ಮುಂದಿನ 10 ವರ್ಷಗಳಲ್ಲಿ ರೈಲ್ವೆಗೆ 50 ಲಕ್ಷ ಕೋಟಿ ರೂ. ಹೂಡಿಕೆ: ಉದ್ಯೋಗದಲ್ಲೂ ಹೆಚ್ಚಳ
ಮೈಸೂರು

ಮುಂದಿನ 10 ವರ್ಷಗಳಲ್ಲಿ ರೈಲ್ವೆಗೆ 50 ಲಕ್ಷ ಕೋಟಿ ರೂ. ಹೂಡಿಕೆ: ಉದ್ಯೋಗದಲ್ಲೂ ಹೆಚ್ಚಳ

September 30, 2019

ಮೈಸೂರು, ಸೆ.29(ಪಿಎಂ)- ಮುಂದಿನ 10 ವರ್ಷ ಗಳಲ್ಲಿ ರೈಲ್ವೆ ಇಲಾಖೆ ವಿವಿಧ ಯೋಜನೆಗಳಿಗೆ 50 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದ್ದು, ಇದರಿಂದ ಇಲಾಖೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದ ಯುವ ಜನತೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಮೈಸೂರಿಗೆ ವಿಸ್ತರಿಸಿರುವ ಕೊಚುವೇಲಿ-ಬೆಂಗ ಳೂರು ಎಕ್ಸ್‍ಪ್ರೆಸ್ ರೈಲು ಗಾಡಿ (16316) ಸೇವೆಗೆ ಮೈಸೂರು ರೈಲ್ವೆ ನಿಲ್ದಾಣದ ಆವರಣದಲ್ಲಿ ಭಾನು ವಾರ ಹಮ್ಮಿಕೊಂಡ ಚಾಲನೆ ಹಾಗೂ ಪ್ಲಾಟ್‍ಫಾರಂ 6ರಲ್ಲಿ ಎಸ್ಕಲೇಟರ್ ಮತ್ತು ಕಾಯ್ದಿರಿಸಿದ ವಿಶ್ರಾಂತಿ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

10 ವರ್ಷಗಳಲ್ಲಿ ರೈಲ್ವೆ ಇಲಾಖೆಯಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಹೂಡಿಕೆ ಆಗುವ ಹಿನ್ನೆಲೆಯಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದ ಯುವ ಜನತೆ ಕೇವಲ ಐಎಎಸ್ ಹಾಗೂ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಮಾತ್ರವೇ ಆದ್ಯತೆ ನೀಡದೇ ರೈಲ್ವೆ ಇಲಾ ಖೆಗೂ ತಮ್ಮ ಅಮೂಲ್ಯ ಸೇವೆ ನೀಡಲು ಮುಂದಾಗ ಬೇಕು ಎಂದು ಅವರು ತಿಳಿಸಿದರು.

ಪ್ರತಾಪ್ ಸಿಂಹ ಅವರು ಸಂಸದರಾದ ಬಳಿಕ ಅವರ ಪ್ರಯತ್ನದ ಫಲವಾಗಿ ಮೈಸೂರಿಗೆ ಹೊಸದಾಗಿ ಬರು ತ್ತಿರುವ 7ನೇ ರೈಲು ಕೊಚುವೇಲಿ-ಬೆಂಗಳೂರು ಎಕ್ಸ್‍ಪ್ರೆಸ್. ದೇವರನಾಡು ಎಂದು ಕರೆಯುವ ಕೊಚುವೇಲಿಗೆ ಇಲ್ಲಿಂದ ಹೋಗಲು ಹಾಗೂ ಕೇರಳದ ಭಕ್ತರು ಮೈಸೂರಿನ ಚಾಮುಂಡಿ ದರ್ಶನ ಪಡೆಯಲು ಇದರಿಂದ ಸಾಧ್ಯವಾಗಲಿದೆ. ನಮ್ಮ ಇಲಾಖೆಯಲ್ಲಿ ಪ್ರಯಾಣಿಕರ ಸುರಕ್ಷತೆ, ಸಮಯಪಾಲನೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಜನರಲ್ (ಸಾಮಾನ್ಯ) ಬೋಗಿಗಳಲ್ಲಿ ಈ ಮೊದಲು ಮೂಗು ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ಇತ್ತು. ಆದರೆ ಈಗ ಅಂತಹ ಸ್ಥಿತಿ ಇಲ್ಲವಾಗಿದ್ದು, ರೈತರು, ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಪ್ರಯಾಣಿಸುವ ಜನರಲ್ ಬೋಗಿಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿದ್ದು, ಇಂದು ಇಡೀ ದೇಶದಲ್ಲಿ ಜನರಲ್ ಬೋಗಿಗಳು ಸ್ವಚ್ಛತೆಯಿಂದ ಕೂಡಿವೆ ಎಂದು ತಿಳಿಸಿದರು.

ಮತ್ತೆ ಗೋಲ್ಡನ್ ಚಾರಿಯೇಟ್ ರೈಲು ಸೇವೆ: 2008 ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಪ್ರವಾ ಸಿಗರಿಗೆ ಅನುಕೂಲ ಕಲ್ಪಿಸಲು `ಗೋಲ್ಡನ್ ಚಾರಿ ಯೇಟ್ ರೈಲು ಸೇವೆ’ಗೆ ಚಾಲನೆ ನೀಡಲಾಗಿತ್ತು. ಆದರೆ ಸದ್ಯ ಅದು ಸ್ಥಗಿತಗೊಂಡಿದ್ದು, ಇದೀಗ ಮತ್ತೆ ಆರಂ ಭಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ರಾಜ್ಯದಲ್ಲಿ ರೈಲ್ವೆ ಇಲಾಖೆಯ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಗತ್ಯ ವಿರುವ ಭೂಮಿಯನ್ನು ಶೀಘ್ರವಾಗಿ ನೀಡಲು ಮುಖ್ಯಮಂತ್ರಿ ಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, 2014ರಲ್ಲಿ ಸಂಸದನಾದ ಬಳಿಕ ಮೈಸೂರಿಗೆ ಸಂಚಾರ ಆರಂಭಿ ಸಿರುವ 7ನೇ ರೈಲು ಇದಾಗಿದೆ. ಸುರೇಶ್ ಅಂಗಡಿಯವರ ಪರಿಶ್ರಮದಿಂದ ಇಂದು ಇದು ಸಾಧ್ಯವಾಗಿದೆ. ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಇಲಾಖೆಗೆ ಅಗತ್ಯ ವಿರುವ ವೇಗ ನೀಡಿದ್ದಾರೆ. ಆ ಮೂಲಕ ಸಮರ್ಥ ವಾಗಿ ಕೆಲಸ ಮಾಡುವ ಬಗೆಯನ್ನು ತೋರಿಸಿಕೊಟ್ಟಿ ದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.

ಕರ್ನಾಟಕ ಹಾಗೂ ಮೈಸೂರು ಭಾಗದ ಬೇಡಿಕೆಗಳಿಗೆ ಕೇಂದ್ರ ರೈಲ್ವೆ ಸಚಿವರು ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿ ವರು ಸ್ಪಂದಿಸುತ್ತಿದ್ದಾರೆ. ಮೈಸೂರಿಗೆ ಸಂಬಂಧಿಸಿದಂತೆ ಇನ್ನು ಹಲವು ಯೋಜನೆಗಳು ಇದ್ದು, ಮುಂದಿನ ದಿನಗ ಳಲ್ಲಿ ಅವುಗಳನ್ನು ಘೋಷಣೆ ಮಾಡಲಿದ್ದೇನೆ ಎಂದರು.

ಅಭಿಮಾನದ ನುಡಿ: ಸಿಎಂ ಬಿ.ಎಸ್.ಯಡಿ ಯೂರಪ್ಪ ಅವರ ಕುರಿತು ಸಂಸದ ಪ್ರತಾಪ್ ಸಿಂಹ ಅಭಿಮಾನದ ನುಡಿಗಳನ್ನಾಡಿದರು. ಇವರು ವಿಪಕ್ಷ ನಾಯಕರಾಗಿದ್ದರೆ ಎದುರಾಳಿಗಳ ಮುಖದಲ್ಲಿ ಬೆವರಿಳಿ ಯುತ್ತದೆ. ಸಿಎಂ ಆದಾಗ ಕೆರೆಕಟ್ಟೆಗಳಲ್ಲಿ ನೀರು ತುಂಬಿ ಹರಿಯುತ್ತದೆ ಎಂದು ಪ್ರತಾಪ್ ಸಿಂಹ ಹಾಡಿ ಹೊಗ ಳಿದರಲ್ಲದೆ, ತಾವು ಸಿಎಂ ಆಗಿರುವವರೆಗೂ ವಿ.ಸೋಮಣ್ಣ ನವರೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ರಬೇಕು ಎಂದು ಮನವಿ ಮಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಸುರೇಶ್ ಅಂಗಡಿ ಯವರು ಸಚಿವರಾದ ಬಳಿಕ ರಾಜ್ಯಕ್ಕೆ ಅನೇಕ ಕೊಡುಗೆ ಗಳನ್ನು ನೀಡಿದ್ದಾರೆ. ಜೊತೆಗೆ ತಮಗೆ ನೀಡಿದ ಜವಾ ಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುತ್ತಿ ದ್ದಾರೆ. ರಾಜ್ಯಕ್ಕೆ ರೈಲ್ವೆ ಮೂಲಕ ಆಗಬೇಕಿರುವ ಎಲ್ಲಾ ಕೆಲಸಗಳನ್ನು ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಯವರ ಹಲವು ಸುಧಾರಣಾ ಕ್ರಮಗಳಿಗೆ ಸಂಬಂಧಿಸಿ ದಂತೆ ರೈಲ್ವೆ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವ ಹಿಸುತ್ತಿದೆ. ಸ್ವಚ್ಛ ಭಾರತ ಅಭಿಯಾನದಡಿ ರೈಲ್ವೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಚಿವ ಸಿ.ಟಿ.ರವಿ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಮ್, ಶಾಸಕ ನಿರಂಜನ ಕುಮಾರ್, ನೈರುತ್ಯ ರೈಲ್ವೆ ಜಿಎಂ ಅಜಯ್‍ಕುಮಾರ್ ಸಿಂಗ್, ಮೈಸೂರು ವಿಭಾಗದ ಡಿಆರ್‍ಎಂ ಅಪರ್ಣ ಗರ್ಗ್ ಮತ್ತಿತರರು ಹಾಜರಿದ್ದರು.

Translate »