ಕಸಕ್ಕೆ ಹಚ್ಚಿದ್ದ ಬೆಂಕಿ ನಂದಿಸಿ ಪೌರ ಕಾರ್ಮಿಕರಿಗೇ ಪರಿಸರದ ಪಾಠ ಹೇಳಿದ ಮಕ್ಕಳು
ಮೈಸೂರು

ಕಸಕ್ಕೆ ಹಚ್ಚಿದ್ದ ಬೆಂಕಿ ನಂದಿಸಿ ಪೌರ ಕಾರ್ಮಿಕರಿಗೇ ಪರಿಸರದ ಪಾಠ ಹೇಳಿದ ಮಕ್ಕಳು

July 14, 2019

ಮೈಸೂರು,ಜು.13-‘ಪರಿಸರ ಉಳಿದರೆ ಮಾತ್ರ ಜೀವಸಂಕುಲ ಉಳಿಯಲು ಸಾಧ್ಯ’, ‘ಸ್ವಚ್ಛ ಸಮಾಜ ನಾಗರಿಕ ಸಮಾಜದ ಮುಖವಾಣಿ’. ಇದರ ಕುರಿತು ಜಾಗೃತಿ ಮೂಡಿಸುವುದೇ ನಮ್ಮ ಕಾರ್ಯಕ್ರಮದ ಉದ್ದೇಶ. ಅದಕ್ಕಾಗಿ ‘ನಾಗರಿಕ ನಡೆ ಜಾಗೃ ತಿಯ ಕಡೆ’ ಎಂಬ ಕಾರ್ಯಕ್ರಮದಡಿ ‘ಸ್ವಚ್ಛ ಸಮಾಜ, ಸ್ವಾಸ್ಥ್ಯ ಸಮಾಜ’ ಎಂಬ ಘೋಷಣೆಯೊಂದಿಗೆ ಶನಿವಾರ ಚಾಮುಂಡಿ ಬೆಟ್ಟದ ಮಡಿಲಲ್ಲಿ ಕೌಟಿಲ್ಯ ವಿದ್ಯಾಲಯದಿಂದ ಸ್ವಚ್ಛತಾ ಕಾರ್ಯಕ್ರಮ ಮತ್ತು ಸ್ವಚ್ಛತೆಯ ಬಗ್ಗೆ ಸಮೀಕ್ಷೆ ಹಾಗೂ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಮಕ್ಕಳಲ್ಲಿ ಪರಿಸರ ಕಾಳಜಿಯನ್ನು ಬೆಳೆಸುವುದು ಹಾಗೂ ನಾಗರಿಕ ನಡವಳಿ ಕೆಯ ತರಬೇತಿ ನೀಡುವ ಉದ್ದೇಶದಿಂದ ಕೌಟಿಲ್ಯ ವಿದ್ಯಾಲಯ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ 1ರಿಂದ 10ನೇ ತರಗತಿವರೆಗಿನ 300ಕ್ಕೂ ಹೆಚ್ಚು ಸ್ಕೌಟ್ಸ್ ಅಂಡ್ ಗೈಡ್ಸ್, ಕಬ್ಸ್ ಮತ್ತು ಬುಲ್‍ಬುಲ್ಸ್‍ಗಳು ಪಾಲ್ಗೊಂಡು ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ಅಲ್ಲದೆ ಸ್ವಚ್ಚತಾ ಕಾರ್ಯ ದಲ್ಲೂ ತೊಡಗುವ ಮೂಲಕ ಇತರರಿಗೆ ಮಾದರಿಯಾದರು.

ಬೆಳಿಗ್ಗೆ ಚಾಮುಂಡಿ ಬೆಟ್ಟದ ಪಾದದ ಬಳಿಯಿಂದ ಮೆಟ್ಟಿಲುಗಳನ್ನೇರತೊಡಗಿದ ಮಕ್ಕಳು ಆಷಾಢ ಶುಕ್ರವಾರ ಬೆಟ್ಟಕ್ಕೆ ಆಗಮಿ ಸಿದ್ದ ಭಕ್ತಾದಿಗಳು, ಪ್ರವಾಸಿಗರು ಅಲ್ಲಲ್ಲಿ ಎಸೆದು ಹೋಗಿದ್ದ ಪ್ಲಾಸ್ಟಿಕ್ ಮತ್ತು ಕಾಗದದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು. ಚಾಮುಂ ಡೇಶ್ವರಿ ಬೆಟ್ಟದ ಅಕ್ಕಪಕ್ಕದಲ್ಲಿ ಹಾಗೂ ಸರ್ಕಾರಿ ಶಾಲೆಗಳ ಆವರಣದಲ್ಲಿ ಸಹಾ ತ್ಯಾಜ್ಯ ವಸ್ತುಗಳನ್ನು ಹೆಕ್ಕಿ ವಿಲೇವಾರಿ ಮಾಡಿದರು.

ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಗ್ರಾಮ ಪಂಚಾಯ್ತಿಯ ಪೌರ ಕಾರ್ಮಿಕರು ಗುಡಿಸಿ ಗುಡ್ಡೆ ಹಾಕಿದ್ದ ಕಸದ ರಾಶಿಗೆ ಬೆಂಕಿ ಹಚ್ಚಿ ಸುಡುತ್ತಿದ್ದು ದನ್ನು ಕಂಡ ಮಕ್ಕಳು ನೀರು ಸುರಿದು ನಂದಿಸಿದರು. ಅಲ್ಲದೇ, ತ್ಯಾಜ್ಯ ವಸ್ತುಗಳಿಗೆ ಬೆಂಕಿ ಹಚ್ಚಿ ಸುಡುವುದರಿಂದ ಪರಿಸರದ ಮೇಲೆ ಅಗಾಧ ಪ್ರಮಾಣದ ದುಷ್ಪರಿ ಣಾಮಗಳು ಉಂಟಾಗಲಿವೆ ಎಂದು ಪೌರಕಾರ್ಮಿಕರಿಗೆ ತಿಳಿಹೇಳಿದರು.

ನಂತರ ಬೆಟ್ಟದಲ್ಲಿ ಜನಜಾಗೃತಿ ಜಾಥಾ ನಡೆಸಿದ ಮಕ್ಕಳು, ಸ್ಥಳೀಯ ನಿವಾಸಿಗಳು, ವರ್ತಕರು, ದೇವಸ್ಥಾನದ ಅಧಿಕಾರಿಗಳು, ಸಿಬ್ಬಂದಿಗಳು, ಭಕ್ತಾದಿಗಳು ಮತ್ತು ಪ್ರವಾಸಿಗರ ಜೊತೆ ಸಂವಾದ ನಡೆಸಿದರು. ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿ ಸಲ್ಪಟ್ಟಿರುವ ಚಾಮುಂಡಿಬೆಟ್ಟದ ಪರಿಸರ ಎಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಮುಕ್ತವಾಗಿದೆ ಎಂಬ ಬಗ್ಗೆ ಸಮೀಕ್ಷೆಯನ್ನೂ ನಡೆಸಿದರು. ಸ್ವಚ್ಛತೆಯ ಅನಿವಾರ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಸಹಾ ನಡೆಯಿತು.

ಇದೇ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜಾ ಸಾಮಗ್ರಿಗಳ ತ್ಯಾಜ್ಯವನ್ನು ದೇವಸ್ಥಾನದ ಆಡಳಿತ ಮಂಡಳಿಯವರು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿ ಆ ತ್ಯಾಜ್ಯಗಳ ಮರು ಬಳಕೆಗೂ ಅಗತ್ಯ ಕ್ರಮ ಕೈಗೊಂಡಿರು ವುದು ತಿಳಿದುಬಂದಿತು. ಆಷಾಢ ಶುಕ್ರವಾರ ಗಳಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದರೂ ಅವರನ್ನು ನಿಯಂತ್ರಿಸುವುದು, ಕುಡಿ ಯುವ ನೀರು, ಸ್ವಚ್ಛ ಶೌಚಾಲಯ ಒದಗಿ ಸಿರುವುದು ಹಾಗೂ ದಾಸೋಹ ಭವನ ವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿ ರುವುದನ್ನು ಗಮನಿಸಿದ ವಿದ್ಯಾರ್ಥಿಗಳು, ಅದಕ್ಕಾಗಿ ಆಡಳಿತ ಮಂಡಳಿಯವರನ್ನು ಅಭಿನಂದಿಸಿದರು.

ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸ್ವಚ್ಛತೆಯ ಮಹತ್ವವನ್ನು ಸಾರುವ ಬೀದಿ ನಾಟಕ ಪ್ರದರ್ಶಿಸುವ ಮೂಲಕ ಮಕ್ಕಳು ಅಲ್ಲಿ ನೆರೆದಿದ್ದವರೆಲ್ಲ ರಿಗೆ ನೀತಿಬೋಧೆ ಮಾಡಿದರು. ನಿಮ್ಮ ಮನೆ, ಬೀದಿ, ಹಳ್ಳಿ, ನಗರದೆಲ್ಲೆಡೆ ಸ್ವಚ್ಛವಾ ಗಿದ್ದರೆ ಸ್ವಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂಬ ಸಂದೇಶ ರವಾನಿಸಿದರು. ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಸಾದ್ ಅವರು ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.