ತುರ್ತು ಸರ್ವ ಸದಸ್ಯರ ಸಭೆ ಕರೆಯಲು ವಕೀಲರ ಆಗ್ರಹ
ಮೈಸೂರು

ತುರ್ತು ಸರ್ವ ಸದಸ್ಯರ ಸಭೆ ಕರೆಯಲು ವಕೀಲರ ಆಗ್ರಹ

December 17, 2019

ಮೈಸೂರು,ಡಿ.16-ಜಿಲ್ಲಾ ವಕೀಲರ ಸಂಘದ ಗೌರವ ಮಣ್ಣುಪಾಲು ಮಾಡಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ತುರ್ತಾಗಿ ಸರ್ವ ಸದಸ್ಯರ ಸಭೆ ಕರೆಯಬೇಕೆಂದು  ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆನಂದಕುಮಾರ್ ಅವರಿಗೆ ಕೆಲ ವಕೀಲರು ಮನವಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಕಚೇರಿಯಲ್ಲಿ ಇಂದು ಸಂಘದ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ ವಕೀಲರು, ತುರ್ತಾಗಿ ಸರ್ವ ಸದಸ್ಯರ ಸಭೆ ಕರೆಯದಿದ್ದರೆ, ಪಟ್ಟಭದ್ರ ಹಿತಾಶಕ್ತಿಗಳು ಸಂಘವನ್ನು ಇಬ್ಭಾಗ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿದ್ದಾರೆ. ಅಖಿಲ ಭಾರತೀಯ ವಕೀಲರ ಒಕ್ಕೂಟದ ಹೆಸರಿನಲ್ಲಿ ನಡೆದ ಸಮಾವೇಶದಲ್ಲಿ ಮೈಸೂರು ಜಿಲ್ಲಾ ವಕೀಲರ ಸಂಘದ ಗೌರವವನ್ನು ಮಣ್ಣುಪಾಲು ಮಾಡಿ, ರಾಜ್ಯ ಮಟ್ಟದಲ್ಲಿ ಸಂಘಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಸಮಾವೇಶದ ಉಸ್ತುವಾರಿ ಮಸಿಹಿಸಿದ್ದ ಪಿ.ಪಿ. ಬಾಬುರಾಜ್ ನಮ್ಮ ಸಂಘದ ಸದಸ್ಯರೇ ಆಗಿದ್ದರೂ, ಸಂಘದ ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ನಡೆದುಕೊಂಡಿ ದ್ದಾರೆ. ಸಂಘದ ಅಧ್ಯಕ್ಷರಿಗೂ ಗೌರವ ನೀಡದೇ ಅಗೌರವದಿಂದ ನಡೆಸಿಕೊಳ್ಳಲಾಗಿದೆ. ವಕೀಲರ ಸಂಘದ ಸದಸ್ಯರಿಗೆ ಸಮಾವೇಶದಲ್ಲಿ ಭಾಗವಹಿಸಲು ಬಾಬುರಾಜ್ ಅವರೇ ಆಹ್ವಾನ ನೀಡಿದ್ದು, ಸಮಾವೇಶಕ್ಕೆ ತೆರಳಿದ ಸದಸ್ಯರನ್ನು ಅವಮಾನ ಮಾಡಿ ಹೀನಾಯವಾಗಿ ನಡೆಸಿಕೊಳ್ಳಲಾಗಿದೆ. ಸಂಘಕ್ಕೂ ಸಮಾವೇಶಕ್ಕೂ ಸಂಬಂಧವಿಲ್ಲದಿದ್ದರೂ ಕಾರ್ಯಕ್ರಮದ ಆರ್ಥಿಕ ಕ್ರೋಢೀಕರಣಕ್ಕೆ ಹಾಗೂ ನ್ಯಾ. ಸಂತೋಷ್ ಹೆಗ್ಡೆ ಅವರನ್ನು ಕರೆತರುವ ಉದ್ದೇಶದಿಂದ ಇದು ಮೈಸೂರು ಜಿಲ್ಲಾ ವಕೀಲರ ಸಂಘದ ಕಾರ್ಯಕ್ರಮ ಎಂದು ಬಿಂಬಿಸುವ ರೀತಿ ಮಾಹಿತಿ ನೀಡಲಾಗಿದೆ. ಹಲವು ನಿರ್ಣಯಗಳನ್ನು ಮೈಸೂರು ಜಿಲ್ಲಾ ವಕೀಲರ ಸಂಘದ ನಿರ್ಣಯವೆಂಬಂತೆ ಬಿಂಬಿಸಲಾಗಿದೆ. ಕೇಂದ್ರ ಸರ್ಕಾರ ಪಾಸ್ ಮಾಡಿರುವ ಕ್ಯಾಬ್ ಬಿಲ್ಲನ್ನು ಸಾರಾಸಗಟಾಗಿ ವಿರೋಧಿಸಲು ನಿರ್ಣಯ ಕೈಗೊಂಡಿದ್ದು, ಈ ಬಿಲ್‍ನ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡಲಾಗಿದೆ. ಇದರಿಂದ ಮೈಸೂರು ಜಿಲ್ಲಾ ವಕೀಲರ ಸಂಘಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾರ್ಯಕ್ರಮದ ಪ್ರತಿ ಹಂತದಲ್ಲೂ ಸಂಘದ ಹೆಸರು ಬಳಸಿಕೊಳ್ಳಲಾಗಿದೆ. ಅಲ್ಲದೆ ಸಂಘಕ್ಕಾಗಲೀ, ಸದಸ್ಯರಿಗಾಗಲೀ ಗೌರವ ಕೊಡಲಿಲ್ಲ. ಈ ಎಲ್ಲಾ ಬೆಳವಣಿಗೆಗೆ ಕಾರಣ ರಾದವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕಾಗಿದೆ. ಈ ಮೂಲಕ ಕಳೆದು ಹೋಗಿರುವ ಸಂಘದ ಗೌರವವನ್ನು ಎತ್ತಿ ಹಿಡಿಯಬೇಕಾಗಿದೆ. ಸಂಘವನ್ನು ದುರುಪಯೋಗಪಡಿಸಿಕೊಂಡು, ಕೆಟ್ಟ ಹೆಸರು ತರುವವರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಬೇಕಾಗಿರುವುದ ರಿಂದ ತುರ್ತಾಗಿ ಸರ್ವಸದಸ್ಯರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಕೀಲರು ಮನವಿ ಮಾಡಿದ್ದಾರೆ.

 

Translate »