ಮೈತ್ರಿ ಸರ್ಕಾರ ಪತನಕ್ಕೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಗುಟುರು
ಮೈಸೂರು

ಮೈತ್ರಿ ಸರ್ಕಾರ ಪತನಕ್ಕೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಗುಟುರು

August 24, 2019

ಬೆಂಗಳೂರು, ಆ.23(ಕೆಎಂಶಿ)-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಕಾರಣ ಎಂದಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಈಗ ನನ್ನ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ನನ್ನ ಮೇಲಿನ ರಾಜಕೀಯ ದ್ವೇಷ, ನನ್ನನ್ನು ರಾಜಕೀಯವಾಗಿ ಮುಗಿಸಿದರೆ ಕರ್ನಾ ಟಕದಲ್ಲಿ ಕಾಂಗ್ರೆಸ್ ಮುಗಿದಂತೆ ಎಂಬ ಭ್ರಮೆಯಲ್ಲಿ ಇಂತಹ ಆರೋಪ ಮಾಡು ತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ನಿವಾಸದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನೊಬ್ಬರ ಮೇಲೆ ಗೂಬೆ ಕೂರಿಸಿ ಅಳು ವುದೇ ದೇವೇಗೌಡರ ಕೆಲಸ, ಇದರಿಂದ ರಾಜಕೀಯ ಲಾಭ ಪಡೆಯಬಹುದೆಂಬ ಆಲೋಚನೆ ಅವರದು. ಇದು ಜನರಿಗೆ ಅರ್ಥವಾಗುತ್ತೆ, ಅವರು ದಡ್ಡರಲ್ಲ. ನನ್ನ ರಾಜಕೀಯ ಜೀವನವನ್ನೂ ನೋಡಿ ದ್ದಾರೆ, ಗೌಡರ ಕುಟುಂಬದ ರಾಜಕೀಯ ವನ್ನೂ ನೋಡಿದ್ದಾರೆ. ಯಾರು ಏನು, ಹೇಗೆ ಎಂಬುದು ಜನರಿಗೆ ಗೊತ್ತಿದೆ. ನನ್ನ ಮೇಲೆ ಗೌಡರು ಗಂಭೀರ ಆರೋಪ ಮಾಡಿ ದ್ದಾರೆ, ಇದಕ್ಕೆ ಪ್ರತಿಕ್ರಿಯೆ ಕೊಡದಿದ್ದರೆ ತಪ್ಪಾಗುತ್ತದೆ, ಮೌನವಾಗಿರುವುದು ಸರಿಯಲ್ಲ. ಹಾಗಾಗಿ ಇಂದು ಜನರ ಮುಂದೆ ವಾಸ್ತವವನ್ನು ಇಡುತ್ತಿದ್ದೇನೆ ಎಂದು ಹೇಳಿ ದರು. ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂಬುದು ನನ್ನ ಆಶಯ ವಾಗಿತ್ತು. ನಾವು 78 ಶಾಸಕರಿದ್ದರೂ ಜೆಡಿಎಸ್‍ಗೆ ಬೆಂಬಲ ನೀಡಿ ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದೆವು. ಇಂತಹ ಸಂದರ್ಭದಲ್ಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲಿಲ್ಲ. ಅವರು ನಮ್ಮ ಶಾಸಕರನ್ನು ನಿರ್ಲಕ್ಷ್ಯ ಮಾಡಿ ಏಕ ಪಕ್ಷೀಯವಾಗಿ
ಆಡಳಿತ ನಿರ್ಧಾರಗಳನ್ನು ಕೈಗೊಂಡರು. ಸಚಿವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ನಾನು ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದೆ. ಆಗ ಒಬ್ಬ ಶಾಸಕನೂ ಸರ್ಕಾರದ ವಿರುದ್ಧ ಮಾತನಾಡಿರಲಿಲ್ಲ. ಸಮನ್ವಯ ಸಮಿತಿಯಲ್ಲಿ ತೆಗೆದುಕೊಳ್ಳುವ ಯಾವ ತೀರ್ಮಾನವನ್ನೂ ಕುಮಾರಸ್ವಾಮಿ ಜಾರಿ ಮಾಡಲಿಲ್ಲ. ಅವರ ನಡವಳಿಕೆಯಿಂದ ಶಾಸಕರು ಬೇಸತ್ತಿದ್ದರು. ಕ್ಷೇತ್ರದ ಅಭಿವೃದ್ಧಿ ಜೊತೆಗೆ ಶಾಸಕರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಅಂತಹ ಕೆಲಸ ಇವರು ಮಾಡಲಿಲ್ಲ ಎಂದು ಸಿದ್ದರಾಮಯ್ಯ ಆಪಾದಿಸಿದರು.

ಕುಮಾರಸ್ವಾಮಿ ಮತ್ತು ಅವರ ಸಹೋದರ ರೇವಣ್ಣ ಎಲ್ಲಾ ವಿಷಯಗಳಲ್ಲಿ ಮೂಗು ತೂರಿಸಿ, ನಮ್ಮ ಸಚಿವರು ಮತ್ತು ಶಾಸಕರಿಗೆ ಬೇಸರ ಮೂಡಿಸಿದ್ದರು. ಅದರ ಪರಿಣಾಮದಿಂದಲೇ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಮಾಡಿದ ತಪ್ಪಿಗೆ ಸರ್ಕಾರ ಪತನಗೊಂಡಿತು. ಈಗ ನಮ್ಮ ಮೇಲೆ ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ದೇವೇಗೌಡರು ತಮ್ಮ ಕುಟುಂಬದವರನ್ನು ಹೊರತುಪಡಿಸಿ ರಾಜಕೀಯವಾಗಿ ಯಾರನ್ನೂ ಬೆಳೆಸಲ್ಲ. ಅವರ ಇಡೀ ರಾಜಕೀಯ ಬದುಕಿನಲ್ಲಿ ಯಾರನ್ನೂ ಬೆಳೆಯಲು ಬಿಟ್ಟಿಲ್ಲ. ಅಷ್ಟೇ ಅಲ್ಲ, ತಮ್ಮ ಜಾತಿಗೆ ಸೇರಿದ ಮುಖಂಡರನ್ನೂ ಮುಗಿಸಿದರು, ಉದಾಹರಣೆಗೆ ಡಿ.ಬಿ.ಚಂದ್ರೇಗೌಡ, ಕೆ.ಎನ್.ನಾಗೇಗೌಡ, ಡಾ. ಜೀವರಾಜ ಆಳ್ವ, ಭೈರೇಗೌಡ ಎಂದರು.

ದೂರವಾಣಿ ಕದ್ದಾಲಿಕೆ ತನಿಖೆ ಸಿಬಿಐಗೆ ವಹಿಸುವ ವಿಷಯದಲ್ಲಿ ಮುಖ್ಯಮಂತ್ರಿ ಅವರು ನನ್ನ ಸಲಹೆ ಕೇಳಿಲ್ಲ, ನಾನು ಸಿಬಿಐಗೆ ನೀಡಿ ಎಂದಿಲ್ಲ, ತನಿಖೆ ಆಗಬೇಕು ಎಂದಿದ್ದೆ ಅಷ್ಟೇ. ದೇವೇಗೌಡರು ನನ್ನ ಮೇಲೆ ಗುರುತರ ಆರೋಪ ಹೊರಿಸಿದ್ದಾರೆ. ಅವೆಲ್ಲವೂ ಆಧಾರರಹಿತ. ರಾಜಕೀಯ ದುರುದ್ದೇಶದಿಂದ ಮಾಡಿದ ಸುಳ್ಳು ಆರೋಪಗಳು ಎಂದರು. ಇತ್ತೀಚಿನ ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರ ಸಂವಿಧಾನಾತ್ಮಕ ಸಂಸ್ಥೆ ಸಿಬಿಐ, ಇಡಿ, ಚುನಾವಣಾ ಆಯೋಗ, ಹೀಗೆ ಎಲ್ಲವನ್ನೂ ದುರುಪಯೋಗ ಮಾಡಿಕೊಂಡು ಸರ್ವಾಧಿಕಾರಿ ರೀತಿ ಪ್ರದರ್ಶನ ಮಾಡುತ್ತಿದ್ದಾರೆ, ಪ್ರಜಾಪ್ರಭುತ್ವ ವ್ಯವಸ್ಥೆ ಬಯಸುವವರು ಇದನ್ನು ವಿರೋಧಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸ್ಥಾನದಲ್ಲಿ ಕುಮಾರಸ್ವಾಮಿಯನ್ನು ಕಾಣಲು ಸಿದ್ದರಾಮಯ್ಯನಿಗೆ ಇಷ್ಟ ಇರಲಿಲ್ಲ ಎಂದಿದ್ದಾರೆ. ನನಗೆ ಹಾಗೆ ಅನಿಸಿರಲಿಲ್ಲ. ಅವರಿಗೆ ಹಾಗೆ ಅನಿಸಿತ್ತೇನೋ ಎಂದು ಅವರು ವ್ಯಂಗ್ಯವಾಡಿದರು. ಇಷ್ಟಾದರೂ ಮತ್ತೆ ಸ್ಪಷ್ಟಪಡಿಸುತ್ತೇನೆ, ಸಮ್ಮಿಶ್ರ ಸರ್ಕಾರ ಬೀಳಿಸುವ ನೀಚ ರಾಜಕಾರಣವನ್ನು ನಾನು ಮಾಡಿಲ್ಲ, ಸರ್ಕಾರ ಬೀಳಿಸುವುದೇನಿದ್ದರೂ ದೇವೇಗೌಡ ಮತ್ತು ಅವರ ಮಕ್ಕಳ ಹುಟ್ಟು ಗುಣ. ದೇವೇಗೌಡರು ಸರ್ಕಾರ ಬೀಳಿಸುವು ದರಲ್ಲಿ ನಿಪುಣರು ಎಂದರು. ಧರ್ಮಸಿಂಗ್ ಅವರನ್ನು ಅಧಿಕಾರದಿಂದ ಇಳಿಸಿ, ಬಿಜೆಪಿ ಜೊತೆ 20-20 ಒಪ್ಪಂದ ಮಾಡಿಕೊಂಡು, ನಂತರ ಬಿಜೆಪಿ ವಿಷಯದಲ್ಲೂ ವಚನ ಭ್ರಷ್ಟರಾದರು. ಅದ್ದರಿಂದಲೇ ಆ ಪಕ್ಷ ರಾಜ್ಯದಲ್ಲಿ ಬೆಳೆದದ್ದು ಎಂದರು.

ಕುಮಾರಸ್ವಾಮಿ ಕಣ್ಣೀರಿಡಲು ಸಿದ್ದು, ಕಾಂಗ್ರೆಸ್ ಕಾರಣ
ಬೆಂಗಳೂರು, ಆ.23(ಕೆಎಂಶಿ)- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಣ್ಣೀರಿಡಲು ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಕಾರಣ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಇಂದಿಲ್ಲಿ ದೂರಿದ್ದಾರೆ. ಮೈತ್ರಿ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎನ್ನುತ್ತಿದ್ದ ದೇವೇ ಗೌಡ, ಇಂದು ಕಾಂಗ್ರೆಸ್ ಅನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಕಾಂಗ್ರೆಸ್ ಅಷ್ಟೇ ಅಲ್ಲ ಕುಮಾರಸ್ವಾಮಿ ಅವರ ಈ ಸ್ಥಿತಿಗೆ ಮಾಧ್ಯಮವೂ ಪಾಲುದಾರ ಎಂದರು. ಕಾಂಗ್ರೆಸ್‍ನ ವರು ಮತ್ತು ಸಿದ್ದರಾಮಯ್ಯ ನೀಡುತ್ತಿದ್ದ ಕಾಟಕ್ಕೆ ಕುಮಾರ ಸ್ವಾಮಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ನನ್ನ ಬಳಿ ಬಂದಿದ್ದರು. ಕೇಂದ್ರದಲ್ಲಿ ಕೋಮುವಾದಿ ಪಕ್ಷ ಅಧಿಕಾರ ದಲ್ಲಿರುವಾಗ ಉಳಿದ ಜಾತ್ಯತೀತ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಬೇಕು ಎಂದು ಬಯಸಿದವರಲ್ಲಿ ನಾನೂ ಒಬ್ಬ. ಇಂತಹ ಸನ್ನಿವೇಶದಲ್ಲಿ ನೀನು ರಾಜೀನಾಮೆ ನೀಡಿದರೆ ರಾಷ್ಟ್ರಮಟ್ಟದಲ್ಲಿ ತಪ್ಪು ಸಂದೇಶ ಹೋಗುತ್ತದೆ ಎಂದು ತಡೆದಿದ್ದೆ. ಮೈತ್ರಿ ಸರ್ಕಾರವನ್ನು ನಾವು ಬೀಳಿಸಿದರೆ, ಮತ್ತೆ ನಮ್ಮ ಮೇಲೆ ಆರೋಪ ಮಾಡ್ತಾರೆ ಅಂತ ಸುಮ್ಮನೆ ಇದ್ದೆ. ಸರ್ಕಾರ ಹೋದ ಮೇಲೆ ಇದೆಲ್ಲವನ್ನು ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದರು. ಕುಮಾರಸ್ವಾಮಿಗೆ ಕಾಂಗ್ರೆಸ್‍ನವರು ನೀಡಿದ ಕಾಟ ಎಷ್ಟೆಂದು ನನಗೆ ಗೊತ್ತು. ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್ ನಾಯಕರೇ ಕಾರಣ. ಕಾಂಗ್ರೆಸ್ ಕೊಡುತ್ತಿದ್ದ ನೋವು ಸಹಿಸಿಕೊಂಡು ನಾನು ಇದ್ದೆ. ಸಿದ್ದರಾಮಯ್ಯ ಮೊದಲಿನಿಂದಲೂ ಕುಮಾರಸ್ವಾಮಿ ಬಗ್ಗೆ ಅಸಮಾಧಾನ ಹೊಂದಿದ್ದರು. ಹೀಗೆ ಬಹಳಷ್ಟು ವಿಷಯಗಳು ಮಾತಾಡಬಹುದು, ಈ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ ಎಂದರು.

ಜೆಡಿಎಸ್ ನಾಯಕರಂತೆ ಅಳುವುದಕ್ಕೆ ನಮಗೆ ಬರಲ್ಲ, ಕಂಡ ಕಂಡ ಕಡೆ ಅತ್ತರೆ ಅನುಕಂಪ ಸಿಗಲ್ಲ!
ಬೆಂಗಳೂರು, ಆ.23-ಜೆಡಿಎಸ್ ನಾಯಕ ರಂತೆ ಅಳುವುದಕ್ಕೆ ನಮಗೆ ಬರಲ್ಲ. ಜನ ಅವಕಾಶ ಕೊಟ್ಟರೆ ರಾಜಕಾರಣ ಮಾಡ್ತೇವೆ. ಜನ ಅವಕಾಶ ಕೊಡಲಿಲ್ಲವೇ ಮನೆಯಲ್ಲಿ ಇರ್ತೇವೆ ಎಂದು ದೇವೇಗೌಡರ ಕುಟುಂಬ ಕಣ್ಣೀರು ಹಾಕಿದ್ದರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯ ವಾಡಿದರು. ಕಂಡ ಕಂಡ ಕಡೆ ಅತ್ತರೆ ಅನು ಕಂಪ ಸಿಗಲ್ಲ. ಜಾತಿ ಹಿಡಿದು ಮಾತನಾಡಿದ್ರೂ ಲಾಭವಾಗಲ್ಲ. ದೇವೇಗೌಡರು ಇದನ್ನ ಅರ್ಥ ಮಾಡಿಕೊಳ್ಳಬೇಕು. ರಾಜ್ಯದ ಜನ ನನ್ನ ರಾಜ ಕೀಯ ನಡೆಯನ್ನೂ ನೋಡಿದ್ದಾರೆ. ಜೆಡಿಎಸ್ ನಾಯಕರ ರಾಜಕೀಯವನ್ನೂ ನೋಡಿದ್ದಾರೆ ಎಂದು ಮಾತಿನ ಚಾಟಿ ಬೀಸಿದರು.

ದೇವೇಗೌಡರು ಯಾರನ್ನೂ ಬೆಳೆಸಲ್ಲ. ಸ್ವಜಾತಿ ಯವರನ್ನೂ ಅವರು ರಾಜಕೀಯವಾಗಿ ಬೆಳೆ ಸಲ್ಲ. ಅವರ ಪಾರ್ಟಿಯಲ್ಲಿ ಎಲ್ಲ ಜಾತಿಯವರೂ ಇದ್ದಾರೆ. ಯಾವ ಜಾತಿಯವರನ್ನ ಅವರು ಬೆಳೆಸಿ ದ್ದಾರೆ ತೋರಿಸಿ? ಜೀವರಾಜ್ ಆಳ್ವಾ, ವೈ.ಕೆ. ರಾಮಯ್ಯ ಎಲ್ಲರನ್ನೂ ತುಳಿದ್ರು. ನೀವು ಬಚ್ಚೇ ಗೌಡರನ್ನ ಕೇಳಿ ಗೌಡರ ಬಗ್ಗೆ ಹೇಳ್ತಾರೆ. ನನ್ನ ಮೇಲೆ ಆರೋಪ ಮಾಡಿದ್ರೆ ಯಾವ ಲಾಭವೂ ಆಗಲ್ಲ. ಅನುಕಂಪವೂ ಬರಲ್ಲ, ರಾಜಕೀಯ ಲಾಭವೂ ಆಗಲ್ಲ ಎಂದು ದೇವೇಗೌಡರಿಗೆ ಸಿದ್ದರಾಮಯ್ಯ ಟಾಂಗ್ ಕೊಟ್ಟರು. ನಾನು ಏನಿದ್ದರೂ ನೇರ ರಾಜಕಾರಣ ಮಾಡುವವನು. ನೇರವಾಗಿಯೇ ನಾನು ವಿರೋಧಿಸುತ್ತೇನೆ. ನಾನು ಅವರಂತೆ ಹಿಂದೆ ಮುಂದೆ ನಿಂತು ಆಟವಾಡುವ ವನಲ್ಲ. ತಾತ, ಮಗ, ಮೊಮ್ಮಕ್ಕಳು ಎಲೆಕ್ಷನ್ ನಿಂತ್ರು. ಅದಕ್ಕೆ ಜನ ಅವರನ್ನ ತಿರಸ್ಕಾರ ಮಾಡಿದ್ದಾರೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಬೇಡ ಅಂದಿದ್ದೆವು. ಫ್ರೆಂಡ್ಲಿ ಫೈಟ್ ಮಾಡೋಣ ಅಂತಾನೆ ಹೇಳಿದ್ದೆ. ಆದರೆ ಹೈಕಮಾಂಡ್‍ನಿಂದಾಗಿ ಮೈತ್ರಿ ಮಾಡಿಕೊಂಡೆವು. ಮಂಡ್ಯ, ಮೈಸೂರು, ತುಮಕೂರು, ಹಾಸನದಲ್ಲಿ ಜಂಟಿ ಪ್ರಚಾರ ಮಾಡಿದ್ದೆವು. ನಾನೇ ಪ್ರಚಾರಕ್ಕೂ ಹೋಗಿದ್ದೆ. ಆದ್ರೆ ನಿಖಿಲ್ ಸೋಲಲು ನಾನೇ ಕಾರಣ ಅಂತ ಹೇಳಿದ್ರು. ಹಾಗಾದ್ರೆ ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ ಸೋಲಿಗೆ ಕಾರಣ ಯಾರು? ಜಿಟಿ ದೇವೇಗೌಡನೇ ನೇರವಾಗಿ ಹೇಳಿದ್ದಾರೆ. ನಾವು ಬಿಜೆಪಿ ಪರ ಕೆಲಸ ಮಾಡಿದ್ದೇವೆ ಅಂತ. ಹಾಸನದಲ್ಲಿ ಪ್ರಜ್ವಲ್ ಗೆದ್ದಿದ್ದು ನಾವು ಕೆಲಸ ಮಾಡಿದ್ದರಿಂದಲೇ ಎಂದು ಜೆಡಿಎಸ್ ನಾಯಕರಿಗೆ ಸಿದ್ದರಾಮಯ್ಯ ಗುನ್ನ ನೀಡಿದ್ದಾರೆ.

Translate »