ಮೈಸೂರು: ಹೆಲ್ಮೆಟ್ ಧರಿಸಿ-ಪ್ರಾಣ ಉಳಿಸಿ, ವೇಗದ ತಾಕತ್ತು- ಜೀವಕ್ಕೆ ಆಪತ್ತು, ಮದ್ಯಪಾನ ಚಾಲನೆ- ಜೀವನದ ಅಂತಿಮ ಚಲನೆ ಎಂಬಿತ್ಯಾದಿ ಘೋಷ ವಾಕ್ಯದ ಫಲಕ ಹಿಡಿದ ನೂರಾರು ವಿದ್ಯಾರ್ಥಿಗಳು, ಲಯನ್ಸ್ ಸಂಸ್ಥೆಯ ಸದಸ್ಯರು ಶುಕ್ರವಾರ ಮೈಸೂರಿನಲ್ಲಿ ಅಪರಾಧ ತಡೆ ಕುರಿತು ಜನಜಾಗೃತಿ ಮೂಡಿಸಿದರು.
ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಮೈಸೂರು ನಗರ ಸಂಚಾರಿ ಪೊಲೀಸ್ ಹಾಗೂ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಡಿಸಿಪಿ ವಿಕ್ರಂ ಅಮ್ಟೆ ಮೈಸೂರಿನ ಕೋಟೆ ಆಂಜ ನೇಯಸ್ವಾಮಿ ದೇವಸ್ಥಾನದ ಬಳಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
ಅಲ್ಲಿಂದ ಹೊರಟ ಜಾಥಾ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ನೆಹರು ವೃತ್ತ, ಅಶೋಕ ರಸ್ತೆ ಮೂಲಕ ತೆರಳಿ ಡಾ.ರಾಜ್‍ಕುಮಾರ್ ಉದ್ಯಾನದ ವರೆಗೆ ಸಾಗಿತು. ಜಾಥಾದ ಉದ್ದಕ್ಕೂ ಸಾರ್ವಜ ನಿಕರಿಗೆ ಅಪರಾಧ ತಡೆ ಕುರಿತ ಕರಪತ್ರ ವಿತರಿಸಿ, ಸಂಚಾರಿ ನಿಯಮಗಳ ಬಗ್ಗೆ ಅರಿವು ಉಂಟು ಮಾಡಲಾಯಿತು.
ಸದ್ವಿದ್ಯಾ, ಮರಿಮಲ್ಲಪ್ಪ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎಸಿಪಿ (ಸಂಚಾರ) ಜಿ.ಎನ್.ಮೋಹನ್, ದೇವ ರಾಜ ಸಂಚಾರ ವಿಭಾಗದ ಇನ್ಸ್‍ಪೆಕ್ಟರ್ ಎಲ್.ಶ್ರೀನಿ ವಾಸ್, ಲಯನ್ಸ್ ಗೌರ್ನರ್ ವಿ.ರೇಣುಕುಮಾರ್, ಉಪ ಗೌರ್ನರ್ ನಾಗರಾಜ ಬೈರಿ, ಸಂಸ್ಥೆಯ ಪದಾಧಿಕಾರಿಗಳಾದ ಜಿ.ಮೋಹನ್, ದ್ವಾರಕಾ ನಾಥ್, ಕೆ.ಈಶ್ವರನ್, ಎನ್.ಜಯರಾಮು, ಶ್ರೀನಿವಾಸ್, ಡಿ.ಟಿ.ಪ್ರಕಾಶ್, ಟಿ.ಎಸ್.ರವೀಂದ್ರ ನಾಥ್ ಇನ್ನಿತರರು ಭಾಗವಹಿಸಿದ್ದರು.