ಜಂಬೂಸವಾರಿಗೆ ಪ್ರಮೋದಾದೇವಿ ಒಡೆಯರ್ ಆಹ್ವಾನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ
ಮೈಸೂರು

ಜಂಬೂಸವಾರಿಗೆ ಪ್ರಮೋದಾದೇವಿ ಒಡೆಯರ್ ಆಹ್ವಾನಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

September 30, 2019

ಮೈಸೂರು: ಅಂಬಾವಿಲಾಸ ಅರಮನೆಯಲ್ಲಿ ಯದುವಂಶದ ರಾಜಮಾತೆ ಪ್ರಮೋದಾ ದೇವಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಹೂಗುಚ್ಛ ನೀಡಿ, ದಸರಾ ಶುಭಾಶಯ ವಿನಿಮಯ ಮಾಡಿಕೊಂಡರು. ಅಲ್ಲದೇ ಜಂಬೂ ಸವಾರಿ ಕಾರ್ಯ ಕ್ರಮಕ್ಕೆ ರಾಜ ಮನೆತನದವರು ಬರುವಂತೆ ಇದೇ ವೇಳೆ ಆಹ್ವಾನ ನೀಡಿದರು.

ರಾಜ ಮಾತೆ ಪ್ರಮೋದಾ ದೇವಿ ಒಡೆಯರ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಯಡಿಯೂರಪ್ಪ ಅವರು ದಸರಾ ಮಹೋತ್ಸವದಲ್ಲಿ ರಾಜಮನೆತನದ ಕೊಡುಗೆ ಅಪಾರವಾದದ್ದು, ರಾಜಮಾತೆ ಪ್ರಮೋದಾ ದೇವಿ ಅವರ ಜೊತೆ ಸಾಕಷ್ಟು ವಿಚಾರಗಳನ್ನು ಮಾತನಾಡಿದ್ದು, ಜಂಬೂಸವಾರಿಯ ದಿವಸ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಯದುವೀರ್ ಒಡೆಯರ್ ಅವರನ್ನು ಕಳುಹಿಸಬೇಕು ಎಂದು ರಾಜಮಾತೆಯವರಲ್ಲಿ ತಿಳಿಸಿರುವುದಾಗಿ ಹೇಳಿದರು.

ಈ ಬಾರಿಯ ದಸರಾ ಮಹೋತ್ಸವ ತುಂಬಾ ಉತ್ತಮ ರೀತಿಯಲ್ಲಿ ಮೂಡಿ ಬಂದಿದ್ದು, ಫಲಪುಷ್ಪ ಪ್ರದರ್ಶನ ಹಾಗೂ ದೀಪಾಲಂಕಾರ ಪ್ರವಾಸಿಗರನ್ನು ಆಕರ್ಷಿ ಸುವಲ್ಲಿ ಯಶಸ್ವಿಯಾಗುತ್ತವೆ. ಅದೇ ರೀತಿ ಇಲ್ಲಿನ ಸಚಿವರು, ಶಾಸಕರು ಅಧಿಕಾರಿಗಳ ಜೊತೆ ಉತ್ತಮ ಬಾಂಧವ್ಯದಿಂದ ಕೆಲಸ ಮಾಡಿರುವುದು ಕಂಡು ಬರುತ್ತಿದೆ ಎಂದರು.

Translate »