುಜಿಡಿ ಸಮಸ್ಯೆ, ಅವೈಜ್ಞಾನಿಕವಾಗಿ ನಿರ್ಮಿಸಿರುವ ಹೆಚ್ಚುವರಿ ಮ್ಯಾನ್‍ಹೋಲ್‍ಗಳ ದುಸ್ಥಿತಿ, ಸಮುದಾಯ ಶೌಚಾಲಯಗಳ ಬಾಗಿಲು ಮುರಿದಿರುವುದು, ಗೋಡೆ ಕುಸಿದಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಮೋರಿ ನಿರ್ಮಾಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸುವಂತೆ ಅಭಿವೃದ್ಧಿ ಅಧಿಕಾರಿ ನಳಿನಿ ಅವರಿಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಯಾದವಗಿರಿ ಕೈಗಾರಿಕಾ ಪ್ರದೇಶದಲ್ಲಿ 12.68 ಲಕ್ಷ ರೂ. ವೆಚ್ಚದಲ್ಲಿ ಡೈನಿಂಗ್ ಹಾಲ್ ಕಟ್ಟಡದ ನಿರ್ಮಾಣಕ್ಕೆ ಶಾಸಕ ನಾಗೇಂದ್ರ ಗುದ್ದಲಿ ಪೂಜೆ ನೆರವೇರಿಸಿದರು. ನಗರ ಪಾಲಿಕೆ ಸದಸ್ಯ ಗುರುವಿನಾಯಕ, ಒಳಚರಂಡಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಮಹೇಶ್, ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಹರೀಶ್, ವಿವಿ ಮೊಹಲ್ಲಾ ವಿದ್ಯುತ್ ಸರಬರಾಜು ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೇಶವಮೂರ್ತಿ, ಕೊಳಚೆ ನಿರ್ಮೂಲನಾ ಮಂಡಳಿಯ ಜವಹಾರ್ ಜೋಗಿ, ಆರೋಗ್ಯ ಇಲಾಖೆಯ ಮುರುಗೇಶ್, ನಗರ ಪಾಲಿಕೆ ವಿದ್ಯುತ್ ವಿಭಾಗದ ಸುಜಾತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಬಿಜೆಪಿ ಮುಖಂಡರಾದ ರಾಮಣ್ಣ, ಚಿಕ್ಕವೆಂಕಟು, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.