ಇದು ಮಾವಿನ ಹಣ್ಣಿನ ಸುವಾಸನೆ ಸಮಯ
ಮೈಸೂರು

ಇದು ಮಾವಿನ ಹಣ್ಣಿನ ಸುವಾಸನೆ ಸಮಯ

May 6, 2019

ಮೈಸೂರು: ಇದು ಮಾವಿನ ಹಣ್ಣಿನ ಸುವಾಸನೆ ಸೂಸುವ ಸಮಯ. ಆದರೆ ತಾಪಮಾನ ತಂದ ಆಪತ್ತಿನಿಂದ ಇದರ ಸುವಾಸನೆ ಕಳೆದ ವರ್ಷಕ್ಕಿಂತ ಕಡಿಮೆ ಆಗಲಿದೆ ಎಂದು ಅಂದಾಜಿಸಿದ್ದು, ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಮಾವು ಬೆಳೆಗಾರರಿಗೆ ನಿರಾಸೆ ಮೂಡಿಸಿದೆ.

ಮೈಸೂರು ಜಿಲ್ಲೆಯಲ್ಲಿ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 61,025 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. 2017-18ರ ಸಾಲಿ ನಲ್ಲಿ ಜಿಲ್ಲೆಯಲ್ಲಿ 4,144 ಹೆಕ್ಟೇರ್ ಪ್ರದೇಶ ಗಳಲ್ಲಿ ಮಾವು ಬೆಳೆಯಲಾಗಿದ್ದು, ಒಟ್ಟು 34,701 ಟನ್‍ಗಳಷ್ಟು ಇಳುವರಿ ಲಭಿಸಿತ್ತು ಎಂಬುದನ್ನು ತೋಟಗಾರಿಕೆ ಇಲಾಖೆ ಅಂಕಿ-ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.

2018-19ರ ಸಾಲಿನಲ್ಲಿ ಸುಮಾರು 4,136 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಈ ಬಾರಿ ತಾಪ ಮಾನದ ಹೊಡೆತದಿಂದ ಕಡಿಮೆ ಉತ್ಪಾದನೆ ಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಈ ಸಾಲಿನಲ್ಲಿ ಜಿಲ್ಲೆಯ ಬಹುತೇಕ ಮಾವಿನ ತೋಟಗಳಲ್ಲಿ ಮರಗಳಲ್ಲಿ ಉತ್ತಮವಾಗಿ ಹೂಗಳು ಬಿಟ್ಟಿದ್ದವು. ಇದರಿಂದ ಹೆಚ್ಚಿನ ಇಳುವರಿ ಲಭಿಸುವ ನೀರಿಕ್ಷೆ ಸಹಜವಾಗಿಯೇ ಮೂಡಿತ್ತು. ಆದರೆ ತಾಪಮಾನ ಇದಕ್ಕೆ ತಣ್ಣೀರೆರಚಿದ್ದು, ಸುಡು ಬಿಸಿಲಿಗೆ ಹೂವುಗಳು ಹಾಗೂ ಹೀಚು ಕಾಯಿಗಳು ಒಣಗಿ ಉದುರಿವೆ.

ಮೈಸೂರು ತಾಲೂಕಿನ ಇಲವಾಲ, ಹುಲ್ಲಹಳ್ಳಿ ಹಾಗೂ ಕೆ.ಆರ್.ನಗರ, ಹೆಚ್.ಡಿ.ಕೋಟೆ, ನಂಜನಗೂಡು, ಪಿರಿ ಯಾಪಟ್ಟಣ, ಹುಣಸೂರು ತಾಲೂಕಿನ ವಿವಿಧ ಭಾಗಗಳಲ್ಲಿ ಮಾವು ಬೆಳೆಯ ಲಾಗುತ್ತದೆ. ಬಾದಾಮಿ, ರಸಪುರಿ, ಮಲ ಗೋವಾ, ತೋತಾಪುರಿ, ಮಲ್ಲಿಕಾ, ದಶೇರಿ ಮೊದಲಾದ ತಳಿಗಳು ಇಲ್ಲಿ ಸ್ಥಾನ ಪಡೆದಿವೆ.

ಮೈಸೂರಿನ ದೇವರಾಜ ಮಾರುಕಟ್ಟೆ ಸೇರಿದಂತೆ ನಗರದ ಹಣ್ಣಿನ ಮಳಿಗೆಗಳು ಹಾಗೂ ವಿವಿಧ ಭಾಗಗಳ ರಸ್ತೆಬದಿಗಳ ಲ್ಲೀಗ ಮಾವಿನ ಹಣ್ಣುಗಳದ್ದೇ ಕಾರು ಬಾರು. ಮೇ ಮೊದಲ ವಾರಕ್ಕೆ ಬಹುತೇಕ ಎಲ್ಲಾ ತಳಿಗಳು ಮಾರುಕಟ್ಟೆಗೆ ಲಗ್ಗೆ ಇಡ ಲಿದ್ದು, ಆ ಬಳಿಕ ಜುಲೈವರೆಗೆ ಮಾವಿನ ವಿವಿಧ ತಳಿಗಳ ರುಚಿ ಮನೆ ಮಾತಾಗಲಿದೆ.

ದೇವರಾಜ ಮಾರುಕಟ್ಟೆಯಲ್ಲಿ ಬಾದಾಮಿ, ರಸಪುರಿ ಹಾಗೂ ಅಲ್ಫಾನ್ಸೊ ಮಾವು ಗ್ರಾಹಕರನ್ನು ಹೆಚ್ಚಾಗಿ ಸೆಳೆಯುತ್ತಿದ್ದು, ಮಾವಿನ ಹಣ್ಣುಗಳ ವ್ಯಾಪಾರ ಭರ್ಜರಿ ಯಾಗಿದೆ. ಮಾರುಕಟ್ಟೆಯಲ್ಲಿ ಈ ಮೂರು ತಳಿಗಳು ಹೆಚ್ಚಾಗಿ ಮಾರಾಟವಾಗುತ್ತಿವೆ ಎನ್ನುತ್ತಾರೆ ಇಲ್ಲಿನ ವ್ಯಾಪಾರಿ ಸೈಯದ್. ಬಾದಾಮಿ 120 ರೂ., ರಸಪುರಿ 80 ರೂ., ಅಲ್ಫಾನ್ಸೊ 140 ರೂ., ಮಲಗೋವಾ 100 ರೂ.ಗೆ (ಕೆಜಿಗೆ) ಸದ್ಯ ಮಾರಾಟ ಮಾಡ ಲಾಗುತ್ತಿದೆ ಎಂದು ಇವರು ತಿಳಿಸಿದರು.

ಮಾವು ಮಾಗಿಸಲು ರಾಸಾಯನಿಕ ಬಳಸಿದರೆ ದಂಡ
ರಾಸಾಯನಿಕ ಬಳಸದಂತೆ ವರ್ತಕರಿಗೆ ಅರಿವು ಮೂಡಿಸಲು ಇಂದು ಸಭೆ
ಮೈಸೂರು: ಮಾವು ಮಾಗಿಸಲು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಕ್ಯಾಲ್ಸಿಯಂ ಕಾರ್ಬೈಡ್ ಸೇರಿದಂತೆ ಯಾವುದೇ ರಾಸಾಯನಿಕ ಬಳಸದಂತೆ ನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿ ವರ್ತಕರಿಗೆ ಈಗಾಗಲೇ ಅರಿವು ಮೂಡಿಸಿದೆ.

ಕೆಲ ವ್ಯಾಪಾರಿಗಳು ಲಾಭ ದಾಸೆಗಾಗಿ ರಾಸಾಯನಿಕ ಬಳಸಿ ಅವಧಿಗೂ ಮುನ್ನವೇ ಮಾವಿನ ಕಾಯಿಗಳನ್ನು ಕೃತಕವಾಗಿ ಮಾಗಿಸಿ ಮಾರಾಟ ಮಾಡುತ್ತಾರೆ. ಇದು ಆರೋಗ್ಯಕ್ಕೆ ಹಾನಿಕರವಾಗಲಿದ್ದು, ಈ ಬಗ್ಗೆ ನಗರ ಪಾಲಿಕೆಯು ವರ್ತಕರಲ್ಲಿ ಅರಿವು ಮೂಡಿಸಿದೆ ಯಲ್ಲದೆ, ರಾಸಾಯನಿಕ ಬಳಸಿದರೆ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.

ಈ ಸಂಬಂಧ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪಾಲಿಕೆ ಆರೋಗ್ಯಾ ಧಿಕಾರಿ ಡಾ.ನಾಗರಾಜು, ರಾಸಾಯನಿಕ ಬಳಸದೇ ನೈಸರ್ಗಿಕವಾಗಿ ಕಾಯಿಗಳನ್ನು ಮಾಗಿಸುವಂತೆ ವರ್ತಕರಿಗೆ ಅರಿವು ನೀಡಲಾಗಿದೆ. ಅದಾಗ್ಯೂ ರಾಸಾಯನಿಕ ಬಳಸುವುದು ಕಂಡುಬಂದರೆ ಹಣ್ಣುಗಳನ್ನು ವಶಪಡಿಸಿಕೊಳ್ಳುವ ಜೊತೆ ದಂಡವನ್ನೂ ಹಾಕಲಾಗುತ್ತದೆ. ಜೊತೆಗೆ ನಾಳೆ (ಮೇ 6) ಬೆಳಿಗ್ಗೆ 11ಕ್ಕೆ ಮೈಸೂರಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಮಾವು ಬೆಳೆಗಾರರು, ಮಾವಿನ ಹಣ್ಣು ಮಾರಾಟಗಾರರ ಸಭೆ ಕರೆದಿದ್ದು, ಈ ವೇಳೆ ಮತ್ತೊಮ್ಮ ರಾಸಾಯನಿಕ ಬಳಸದಂತೆ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

Translate »