ಬೆಂಗಳೂರು, ಆ.23(ಕೆಎಂಶಿ)-ಬಿಜೆಪಿ ವರಿಷ್ಠರು ಮತ್ತು ಕೇಂದ್ರ ಸರ್ಕಾರದ ಅಸಹಕಾರಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ. ಮಂತ್ರಿಮಂಡಲ ರಚನೆ ನಂತರ ಎದ್ದಿರುವ ಭಿನ್ನಾಭಿಪ್ರಾಯ, ಇಂಧನ, ಲೋಕೋಪಯೋಗಿ ಯಂತಹ ಖಾತೆಗಳಿಗೆ ನೂತನ ಸಚಿವರು ಪಟ್ಟು ಹಿಡಿದಿ ರುವುದು, ಮತ್ತೊಂದೆಡೆ ಅನರ್ಹ ಶಾಸಕರ ಒತ್ತಡದಿಂದ ಜರ್ಝರಿತರಾಗಿದ್ದು, ಯಾಕಾದರೂ ಮುಖ್ಯಮಂತ್ರಿ ಆದೆನೋ ಎಂಬ ಸಂಕಟಕ್ಕೆ ಸಿಲುಕಿದ್ದಾರೆ.
ಇದನ್ನು ಸ್ವತಃ ಮುಖ್ಯಮಂತ್ರಿ ಅವರೇ ತಮ್ಮ ಆಪ್ತ ಮಾಧ್ಯಮ ಗೆಳೆಯರ ಜೊತೆ ಹೇಳಿಕೊಂಡಿದ್ದಾರೆ. ದೀಪಾ ವಳಿ ನಂತರ ಅಧಿಕಾರ ಹಿಡಿಯಬೇಕಿತ್ತು, ಆತುರಪಟ್ಟೆ ವೇನೋ ಅನಿಸುತ್ತದೆ. ಈಗ ಎದುರಾಗಿರುವ ಸಮಸ್ಯೆ ಪರಿಹರಿಸಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮುಂದಾ ಗುತ್ತಿಲ್ಲ. ಖಾತೆ ಹಂಚಿಕೆ ಬಗ್ಗೆ ಇನ್ನೂ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ. ಅತೃಪ್ತರ ವಿಷಯದಲ್ಲಿ ಕೇಂದ್ರ ನಾಯಕರು ಆಸಕ್ತಿ ತೋರುತ್ತಿಲ್ಲ, ಅನರ್ಹಗೊಂಡ ಶಾಸಕರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ನಾನಂತೂ ಅವರ ಕೈಬಿಡುವುದಿಲ್ಲ. ರಾಜ್ಯದಲ್ಲಿ ಉಂಟಾದ ನೆರೆಯಿಂದ ಭಾರೀ ಪ್ರಮಾಣ ದಲ್ಲಿ ಹಾನಿಯಾಗಿದೆ, ಇದುವ ರೆಗೂ ಪ್ರಧಾನಿ ಅವರು ಒಂದು ಪೈಸೆಯನ್ನೂ ನೀಡಿಲ್ಲ, ಇಲ್ಲಿ ನೊಂದವರು ಬಾಧೆ ಅನು ಭವಿಸುತ್ತಿದ್ದಾರೆ. ಇದರ ನಡುವೆ ಕುಟುಂಬದವರನ್ನು ಆಡಳಿತದ ಹತ್ತಿರ ಸೇರಿಸಬೇಡ ಎನ್ನುತ್ತಿದ್ದಾರೆ, ಆದರೆ ಮಗ ಮತ್ತು ಸೊಸೆಯರನ್ನು ದೂರ ಇಡಲು ಸಾಧ್ಯವೇ ಎಂದು ಹೇಳಿಕೊಂಡಿದ್ದಾರೆ. ಮುಖ್ಯಮಂತ್ರಿ ಆಗಿದ್ದೇನೆ, ಈಗ ಹಿಂದೆ ಸರಿಯಲು ಸಾಧ್ಯವಿಲ್ಲ, ಒಳ್ಳೆ ಕೆಲಸ ಮಾಡೋಣ ಎಂದರೆ ವರಿಷ್ಠರ ಸಹಕಾರ ಇಲ್ಲ ಎಂದಿದ್ದಾರೆ.
ಸಂಪುಟದಲ್ಲಿ ನಂಬರ್ ಟೂ ಅನ್ನಿಸಿಕೊಂಡ ಗೃಹ ಖಾತೆಯನ್ನು ಪಡೆಯಲು ಪ್ರಬಲ ಮಂತ್ರಿಗಳ್ಯಾರೂ ಒಪ್ಪುತ್ತಿಲ್ಲ. ಯಾವ ಕಾರಣಕ್ಕೂ ತಮಗೆ ಆ ಖಾತೆ ಬೇಡ ಎನ್ನುತ್ತಿದ್ದಾರೆ. ಅನರ್ಹಗೊಂಡ ಶಾಸಕರು, ನಿಮ್ಮನ್ನು ನಂಬಿ ರಾಜಕೀಯ ಭವಿಷ್ಯವನ್ನೇ ಅಡವಿಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆವು, ನೀವು ಮಾತ್ರ ಸಂಪುಟ ವಿಸ್ತರಣೆ ಮಾಡಿ, ಖಾತೆ ಹಂಚಿಕೆಯ ಭರಾಟೆಯಲ್ಲಿ ಸಮಯ ಕಳೆಯುತ್ತಿದ್ದೀರಿ ಎನ್ನುತ್ತಿದ್ದಾರೆ.
ಪ್ರಮುಖ ಖಾತೆಗಳನ್ನು ನಿಮ್ಮ ಪಕ್ಷದ ಸಚಿವರೇ ಹಂಚಿಕೊಳ್ಳುವುದಾದರೆ, ನಾವು ಸಂಪುಟಕ್ಕೆ ಸೇರ್ಪಡೆ ನಂತರ ಉಪಯೋಗವಿಲ್ಲದ ಖಾತೆಗಳನ್ನು ಪಡೆಯ ಬೇಕೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯದಲ್ಲಿ ವರಿಷ್ಠರು ನಿಶ್ಚಿತವಾಗಿ ಏನನ್ನೂ ಹೇಳುತ್ತಿಲ್ಲ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ನೋಡಲು ಬಂದರೆ ಮೊದಲು ಜೆ.ಪಿ.ನಡ್ಡಾ ಅವರನ್ನು ನೋಡಿ ಎನ್ನುತ್ತಿದ್ದಾರೆ.