ಬೆಂಗಳೂರು, ಆ.17(ಕೆಎಂಶಿ)-ಅನ್ನಭಾಗ್ಯ ಸೇರಿದಂತೆ ಯಾವುದೇ ಜನಪರ ಯೋಜನೆಗಳನ್ನು ರದ್ದುಪಡಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಈ ಸಂಬಂಧ ಮಾಡಿದ ಆರೋಪದ ಬೆನ್ನಲ್ಲೇ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿಯವರು ನಮ್ಮ ಸರ್ಕಾರ ಜನಪರ ಸರ್ಕಾರ. ಅನ್ನಭಾಗ್ಯ ಯೋಜನೆ ಮುಂದುವರಿಸಲು ಅನುದಾನ ಬಿಡುಗಡೆ ಕಡತಕ್ಕೆ ಸಹಿ ಹಾಕಿ ದ್ದೇನೆ ಎಂದಿದ್ದಾರೆ. ದೆಹಲಿಯಲ್ಲಿ ಪ್ರತ್ಯೇಕವಾಗಿ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಕರ್ನಾಟಕ ಕಾಂಗ್ರೆಸ್ ಮುಖಂಡರಿಗೆ ತಲೆ ಕೆಟ್ಟಿದೆ. ಮಾಹಿತಿ ಇಲ್ಲದೆ, ಸರ್ಕಾರದ ವಿರುದ್ಧ ಅನಗತ್ಯ ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಸರ್ಕಾರದಿಂದ ಮಾಹಿತಿ ಪಡೆದು, ಹೇಳಿಕೆ ನೀಡಬೇಕೇ ಹೊರತು, ಪ್ರಚಾರಕ್ಕಾಗಿ ಇಲ್ಲದ ಆರೋಪ ಮಾಡಬಾರದು. ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ ಮತ್ತು ಇದಕ್ಕೆ ಪ್ರಧಾನಿಯವರು ಸ್ಪಂದಿಸಿದ್ದಾರೆ.
ಗೃಹ ಸಚಿವ ಅಮಿತ್ ಷಾ ಅವರ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಉನ್ನತ ಮಟ್ಟದ ಸಭೆ ನಡೆದು, ಕರ್ನಾಟಕಕ್ಕೆ ತಾತ್ಕಾಲಿಕ ಪರಿಹಾರ ಘೋಷಣೆ ಮಾಡುತ್ತಾರೆ ಎಂಬ ಆಶಾ ಭಾವನೆ ವ್ಯಕ್ತಪಡಿಸಿದರು. ನೊಂದಿರುವ ಜನತೆಗೆ ರಾಜ್ಯದ ಜನರು ಕೂಡ ಒಂದಲ್ಲ ಒಂದು ರೀತಿ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ 7.17 ಕೋಟಿ ರೂ. ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ ಬಂದಿದೆ. ದೇಶ, ವಿದೇಶ ಮತ್ತು ರಾಜ್ಯದ ಜನತೆ ದೂರದಿಂದಲೇ ಪರಿಹಾರ ಹಣವನ್ನು ಕಳುಹಿಸಿಕೊಡಲು ವಿಧಾನಸೌಧದ ಎಸ್‍ಬಿಐ ಶಾಖೆಯಲ್ಲಿ ಪ್ರತ್ಯೇಕ ಖಾತೆಯನ್ನೇ ತೆರೆಯಲಾಗಿದೆ. ಆಸಕ್ತಿ ಯುಳ್ಳವರು ಖಾತೆ ಸಂಖ್ಯೆ 37887098605, ಐಎಫ್‍ಎಸ್‍ಸಿ ಸಂಖ್ಯೆ: ಎಸ್‍ಬಿಐ ಎನ್0040277, ಎಂಐಸಿಆರ್ ಸಂಖ್ಯೆ: 560002419 ಹಣ ಪಾವತಿಸಬಹುದು. ಖುದ್ದಾಗಿ ಚೆಕ್ ಅಥವಾ ಡಿಡಿ ನೀಡುವವರು ವಿಧಾನಸೌಧದ ಎರಡನೇ ಮಹಡಿ ಯಲ್ಲಿ ಇದಕ್ಕಾಗಿ ಪ್ರತ್ಯೇಕ ಕೊಠಡಿ ತೆರೆದಿದ್ದು, ಅಲ್ಲಿಯೂ ಪಾವತಿಸಬಹುದಾಗಿದೆ.