ಚಿದಂಬರಂ ಆ.26ರವರೆಗೆ ಸಿಬಿಐ ವಶಕ್ಕೆ
ಮೈಸೂರು

ಚಿದಂಬರಂ ಆ.26ರವರೆಗೆ ಸಿಬಿಐ ವಶಕ್ಕೆ

August 23, 2019

ನವದೆಹಲಿ.ಆ.22-ಐಎನ್‍ಎಕ್ಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುಧವಾರ ರಾತ್ರಿ ಸಿಬಿಐನಿಂದ ಬಂಧಿಸಲ್ಪಟ್ಟ ಕೇಂದ್ರದ ಮಾಜಿ ಗೃಹ ಹಾಗೂ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನು ಆ.26ರವರೆಗೆ ಸಿಬಿಐ ವಶಕ್ಕೆ ನೀಡಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಬುಧವಾರ ರಾತ್ರಿ ಬಂಧಿಸಲ್ಪಟ್ಟ ಪಿ.ಚಿದಂಬರಂ ಅವರನ್ನು ಇಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಅಜಯ್ ಕುಮಾರ್ ಅವರ ಮುಂದೆ ಹಾಜರು ಪಡಿಸಲಾಯಿತು. ಈ ವೇಳೆ ಸಿಬಿಐ ಪರ ವಾದ ಮಂಡಿಸಿದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಪಿ.ಚಿದಂಬರಂ ಅವರು ಐಎನ್‍ಎಕ್ಸ್ ಸಮೂಹ ಸಂಸ್ಥೆಗೆ ನ್ಯಾಯವಲ್ಲದ ರೀತಿಯಲ್ಲಿ ಲಾಭ ಮಾಡಿಕೊಟ್ಟಿದ್ದಾರೆ. ಅವರ ಮಗ ಕಾರ್ತಿ ಚಿದಂಬರಂ ಅವರ ಸಂಪರ್ಕದಲ್ಲಿದ್ದ ಕಂಪನಿಗಳಿಗೆ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ. ಅಂದು ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಐಎನ್‍ಎಕ್ಸ್ ಮೀಡಿಯಾ ಹಗರಣದಲ್ಲಿ ಇತರರ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಅವರು ಸಿಬಿಐನ ತನಿಖೆಗೂ ಸರಿಯಾಗಿ ಸಹಕರಿಸುತ್ತಿಲ್ಲ. ಯಾವುದೇ ಪ್ರಶ್ನೆಗೂ ಪ್ರತಿಕ್ರಿಯಿಸದೇ ಮೌನ ವಹಿಸಿದ್ದಾರೆ. ಚಿದಂಬರಂ ಅವರ ಜೊತೆಗೆ ಪ್ರಕರಣದ ಇತರ ಆರೋಪಿಗಳನ್ನೂ ವಿಚಾರಣೆಗೊಳಪಡಿಸಬೇಕಾಗಿದೆ. ಆದ್ದರಿಂದ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಚಿದಂಬರಂ ಪರ ವಕೀಲ ಕಪಿಲ್ ಸಿಬಲ್, ಐಎನ್‍ಎಕ್ಸ್ ಮೀಡಿಯಾ ಹಗರಣದ ಆರೋಪಿ ಕಾರ್ತಿ ಚಿದಂಬರಂ ಅವರಿಗೆ 2018ರ ಮಾರ್ಚ್‍ನಲ್ಲಿ ದೆಹಲಿ ಹೈ ಕೋರ್ಟ್ ರೆಗ್ಯುಲರ್ ಬೇಲ್ ನೀಡಿದೆ. ಅಲ್ಲದೇ, ಈ ಪ್ರಕರಣದ ಇನ್ನಿತರ ಆರೋಪಿಗಳಾದ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಅವರಿಗೂ ಕೂಡಾ ಡಿಫಾಲ್ಟ್ ಬೇಲ್ ನೀಡಲಾಗಿದೆ. ಚಿದಂಬರಂ ಅವರು ಯಾವತ್ತು ವಿಚಾರಣೆಯನ್ನು ತಪ್ಪಿಸಿಕೊಂಡಿಲ್ಲ. ಅಲ್ಲದೇ ಈ ಪ್ರಕರಣದಲ್ಲಿ ಕರಡು ಚಾರ್ಜ್ ಶೀಟ್ ಕೂಡಾ ಈಗಾಗಲೇ ಸಿದ್ಧವಾಗಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯ ಒಟ್ಟು ಆರು ಸದಸ್ಯರು ಸೇರಿ ಅನುಮೋದನೆ ನೀಡಿದ್ದು, ಅವರ್ಯಾರು ಬಂಧಿಸಲ್ಪಟ್ಟಿಲ್ಲ. ಇದು ದಾಖಲೆಗಳನ್ನೊಳಗೊಂಡ ಪ್ರಕರಣವಾಗಿದೆ. ಚಿದಂಬರಂ ಅವರು, ಕಳೆದ 24 ಗಂಟೆಯಿಂದ ನಿದ್ದೆ ಮಾಡಿಲ್ಲ. ನಿನ್ನೆ ರಾತ್ರಿ ಅವರನ್ನು ಬಂಧಿಸಲಾಯಿತು. ಇಂದು ಬೆಳಿಗ್ಗೆ 12 ಗಂಟೆಯಲ್ಲಿ ಅವರನ್ನು ಒಂದು ಬಾರಿ ವಿಚಾರಣೆ ನಡೆಸಲಾಯಿತು. ಅವರಿಗೆ 12 ಪ್ರಶ್ನೆಗಳನ್ನು ಕೇಳಲಾಯಿತು. ಆ ಪ್ರಶ್ನೆಗಳು ಯಾವುದು ಚಿದಂಬರಂ ಅವರಿಗೆ ಸಂಬಂಧಿಸಿದ ಪ್ರಶ್ನೆಗಳಲ್ಲ. ಸಿಬಿಐ ಚಿದಂಬರಂ ಅವರನ್ನು ಬಂಧಿಸುವ ಬದಲು ಅವರ ವಶದಲ್ಲಿದೆ ಎನ್ನಲಾದ ದಾಖಲೆಗಳನ್ನು ನೀಡುವಂತೆ ಪತ್ರ ಬರೆಯಬಹುದಾಗಿತ್ತು ಎಂದು ವಾದಿಸಿದರಲ್ಲದೇ, ಚಿದಂಬರಂ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.

ಚಿದಂಬರಂ ಪರವಾಗಿ ವಾದ ಮಂಡಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು, ಸಿಬಿಐ ಇಡೀ ಪ್ರಕರಣವನ್ನು ಇಂದ್ರಾಣಿ ಮುಖರ್ಜಿ ನೀಡಿರುವ ಸಾಕ್ಷಿ ಮತ್ತು ಡೈರಿಯನ್ನಾಧರಿಸಿ ತನಿಖೆ ನಡೆಸುತ್ತಿದೆ. ಈಗ ಇಂದ್ರಾಣಿ ಮುಖರ್ಜಿ ಸಹಕಾರ ನೀಡುತ್ತಿದ್ದಾರೆ ಎಂದು ಹೇಳುತ್ತಿದೆ. ನಿಜಕ್ಕೂ ಸಹಕಾರ ಎಂದರೆ ಏನು? ತನಿಖಾ ಸಂಸ್ಥೆ ಒಂದು ಆರೋಪಿಯನ್ನು 5 ಬಾರಿ ವಿಚಾರಣೆಗೆ ಕರೆಯುತ್ತಾರೆ. ಆದರೆ ಆತ ಹೋಗುವುದಿಲ್ಲ. ಅದನ್ನು ಸಹಕಾರ ಎಂದಾದರೆ, ಚಿದಂಬರಂ ಅವರನ್ನು ಒಂದು ಸಲ ಮಾತ್ರ ಸಿಬಿಐ ವಿಚಾರಣೆಗೆ ಕರೆದಿದೆ. ಅವರು ಹೋಗಿ ವಿಚಾರಣೆ ಎದುರಿಸಿದ್ದಾರೆ. ಹೀಗಿರುವಾಗ ಅವರು ತನಿಖೆಗೆ ಅಸಹಕಾರ ನೀಡುತ್ತಿದ್ದಾರೆ ಎಂಬ ಪ್ರಶ್ನೆ ಹೇಗೆ ಉದ್ಭವವಾಗುತ್ತದೆ ಎಂದು ವಾದಿಸಿದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಸಂಜೆ 5.30ಕ್ಕೆ ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿದರು. ಆದಕ್ಕೂ ಮೊದಲು ಚಿದಂಬರಂ ಅವರ ಹೇಳಿಕೆಗೂ ಅವಕಾಶ ನೀಡಲಾಯಿತು. ಅದಾದ ಸುಮಾರು ಒಂದು ತಾಸಿನ ಬಳಿಕ ತಮ್ಮ ಆದೇಶ ನೀಡಿದ ನ್ಯಾಯಮೂರ್ತಿಗಳು ಆ.26ರ ವರೆಗೆ ಚಿದಂಬರಂ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಸಿಬಿಐ ವಶಕ್ಕೆ ನೀಡಿದರು. ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡರು.

Translate »