ಪೌರತ್ವ ತಿದ್ದು ಪಡಿ ಮಸೂದೆ: ಮೈಸೂರಿನ ಪುರಭವನ ಆವರಣದಲ್ಲಿ ಭಾರೀ ಪ್ರತಿಭಟನೆ
ಮೈಸೂರು

ಪೌರತ್ವ ತಿದ್ದು ಪಡಿ ಮಸೂದೆ: ಮೈಸೂರಿನ ಪುರಭವನ ಆವರಣದಲ್ಲಿ ಭಾರೀ ಪ್ರತಿಭಟನೆ

December 17, 2019

ಮೈಸೂರು,ಡಿ.16(ಆರ್‍ಕೆ)-ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದು ಪಡಿ ಮಸೂದೆ(Citizenship Amend ment bill 2019) ವಿರೋಧಿಸಿ ಎಸ್‍ಡಿ ಪಿಐ ಸೇರಿದಂತೆ ವಿವಿಧ ಸಂಘಟನೆಗಳು ಮೈಸೂರಿನ ಪುರಭವನದ ಆವರಣದಲ್ಲಿ ಸೋಮವಾರ ಮಧ್ಯಾಹ್ನ ಬೃಹತ್ ಪ್ರತಿ ಭಟನಾ ಸಭೆ ನಡೆಸಿದವು.

ಎಸ್‍ಡಿಪಿಐ ರಾಜ್ಯ ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ಮಜೀದ್, ಪದಾಧಿಕಾರಿ ಗಳಾದ ಅಜಂ ಪಾಷಾ, ಅಮ್ಜದ್‍ಖಾನ್ ಅವರ ನೇತೃತ್ವದಲ್ಲಿ ಮಧ್ಯಾಹ್ನ 2.15 ಗಂಟೆಗೆ ಸಾವಿರಾರು ಸಂಖ್ಯೆಯಲ್ಲಿ ಸಮಾವೇಶ ಗೊಂಡು, ಸಿಎಬಿ ಮತ್ತು ಎನ್‍ಆರ್‍ಸಿ ಬೇಡವೇ ಬೇಡ’, ‘ಪೌರತ್ವ ತಿದ್ದುಪಡಿ ಕಾಯ್ದೆ ಸಂವಿಧಾನ ವಿರೋಧಿ’ ಎಂಬಿತ್ಯಾದಿ ಘೋಷಣಾ ಫಲಕ ಪ್ರದರ್ಶಿಸಿ, ಭಾರೀ ಪ್ರತಿರೋಧ ವ್ಯಕ್ತಪಡಿಸಲಾಯಿತು.

ಸಂವಿಧಾನ, ಸ್ವಾತಂತ್ರ್ಯ, ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಈ ಮಸೂದೆಯನ್ನು ಜಾರಿಗೆ ತರಬಾರದು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ತಕ್ಷಣ ಸಿಎಬಿ ಪೌರತ್ವ ತಿದ್ದುಪಡಿ ವಿಧೇಯಕ ವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

ಈ ವೇಳೆ ನೆರೆದಿದ್ದ ಪ್ರತಿಭಟನಾಕಾರರ ನ್ನುದ್ದೇಶಿಸಿ ಮಾತನಾಡಿದ ಅಬ್ದುಲ್ ಮಜೀದ್, ಕೇಂದ್ರ ಸರ್ಕಾರ ಪೌರತ್ವ ತಿದ್ದು ಪಡಿ ಮಸೂದೆ ಮೂಲಕ ದೇಶದ ಅಲ್ಪ ಸಂಖ್ಯಾತ ಸಮುದಾಯದ ಮೇಲೆ ಸವಾರಿ ಮಾಡಲು ಹೊರಟಿದ್ದು, ನಮ್ಮ ಹಕ್ಕು ಬಾಧ್ಯತೆ ಯನ್ನು ಕಿತ್ತುಕೊಳ್ಳಲು ಮುಂದಾಗಿದೆ. ಇದು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ಹತ್ತಿಕ್ಕುವ ಹುನ್ನಾರವಾಗಿದೆ ಎಂದರು.

ದೇಶದ ವಿಭಜನೆಗೆ ಕಾರಣವಾದ ಕೇಂದ್ರದ ಈ ಮಸೂದೆ ಜಾರಿಯಾಗಲು ಬಿಡ ಬಾರದು. ಪೊಲೀಸ್ ಸರ್ಪಗಾವಲಿನಿಂದ ಪ್ರತಿಭಟನೆ ಹಕ್ಕು ನಿಯಂತ್ರಿಸುತ್ತಿರುವ ಸರ್ಕಾರ, ಅಧಿಕಾರ ದುರ್ಬಳಕೆ ಮಾಡಿ ಕೊಂಡು ವಿರೋಧಿಸುವವರನ್ನು ತಡೆಯ ಲೆತ್ನಿಸುತ್ತಿದೆ ಎಂದು ತಿಳಿಸಿದರು.

ಸುಮಾರು 20 ನಿಮಿಷ ಕಾಲ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ನಂತರ ಪೊಲೀಸರ ಮೌಖಿಕ ಸಲಹೆಯಂತೆ ಎಲ್ಲರೂ ಪುರ ಭವನ ಆವರಣದಿಂದ ನಿರ್ಗಮಿಸಿದರು. ಇದರೊಂದಿಗೆ ಪ್ರತಿಭಟನಾ ಸಮಾವೇಶ ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಈ ವೇಳೆ ಅಶೋಕ ರಸ್ತೆ, ಓಲ್ಡ್ ಬ್ಯಾಂಕ್ ರಸ್ತೆ, ಸಂಗಮ್ ಟಾಕೀಸ್ ರಸ್ತೆ, ಶ್ರೀಹರ್ಷ ರಸ್ತೆ, ಕೆ.ಆರ್.ಸರ್ಕಲ್‍ನಿಂದ ಹಾರ್ಡಿಂಜ್ ವೃತ್ತ ರಸ್ತೆಗಳ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಪ್ರತಿಭಟನಾ ಸಮಾ ವೇಶದ ಹಿನ್ನೆಲೆಯಲ್ಲಿ ಮಂಡಿಮೊಹಲ್ಲಾ, ಲಷ್ಕರ್ ಮೊಹಲ್ಲಾ, ಎನ್‍ಆರ್ ಮೊಹಲ್ಲಾ, ಉದಯಗಿರಿ, ಶಾಂತಿನಗರ, ಬೀಡಿ ಕಾರ್ಮಿ ಕರ ಕಾಲೋನಿ, ರಾಜೀವ್‍ನಗರಗಳಲ್ಲಿ ಮುಸ್ಲಿಂ ಸಮುದಾಯದವರು ಅಂಗಡಿ-ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದರು. ಸ್ಥಳದಲ್ಲಿ ಮೊಬೈಲ್ ಕಮಾಂಡ್ ಸೆಂಟರ್ ವಾಹನ, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು. ಕಾನೂನು ಸುವ್ಯವಸ್ಥೆ ವಿಭಾ ಗದ ಡಿಸಿಪಿ ಎಂ.ಮುತ್ತುರಾಜ್, ದೇವರಾಜ ಉಪವಿಭಾಗದ ಎಸಿಪಿ ಶಶಿಧರ್, ಎನ್‍ಆರ್ ಉಪ ವಿಭಾಗದ ಎಸ್.ವಿ ಶಿವಶಂಕರ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.

ಸಂಚಾರ ವಿಭಾಗದ ಎಸಿಪಿ ಸಂದೇಶ ಕುಮಾರ ನೇತೃತ್ವದಲ್ಲಿ ಸಂಚಾರಿ ಪೊಲೀ ಸರು, ಪುರಭವನದ ಸುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿ ಗಳಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ದ್ದರು. ಸಿಎಆರ್, ಕೆಎಸ್‍ಆರ್‍ಪಿ, ಚಾಮುಂಡಿ ಕಮಾಂಡೋ ಪಡೆ, ಮೌಂಟೆಡ್ ಪೊಲೀಸ್ ಸಿಬ್ಬಂದಿಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಯೋಜಿಸಲಾ ಗಿತ್ತು. ಮಸೀದಿಗಳು, ಉದಯಗಿರಿ, ಶಾಂತಿನಗರ, ರಾಜೀವ್‍ನಗರ, ಎನ್.ಆರ್, ಮೊಹಲ್ಲಾ, ಮಂಡಿ, ಲಷ್ಕರ್ ಮೊಹಲ್ಲಾ ಗಳಲ್ಲಿ ಮಧ್ಯಾಹ್ನದ ನಂತರವೂ ಪೊಲೀಸ್ ತುಕಡಿಗಳನ್ನು ನಿಯೋಜಿಸಿ ಆಯಾ ಠಾಣೆಗಳ ಇನ್ ಸ್ಪೆಕ್ಟರ್‍ಗಳು ಗಸ್ತು ತಿರು ಗುತ್ತಿದ್ದು, ಕಾನೂನು-ಸುವ್ಯವಸ್ಥೆಗೆ ಭಂಗ ಬಾರದಂತೆ ಎಚ್ಚರ ವಹಿಸಿದ್ದರು.

Translate »