ಶಾಲಾ ಮಕ್ಕಳ ಸುರಕ್ಷತೆಗಾಗಿ ನಗರ ಪೊಲೀಸ್ ಆಯುಕ್ತರಿಂದ ಹಲವು ಮಾರ್ಗೋಪಾಯ
ಮೈಸೂರು

ಶಾಲಾ ಮಕ್ಕಳ ಸುರಕ್ಷತೆಗಾಗಿ ನಗರ ಪೊಲೀಸ್ ಆಯುಕ್ತರಿಂದ ಹಲವು ಮಾರ್ಗೋಪಾಯ

May 6, 2019

ಮೈಸೂರು: ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಬರುವ ಪೂರ್ವ ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆವರೆಗಿನ ಮಕ್ಕಳ ಸುರಕ್ಷತೆಗಾಗಿ 9ಕ್ಕೂ ಹೆಚ್ಚು ಅಂಶಗಳ ಮಾರ್ಗೋಪಾಯಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಶುಕ್ರವಾರ ಆದೇಶಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಪೂರ್ವ ಪ್ರಾಥಮಿಕದಿಂದ ಪ್ರೌಢಶಿಕ್ಷಣ ದವರೆಗೆ ವ್ಯಾಸಂಗ ಮಾಡುತ್ತಿರುವ ಮಕ್ಕಳ ಸುರಕ್ಷತೆಗಾಗಿ ಆಯಾಯ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದ್ದು, ವಿವರ ಇಂತಿದೆ.
ಶಾಲಾ ವಾಹನಗಳು ಖಾಸಗಿಯವರ ನಿರ್ವಹಣೆಯಲ್ಲಿ ದ್ದಲ್ಲಿ, ಅಂತಹ ಪ್ರತಿವಾಹನದಲ್ಲಿ ಮಕ್ಕಳ ಪಿಕಪ್ ಅಂಡ್ ಡ್ರಾಪ್ ಮಾಡುವವರಿಗೆ ಶಾಲಾ ವತಿಯಿಂದ ಓರ್ವ ಪುರುಷ ಮತ್ತು ಮಹಿಳಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನಿಯೋಜಿಸಬೇಕು.

ಸಾರಿಗೆ ಇಲಾಖೆಯಿಂದ ನಿಗದಿಪಡಿಸಿರುವ ಸೀಟುಗಳಿಗಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಬಾರದು. ಪ್ರತಿ ಶಾಲಾ ವಾಹನಕ್ಕೆ ಕಡ್ಡಾಯವಾಗಿ ಜಿಪಿಎಸ್ ಉಪಕರಣವನ್ನು ಅಳವಡಿಸಿ, ಅದು ಸದಾ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು.

ಚಾಲಕರು ಚಾಲನಾ ಪರವಾನಿಗೆ(ಡ್ರೈವಿಂಗ್ ಲೈಸನ್ಸ್) ಹೊಂದಿರುವುದನ್ನು ಖಚಿತ ಪಡಿಸಿಕೊಳ್ಳಬೇಕು ಹಾಗೂ ಚಾಲಕನ ಪೂರ್ವಪರ ನಡತೆಯ ಬಗ್ಗೆ ಕಡ್ಡಾಯವಾಗಿ ಪೊಲೀಸ್ ಪರಿಶೀಲನಾ ವರದಿಯನ್ನು ಪಡೆದುಕೊಳ್ಳಬೇಕು.

ಚಾಲಕರ ಯಾವುದೇ ರೀತಿಯ ತಪ್ಪುಗಳು, ಕಾನೂನಿನ ನೀತಿ-ನಿಯಮಗಳ ಉಲ್ಲಂಘನೆ ಗಳಿಗೆ ಸಂಬಂಧಿಸಿದಂತೆ ವಾಹನದ ಮಾಲೀಕರೇ ಸಂಪೂರ್ಣ ಹೊಣೆಗಾರರಾಗಬೇಕೆಂದು ಶಾಲಾ ಆಡಳಿತ ಮಂಡಳಿ, ಖಾಸಗಿ ವಾಹನ ಮಾಲೀಕ ರೊಂದಿಗೆ ಲಿಖಿತ ಒಡಂಬಡಿಕೆ ಮಾಡಿಕೊಳ್ಳ ಬೇಕು ಹಾಗೂ ವಾಹನಗಳಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಬೇಕು.

ಶಾಲಾ ವಾಹನ/ಬಸ್ಸುಗಳು ಮತ್ತು ಇತರೆ ವಾಹನಗಳ ಚಾಲಕರಿಗೆ ನಿಗದಿಪಡಿಸಿದ ವಾಹನಗಳಲ್ಲಿಯೇ ಇರಬೇಕು. ಅನಗತ್ಯವಾಗಿ ಶಾಲಾ ಆವರಣ ದಲ್ಲಿ ಎಲ್ಲೆಂದರಲ್ಲಿ ತಿರುಗಾಡದಂತೆ ವಿಶೇಷವಾಗಿ ಶಾಲಾ ಮಕ್ಕಳೊಂದಿಗೆ ಅನಗತ್ಯ ಮಾತನಾಡುವುದಾಗಲೀ ಅಥವಾ ಇನ್ನಿತರೆ ಚಟುವಟಿಕೆಗಳಲ್ಲಿ ತೊಡಗುವುದಾಗಲೀ ಅದರಲ್ಲೂ ಶಾಲಾ ಮಕ್ಕಳ ಗೌರವಕ್ಕೆ ಧಕ್ಕೆ ಉಂಟಾಗುವ ರೀತಿ ವರ್ತಿಸದಂತೆ ಸೂಕ್ತ ಸಲಹೆ ನೀಡಬೇಕು.

ಶಾಲೆಯ ಆಟದ ಮೈದಾನ. ಈಜುಕೊಳ, ಪ್ರಯೋಗಶಾಲೆ, ಗ್ರಂಥಾಲಯ, ಡ್ಯಾನ್ಸಿಂಗ್ ಹಾಲ್, ವ್ಯಾಯಾಮ ಶಾಲೆ ಮುಂತಾದ ಸ್ಥಳಗಳಲ್ಲಿ ಆಯಾ ವಿಷಯಗಳಿಗೆ ಸಂಬಂಧ ಪಟ್ಟ ಶಿಕ್ಷಕರು/ಮೇಲ್ವಿಚಾರಕರು ಮಾತ್ರವೇ ಹಾಜರಿರುವಂತೆ ಹಾಗೂ ಅನಗತ್ಯವಾಗಿ ಸಂಬಂಧಪಡದ ವ್ಯಕ್ತಿಗಳು ಈ ಸ್ಥಳಗಳಿಗೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸತಕ್ಕದ್ದು.

ಶಾಲೆಯ ನೆಲ ಮಹಡಿ ಅದಕ್ಕೂ ಹೆಚ್ಚಿನ ಮಹಡಿಗಳಿದ್ದಲ್ಲಿ ಪ್ರತಿ ಮಹಡಿಗೊಬ್ಬರಂತೆ ವೀಕ್ಷಕರನ್ನು ನೇಮಿಸುವುದು. ಈ ಸಿಬ್ಬಂದಿಗಳಿಗೆ ಆಯಾಯ ಮಹಡಿಗಳಲ್ಲಿ ಪಾರದರ್ಶಕವಾದ ಚೌಕಿಗಳನ್ನು ನಿರ್ಮಿಸಿ, ಅಲ್ಲಿಂದ ಎಲ್ಲಾ ದಿಕ್ಕುಗಳಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ನಿಗಾ ಇಡುವಂತೆ ಸೂಕ್ತ ವ್ಯವಸ್ಥೆ ಮಾಡುವುದು. ಈ ಸಿಬ್ಬಂದಿ ಆಯಾಯ ಮಹಡಿಗಳಲ್ಲಿ ದೈನಂದಿನ ಚಟುವಟಿಕೆಗಳನ್ನು ಹೊರತುಪಡಿಸಿ ಯಾರಾದರೂ ವ್ಯಕ್ತಿಗಳ ವಿಶೇಷ ಚಲನವಲನ ಅಥವಾ ಅಪರೂಪದ ಚಟುವಟಿಕೆಗಳು ಕಂಡು ಬಂದರೆ ಅಂತಹವರ ಮೇಲೆ ನಿಗಾವಹಿಸಿ ಸೂಕ್ತ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ಶಾಲೆಯ ಆವರಣ ಹಾಗೂ ಕಟ್ಟಡವನ್ನೊಳಗೊಂಡಂತೆ ಸಮಗ್ರ ಅಧ್ಯಯನ ನಡೆಸಿ ಸೂಕ್ತ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ, ಸದಾ ಚಾಲ್ತಿಯಲ್ಲಿರಬೇಕು. ಇವುಗಳ ನಿರ್ವಹಣೆಗೆ ನುರಿತ ಸಿಬ್ಬಂದಿಯನ್ನು ನೇಮಿಸಿ, ಏನಾದರೂ ಅಪರೂಪದ ಹಾಗೂ ವಿಶೇಷ ಪ್ರಸಂಗಗಳು ಕಂಡು ಬಂದಲ್ಲಿ ಕೂಡಲೇ ಆಡಳಿತ ಮಂಡಳಿಯವರು ಸೂಕ್ತ ಕ್ರಮವಹಿಸತಕ್ಕದ್ದು.

ಮಕ್ಕಳ ಪೋಷಕರಿಗೆ ಗುರುತಿನ ಚೀಟಿಯನ್ನು ನೀಡಬೇಕು. ಈ ಗುರುತಿನ ಚೀಟಿಯಲ್ಲಿ ಅವರ ಮಕ್ಕಳ ಭಾವಚಿತ್ರ ಅಂಟಿಸಿ ರುವ ಗುರುತಿನ ಚೀಟಿ ನೀಡಬೇಕು. ಪ್ರತಿ ಮಕ್ಕಳ ಪೋಷಕರು, ಶಾಲೆಗೆ ತಮ್ಮ ನಿಗದಿತ ಮೊಬೈಲ್ ನಂಬರ್ ನೊಂದಾಯಿಸಿ, ತುರ್ತು ಸಂದರ್ಭದಲ್ಲಿ ಸಂದೇಶ ರವಾನಿಸಬೇಕು. ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಕ್ರೆಡೆನ್ಷಿಯಲ್ಸ್ ಮತ್ತು ಹಾಜರಾತಿ ಪ್ರಕಾರ ಪೊಲೀಸ್ ಇಲಾಖೆ ವ್ಯವಸ್ಥೆ ಮೂಲಕ ಎಲ್ಲರಿಗೂ ಗುರುತಿನ ಚೀಟಿ ನೀಡತಕ್ಕದ್ದು. ಪ್ರತಿ ಶಾಲೆಗೆ ಅಗತ್ಯತೆ ತಕ್ಕಂತೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿ, ಶಾಲಾ ಕರ್ತವ್ಯದ ಅವಧಿಯಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಭದ್ರತೆ ಪರಿಶೀಲಿಸತಕ್ಕದ್ದು, ಶಾಲೆಯ ಸಮಸ್ತ ವಿದ್ಯಾರ್ಥಿ ಸಮೂಹದ ಭದ್ರತೆ ದೃಷ್ಟಿಯಿಂದ ಕಲಂ 31 ಕರ್ನಾಟಕ ಪೊಲೀಸ್ ಕಾಯ್ದೆ ಅನ್ವಯ ಎಲ್ಲಾ ಸೂಚನೆಗಳನ್ನು 2019ರ ಜೂ.1ರೊಳಗೆ ತಪ್ಪದೆ ಜಾರಿಗೆ ತರಬೇಕು ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇಶಿಸಿದ್ದಾರೆ.

Translate »