ತಿಹಾರ್ ಜೈಲಲ್ಲಿ ಚಿದಂಬರಂ ವಾಕಿಂಗ್, ಧಾರ್ಮಿಕ ಗ್ರಂಥ ಓದಿ ಗಂಜಿ ಸೇವನೆ, ನೆಲವೇ ಹಾಸಿಗೆ
ಮೈಸೂರು

ತಿಹಾರ್ ಜೈಲಲ್ಲಿ ಚಿದಂಬರಂ ವಾಕಿಂಗ್, ಧಾರ್ಮಿಕ ಗ್ರಂಥ ಓದಿ ಗಂಜಿ ಸೇವನೆ, ನೆಲವೇ ಹಾಸಿಗೆ

September 8, 2019

ನವದೆಹಲಿ,ಸೆ.7- ಐಎನ್‍ಎಕ್ಸ್ ಮೀಡಿಯಾ ಪ್ರಕರಣ ದಲ್ಲಿ ತಿಹಾರ್ ಜೈಲು ಸೇರಿರುವ ಮಾಜಿ ಹಣಕಾಸು ಹಾಗೂ ಗೃಹ ಸಚಿವ ಪಿ.ಚಿದಂಬರಂ ರಾತ್ರಿಯನ್ನು ನೆಲದ ಮೇಲೆ ಮಲಗಿ ಕಳೆಯುತ್ತಿದ್ದಾರೆ. ಗುರುವಾರ ಕೋರ್ಟ್‍ನಿಂದ ಜೈಲಿಗೆ ತೆರಳುವಷ್ಟರಲ್ಲಿ ರಾತ್ರಿಯಾಗಿದ್ದರಿಂದ ರೋಟಿ, ದಾಲ್, ಪಲ್ಯ, ಅನ್ನ ಸೇವಿಸಿದ ಅವರು ಬಳಿಕ ಬೆಡ್‍ಶೀಟ್, ದಿಂಬು ಪಡೆದು ನೆಲದಲ್ಲೇ ಮಲಗಿದ್ದರು. ಶುಕ್ರವಾರ ಬೆಳಿಗ್ಗೆ ಬೇಗನೆ ಎದ್ದು ವಾಕಿಂಗ್ ಮಾಡಿದ ಬಳಿಕ ಕೆಲ ಧಾರ್ಮಿಕ ಗ್ರಂಥಗಳನ್ನು ಓದಿದರು. 6 ಗಂಟೆಗೆ ಟೀ, ಗಂಜಿ ಮತ್ತು ಹಾಲು ಕುಡಿದರು.

ಇದೇ ಪರಿಪಾಠ ಶನಿವಾರವೂ ಮುಂದುವರಿದಿದೆ. ನ್ಯಾಯಾಲಯದ ಆದೇಶದಂತೆ ಚಿದಂಬರಂಗೆ ತಿಹಾರ್ ಜೈಲಿನಲ್ಲಿ ಪಾಶ್ಚಾತ್ಯ ಮಾದರಿ ಶೌಚಗೃಹದ ವ್ಯವಸ್ಥೆ ಇರುವ ಪ್ರತ್ಯೇಕ ಕೊಠಡಿ ನೀಡಲಾಗಿದೆ. ಅವರ ಕನ್ನಡಕ ಮತ್ತು ಔಷಧ ಒಯ್ಯಲು ಅನುಮತಿಸಿದೆ. ಚಿದಂಬರಂ ಇತರ ಕೈದಿಗಳಂತೆ ಜೈಲಿನಲ್ಲಿರುವ ಗ್ರಂಥಾಲಯಕ್ಕೆ ತೆರಳ ಬಹುದಾಗಿದೆ. ಮತ್ತು ನಿಶ್ಚಿತ ಅವಧಿಗೆ ಟಿವಿ ನೋಡಲು ಅವಕಾಶವಿದೆ. ಕಳೆದ ವರ್ಷ ಚಿದಂಬರಂ ಪುತ್ರ ಕಾರ್ತಿ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲೇ ಇದೇ ಕೊಠಡಿ ಯಲ್ಲಿ 12 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.

ಚಿದಂಬರಂಗೆ 400 ಪ್ರಶ್ನೆ: ಅ.21ರಂದು ಸಿಬಿಐ ಬಂಧನ ಕ್ಕೊಳಗಾದ ಚಿದಂಬರಂಗೆ 15 ದಿನಗಳ ಅವಧಿಯಲ್ಲಿ ಸಿಬಿಐ ಅಧಿಕಾರಿಗಳು 400 ಪ್ರಶ್ನೆ ಕೇಳಿದ್ದಾರೆ. ಐಎನ್‍ಎಕ್ಸ್ ಮೀಡಿಯಾ ಹಗರಣ ಸಂಬಂಧ ಐವರು ಸಾಕ್ಷಿಗಳನ್ನು ಎದುರಿಸಿದ್ದಾರೆ. ಎಫ್‍ಐಪಿಬಿಯಿಂದ ನೀಡಿದ ಸಮ್ಮತಿ ಮತ್ತು ಹಗರಣಕ್ಕೆ ಸಂಬಂಧಿಸಿದಂತೆ 400 ಪ್ರಶ್ನೆಗಳನ್ನು ಕೇಳಲಾಗಿದೆ. ಇವುಗಳಲ್ಲಿ ಹೆಚ್ಚಿನವು ಕಾರ್ತಿ ಚಿದಂಬರಂಗೆ ಸಂಬಂಧಿಸಿದ್ದಾಗಿದೆ. ಕಾರ್ತಿ ಮತ್ತು ಚೆಸ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್, ಅಡ್ವಾಂಟೇಜ್ ಸ್ಟ್ರಾಟೆ ಜಿಕ್ ಕನ್ಸಲ್ಟಿಂಗ್ ನಡುವಿನ ಸಂಬಂಧ. ಐಎನ್‍ಎಕ್ಸ್ ಮೀಡಿಯಾದ ಸಹಸಂಸ್ಥಾಪಕರಾದ ಇಂದ್ರಾಣಿ ಮುಖರ್ಜಿ ಮತ್ತು ಪೀಟರ್ ಮುಖರ್ಜಿ ಜತೆಗೆ ಕಾರ್ತಿ ಡೀಲ್ ಮುಂತಾ ದವುಗಳ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳಿದ್ದವು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಚಿದಂಬರಂ ಸಮಯ ವ್ಯರ್ಥ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ. ವಿದೇಶಿ ಹೂಡಿಕೆ ಪ್ರಚಾರ ಮಂಡಳಿ (ಎಫ್‍ಐಪಿಬಿ) ಬಗ್ಗೆ ಕೇಳಿದ ಪ್ರಶ್ನೆ ಗಳಿಗೆ ಉತ್ತರಿಸಲು ಗಂಟೆಗಟ್ಟಲೆ ಸಮಯ ತೆಗೆದು ಕೊಂಡರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜೈಲಿನ ದಿನಚರಿ
ತಿಹಾರ್ ಜೈಲಿನಲ್ಲಿರುವ ಕೈದಿಗಳು ವಾರದಲ್ಲಿ 2 ಬಾರಿ ಗರಿಷ್ಠ 10 ಜನರನ್ನು (ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ರವರೆಗೆ) ಭೇಟಿಯಾಗಬಹುದು. ಮಧ್ಯಾಹ್ನ 11.30ಕ್ಕೆ ಊಟ ನೀಡಲಾಗುತ್ತದೆ. ಇದರಲ್ಲಿ ದಾಲ್, ಅನ್ನ, ರೊಟ್ಟಿ ಮತ್ತು ಪಲ್ಯ ನೀಡಲಾಗುತ್ತದೆ. ಮಧ್ಯಾಹ್ನ 12.30 ರಿಂದ 3.30 ರವರೆಗೆ ಕೈದಿಗಳು ಜೈಲಿನ ಕೊಠಡಿಯಲ್ಲೇ ಉಳಿಯಬೇಕು. ನಂತರ ಗ್ರಂಥಾ ಲಯಕ್ಕೆ ತೆರಳುವ ಮತ್ತು ಇತರ ಕೈದಿಗಳೊಂದಿಗೆ ಸಂಭಾಷಣೆ ನಡೆಸುವ ಅವಕಾಶ ಇದೆ. ಸಂಜೆ 6.45ಕ್ಕೆ ರಾತ್ರಿ ಊಟ ನೀಡಲಾಗುತ್ತದೆ. ಚಿದಂಬರಂಗೆ ರಾತ್ರಿ 9 ಗಂಟೆವರೆಗೆ ಟಿವಿ ನೋಡುವ ಅವಕಾಶವಿದೆ.

Translate »