ಮಸಾಜ್ ನೆಪದಲ್ಲಿ ಗ್ರಾಹಕರ ಆಭರಣ ಎಗರಿಸುತ್ತಿದ್ದ ಕೇರಳ ವ್ಯಕ್ತಿ ಬಂಧನ
ಮೈಸೂರು

ಮಸಾಜ್ ನೆಪದಲ್ಲಿ ಗ್ರಾಹಕರ ಆಭರಣ ಎಗರಿಸುತ್ತಿದ್ದ ಕೇರಳ ವ್ಯಕ್ತಿ ಬಂಧನ

December 29, 2018

ಮೈಸೂರು: ಗ್ರಾಹಕ ರನ್ನು ತಾನು ತಂಗಿದ್ದ ಲಾಡ್ಜ್‍ಗೆ ಕರೆಸಿ ಕೊಂಡು ಮಸಾಜ್ ಮಾಡುವ ನೆಪ ದಲ್ಲಿ ಮತ್ತು ಬರುವ ಪಾನೀಯ ಕುಡಿಸಿ ಅವರಿಂದ ಚಿನ್ನಾಭರಣ ಎಗರಿಸುತ್ತಿದ್ದ ಕೇರಳದ ನಯವಂಚಕನನ್ನು ಲಷ್ಕರ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಮಲಪುರಂ ಜಿಲ್ಲೆ, ಪೆರಿಂತಲ್ ಮನ್ನಾ ತಾಲೂಕಿನ ಆನಮಂಗಾಡ್ ಗ್ರಾಮದ ಲೇಟ್ ವಾಸುದೇವನ್ ಅವರ ಮಗ ಕೆ.ಪಿ. ಸುಮೇಶ್ ಅಲಿಯಾಸ್ ಧರ್ಮರಾಜ್ ಬಂಧಿತ ಆರೋಪಿಯಾಗಿದ್ದು, ಆತನಿಂದ 6.10 ಲಕ್ಷ ರೂ. ಮೌಲ್ಯದ 203 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು, ಬೆಂಗಳೂರು, ಮಂಡ್ಯ ಮತ್ತು ಕೋಲಾರಗಳಲ್ಲಿ ಲಾಡ್ಜ್‍ಗಳಲ್ಲಿ ಕೊಠಡಿ ಬಾಡಿಗೆಗೆ ಪಡೆದು ವಾಸ್ತವ್ಯ ಹೂಡುತ್ತಿದ್ದೆ. ಮೊಬೈಲ್ ಅಪ್ಲಿಕೇಷನ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಉಚಿತವಾಗಿ ಮಸಾಜ್ ಮಾಡುವುದಾಗಿ ನಂಬಿಸಿ ತನ್ನ ಕೊಠಡಿಗೆ ಕರೆಸಿಕೊಳ್ಳುತ್ತಿದ್ದ. ಗ್ರಾಹಕರಿಗೆ ಮತ್ತು ಬರುವ ಪಾನೀಯ ಕುಡಿಸಿ ಅವರು ನಿದ್ರೆಗೆ ಜಾರುತ್ತಿದ್ದಂತೆಯೇ ಅವರ ಮೈಮೇಲಿದ್ದ ಚಿನ್ನದ ಆಭರಣಗಳು ಹಾಗೂ ಹಣ ಕಸಿದುಕೊಳ್ಳುತ್ತಿದ್ದೆ ಎಂಬುದನ್ನು ಸುಮೇಶ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಆರೋಪಿ ಬಂಧನದಿಂದ ಮೈಸೂರಿನ ಲಷ್ಕರ್ ಠಾಣೆಯಲ್ಲಿ 3, ಹಾಸನದಲ್ಲಿ 2, ಬೆಂಗಳೂರಲ್ಲಿ 3, ಮಂಡ್ಯದಲ್ಲಿ 1 ಹಾಗೂ ಕೋಲಾರದಲ್ಲಿ 1 ಸೇರಿ ಒಟ್ಟು 10 ಪ್ರಕರಣಗಳು ಪತ್ತೆಯಾದಂತಾಗಿದೆ.

ದೇವರಾಜ ಉಪ ವಿಭಾಗದ ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ನಡೆದ ಪತ್ತೆ ಕಾರ್ಯದಲ್ಲಿ ಲಷ್ಕರ್ ಠಾಣೆ ಇನ್ಸ್ ಪೆಕ್ಟರ್ ಹೆಚ್.ಆರ್. ವಿವೇಕಾನಂದ, ಸಬ್ ಇನ್ಸ್‍ಪೆಕ್ಟರ್ ಪೂಜಾ ಎಸ್.ಹತ್ತರಕಿ, ಸಿಬ್ಬಂದಿ ಗಳಾದ ಪರಶಿವಮೂರ್ತಿ, ಲೋಕೇಶ್ ಆದಂ, ವಿಜಯಕುಮಾರ್, ಲಿಂಗರಾಜು, ಪ್ರದೀಪ್ ಹಾಗೂ ಶಿವರಾಜು ಅವರು ಪಾಲ್ಗೊಂಡಿದ್ದರು.

Translate »