ಮನೆ ಮಾಲೀಕರ ಕಿರುಕುಳ, ಲೈಂಗಿಕ ದೌರ್ಜನ್ಯ…
ಮೈಸೂರು

ಮನೆ ಮಾಲೀಕರ ಕಿರುಕುಳ, ಲೈಂಗಿಕ ದೌರ್ಜನ್ಯ…

December 29, 2018

ಮೈಸೂರು: ಕರೆಂಟ್ ಹೊಡೆದ ಪರಿಣಾಮ ತಾಯಿ ಕಳೆದುಕೊಂಡೆ…, ತನ್ನ ಮೇಲೆ 20 ವರ್ಷಗಳಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆಯಿತು…, ಕೊಡಿಸಿದ್ದ ಭೊಗ್ಯದ ಮನೆ ಕಿತ್ತುಕೊಂಡರು…!

ಇವು ಮನೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆ ಯರ ಗೋಳು. ಮೈಸೂರು ಗೃಹ ಕಾರ್ಮಿಕರ ಟ್ರೇಡ್ ಯೂನಿಯನ್ ವತಿಯಿಂದ ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿ ರುವ ದಿ ಇನ್ಸ್‍ಟಿಟ್ಯೂಷನ್ ಆಫ್ ಇಂಜಿನಿಯರ್ಸ್‍ನ ಎಸ್‍ಪಿ ಭಟ್ ಹಾಲ್‍ನಲ್ಲಿ ಇಂದು ಏರ್ಪಡಿಸಿದ್ದ ಗೃಹ ಕಾರ್ಮಿಕರ ಸಾರ್ವಜನಿಕ ಅಹವಾಲು ವಿಚಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮನೆ ಕೆಲಸ ಮಾಡುವ ಮಹಿಳೆಯರು ತಾವು ಅನುಭ ವಿಸುತ್ತಿರುವ ಯಾತನೆಗಳನ್ನು ಪರಿ ಪರಿಯಾಗಿ ತೋಡಿಕೊಂಡರು.

ತಾನು ಕೆಲಸ ಮಾಡುತ್ತಿದ್ದ ಮನೆ ಮಾಲೀಕ ಲೈಂಗಿಕ ಕಿರುಕುಳ ನೀಡುತ್ತಿದ್ದ. ಒಮ್ಮೆ ನಾನು ಮನೆಯಿಂದ ಓಡಿ ಬಂದು ನನ್ನ ಮನೆ ತಲುಪಿದರೂ ಬೆನ್ನತ್ತಿ ಬಂದ ಮಾಲೀಕ ದೌರ್ಜನ್ಯ ವೆಸಗಲೆತ್ನಿಸಿದ್ದ. ನನ್ನ ಪತಿ ನನ್ನನ್ನು ರಕ್ಷಿಸಲಿಲ್ಲ ಎಂದು ನೊಂದ ಮಹಿಳೆ ತನ್ನ ಪರಿಸ್ಥಿತಿಯನ್ನು ವಿವರಿಸಿದರು.
ಒಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದ ನನ್ನ ಸೊಸೆ ಮೇಲೆ ಚಿನ್ನದ ಸರ ಕಳವು ಆರೋಪ ಹೊರಿಸಿ ತೊಂದರೆ ಕೊಟ್ಟರು. ಅವಳಂತೆ ಇನ್ನೂ ಹಲವರು ವಿವಿಧ ರೀತಿಯ ತೊಂದರೆ ಅನುಭವಿಸುತ್ತಿರುವುದರಿಂದ ಅದಕ್ಕೆ ಅಂತ್ಯ ಹಾಡಬೇಕೆಂದು ಬೋಗಾದಿಯ ಗಿರಿಜಮ್ಮ ಕೇಳಿಕೊಂಡರು.

ಮನೆ ಕೆಲಸಗಾರರಿಗೆ ಇಎಸ್‍ಐ, ಪಿಎಫ್, ರಜಾ ಸೌಲಭ್ಯ ಕೊಡಿಸಬೇಕು ಎಂದು ನಂಜನಗೂಡಿನ ಕಾಮಾಕ್ಷಿ ಅವರು ಬೇಡಿಕೆ ಇಟ್ಟರೆ, ಮಹದೇವಮ್ಮ ಎಂಬುವರಿಗೆ ಮನೆ ಭೋಗ್ಯಕ್ಕೆ ಕೊಡಿಸಿ 3 ವರ್ಷ ದುಡಿಸಿಕೊಂಡ ಮನೆ ಮಾಲೀಕರು, ಸಂಬಳ ಕೊಡದೆ ಮನೆಯನ್ನೂ ಖಾಲಿ ಮಾಡಿಸಿದ್ದರು. ಕಡೆಗೆ ಯೂನಿಯನ್ ಪದಾಧಿಕಾರಿಗಳು ಹೋಗಿ 60,000 ರೂ. ಹಣ ಕೊಡಿಸಬೇಕಾಯಿತು ಎಂದು ಚಾಮರಾಜ ನಗರದ ಶೋಭಾ ತಿಳಿಸಿದರು.
ಹೀಗೆ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ ಆಗಮಿಸಿದ್ದ 150 ಮಂದಿ ಗೃಹ ಕಾರ್ಮಿಕರು ತಮ್ಮ ನೋವುಗಳನ್ನು ವ್ಯಕ್ತಪಡಿಸಿ ತಮಗೆ ಸೇವಾ ಭದ್ರತೆ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.

ಅಹವಾಲು ಆಲಿಸಿದ ತೀರ್ಪುಗಾರರಾದ ಸ್ತ್ರೀ ಜಾಗೃತಿ ಸಮಿತಿ ನಿರ್ದೇಶಕಿ ಗೀತಾ ಮೆನನ್, ವಕೀಲ ವಿನಯ್ ಶ್ರೀನಿವಾಸ ಹಾಗೂ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಅವರು ಸಮಗ್ರ ವರದಿಯನ್ನು ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ತಮ್ಮಣ್ಣ ಅವರಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಲ್ಲಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರಾಧ, ವಕೀಲ ಸಿ.ಜವರಯ್ಯ, ಆರ್‍ಎಲ್‍ಹೆಚ್‍ಪಿ ನಿರ್ದೇಶಕಿ ಸರಸ್ವತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »