ಗ್ರಾಮಸ್ಥರ ವಿರೋಧದ ನಡುವೆಯೂ ಅಕ್ರಮ ಮದ್ಯದಂಗಡಿ ತೆರೆಯುವ ಯತ್ನ ಆರೋಪ
ಮೈಸೂರು

ಗ್ರಾಮಸ್ಥರ ವಿರೋಧದ ನಡುವೆಯೂ ಅಕ್ರಮ ಮದ್ಯದಂಗಡಿ ತೆರೆಯುವ ಯತ್ನ ಆರೋಪ

December 29, 2018

ಮೈಸೂರು: ನಂಜನಗೂಡು ತಾಲೂಕಿನ ಕೂಡ್ಲಾ ಪುರ ಗ್ರಾಮ ಪಂಚಾಯ್ತಿಗೆ ಸೇರಿದ ಹುಣಸನಾಳು ಗ್ರಾಮದ ಬಳಿ ಗ್ರಾಮಸ್ಥರ ವಿರೋಧದ ನಡುವೆಯೂ ಅಕ್ರಮ ಮದ್ಯ ದಂಗಡಿ ತೆರೆಯಲಾಗುತ್ತಿದ್ದು, ಇದನ್ನು ವಿರೋಧಿಸಿದವರು ಹಾಗೂ ಚಳುವಳಿಗಾರರನ್ನು ಪೊಲೀಸ್ ಬಲ ಪ್ರಯೋಗಿಸಿ ಸುಳ್ಳು ದೂರು ದಾಖಲಿಸುತ್ತಿದ್ದಾರೆ. ಹೀಗಾಗಿ ನಮಗೆ ಗ್ರಾಮದಲ್ಲಿರಲು ಸಾಧ್ಯವಾಗದೇ ಪೊಲೀಸರ ಭಯದಿಂದ ಕಾಲ ಕಳೆಯುವಂತಾಗಿದೆ ಎಂದು ಕೂಡ್ಲಾಪುರ ಗ್ರಾ.ಪಂ. ಅಧ್ಯಕ್ಷ ಸಿದ್ದರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ಹುಣಸವಾಳು ಗ್ರಾಮದ ಬಳಿ ಮದ್ಯದಂಗಡಿ ತೆರೆಯದಂತೆ ಕಳೆದ ಡಿ.2ರಂದು ಗ್ರಾಮಸ್ಥರು, ರೈತ ಸಂಘಟನೆ, ಹಲವು ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾಗ್ಯೂ, ಮದ್ಯದಂಗಡಿ ತೆರೆಯುವ ಪ್ರಯತ್ನ ನಡೆದಿದೆ ಎಂದು ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೂಡ್ಲಾಪುರವನ್ನು ಈಗಾಗಲೇ ಮದ್ಯಪಾನ ಮುಕ್ತ ಗ್ರಾಮವೆಂದು ಗುರುತಿಸಿದ್ದು, ಇಲ್ಲಿ ಮತ್ತೆ ಮದ್ಯದಂಗಡಿ ತೆರೆಯುವುದು ಎಷ್ಟು ಸರಿ? ಮತ್ತು ಮದ್ಯಪಾನ ಮಾಡಿದರೆ 5 ಸಾವಿರ ರೂ. ದಂಡ ವಿಧಿಸುವ ಸ್ವಯಂ ನಿರ್ಬಂಧ ವಿಧಿಸಿಕೊಂಡು ಬಂದಿದ್ದೇವೆ. ಈಗಾಗಲೇ ನಂಜನಗೂಡಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮದ್ಯದಂಗಡಿಯನ್ನು ಅತಿ ಹೆಚ್ಚು ಹಿಂದುಳಿದವರೇ ಇರುವ ಗ್ರಾಮೀಣ ಪ್ರದೇಶದಲ್ಲಿ ತೆರೆಯುವುದು ಸರಿಯೇ? ಎಂದು ಪ್ರಶ್ನಿಸಿದರು.

ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಕೂಡ ಮದ್ಯದಂಗಡಿ ತೆರೆಯಲು ಅವಕಾಶ ನೀಡದಂತೆ ಪತ್ರ ನೀಡಿದ್ದಾರೆ. ಅಕ್ರಮ ಅಂಗಡಿ ತೆರವಿಗೆ ತಹಶೀಲ್ದಾರ್ ಸಹ ಆದೇಶಿಸಿದ್ದಾರೆ. ಆದರೂ ಅದನ್ನು ತೆರವುಗೊಳಿಸಿಲ್ಲ. ಡಿ.21ರಂದು ಚಳವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ ಚಳವಳಿಗಾರರಾದ ಗ್ರಾಪಂ ಸದಸ್ಯ ಸಿದ್ದರಾಜು, ಕೇಬಲ್ ಸಿದ್ದರಾಜು, ಬೆಳ್ಳಶೆಟ್ಟಿ ಎಂಬುವರ ಮೇಲೆ ಅಕ್ರಮ ಮದ್ಯದಂಗಡಿ ಮಾಲೀಕ ರಾಜಶೇಖರ್ ಕುಮ್ಮಕ್ಕಿನಿಂದ ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಹೇಳಿದರು.

ನೂರಾರು ಚಳವಳಿಗಾರರು ಪ್ರತಿಭಟನೆಯಲ್ಲಿ ಇದ್ದರು, ಪೊಲೀಸ್ ಸಹ ಅಂದು ಹಾಜರಿದ್ದರು. ಹಾಗಾಗಿ ನಮ್ಮ ಮೇಲೆ ಹಲ್ಲೆ ಯತ್ನದ ದೂರು ನೀಡಲಾಗಿದೆ. ಗ್ರಾಮದ ಮುಖ್ಯಸ್ಥರಾದ ನಮ್ಮನ್ನು ಹೆದರಿಸುವ, ಹಲ್ಲೆ ಮಾಡುವ ಪ್ರಯತ್ನ ನಡೆಯುತ್ತಿದೆ. ಪೊಲೀಸರು ನಮ್ಮ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದರು.

ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ, ಅಬಕಾರಿ ಉಪಆಯು ಕ್ತರು, ನಂಜನಗೂಡು ವಲಯ ಅಬಕಾರಿ ನಿರೀಕ್ಷಕರು, ತಾಲೂಕು ತಹಶೀಲ್ದಾರ್ ಹಾಗೂ ಇನ್ನಿತರರರಿಗೆ ಮನವಿಯನ್ನು ಸಲ್ಲಿಸಲಾ ಗಿದೆ ಎಂದರು. ನ್ಯಾಯಾಲಯದ ತಡೆಯಾಜ್ಞೆಯನ್ನೂ ಮೀರಿ ಡಿ.12ರಂದು ಬೆಳಿಗ್ಗೆ 6 ಗಂಟೆಗೆ ಅಂಗಡಿ ತೆರೆಯಲಾಗುತ್ತಿತ್ತು. ಅದನ್ನು ವಿರೋ ಧಿಸ ಬೇಕಾಯಿತು. ಸದರಿ ಜಾಗದ ಪಕ್ಕದಲ್ಲಿ ಶಾಲೆ ತೆರೆಯಲು ಗ್ರಾಮ ಪಂಚಾಯ್ತಿ ಪರವಾನಗಿ ಸಹ ನೀಡಲಾಗಿದೆ. ಆದ್ದರಿಂದ ಗ್ರಾಮವನ್ನು ಮದ್ಯಪಾನ ಮುಕ್ತ ಗ್ರಾಮವನ್ನಾಗಿ ಉಳಿಸುವ ನಿಟ್ಟಿನಲ್ಲಿ ಮದ್ಯದಂಗಡಿ ಮಾಲೀಕನ ಗೂಂಡಾಗಳಿಂದ ನಮ್ಮನ್ನು ರಕ್ಷಿಸ ಬೇಕು. ಪೊಲೀಸರ ಏಕಪಕ್ಷೀಯ ವರ್ತನೆಯನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಪಂ ಸದಸ್ಯ ರಾದ ಹುಣಸವಾಳು ಸಿದ್ದರಾಜು, ಸಿದ್ದಮ್ಮ, ಮಹದೇವಮ್ಮ, ತಾಪಂ ಸದಸ್ಯರಾದ ಜಯಲಕ್ಷ್ಮಿ ಶಿವಣ್ಣ ಉಪಸ್ಥಿತರಿದ್ದರು.

Translate »