ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ
ಮೈಸೂರು

ವಿದ್ಯಾರ್ಥಿಗಳಿಂದ ಸ್ವಚ್ಛತಾ ಅಭಿಯಾನ, ಜಾಗೃತಿ ಜಾಥಾ

December 1, 2018

ಮೈಸೂರು:  ಮನೆ ಗೊಂದು ಶೌಚಾಲಯ ಕಡ್ಡಾಯ, ಸ್ವಚ್ಛತೆ ಎಲ್ಲಿದೆಯೋ ಅಲ್ಲಿದೆ ಆರೋಗ್ಯ, ಸ್ವಚ್ಛ ಭಾರತ- ಸ್ವಸ್ಥ ಭಾರತ, ಸ್ವಚ್ಛ ಭಾರತ- ಸಮಾಜಕ್ಕೆ ಹಿತ ಎಂಬ ಘೋಷ ವಾಕ್ಯ ಗಳೊಂದಿಗೆ ವಿದ್ಯಾರ್ಥಿಗಳು ಶುಕ್ರವಾರ ಮೈಸೂರಿನ ಶಾರದಾದೇವಿನಗರದ ಪ್ರಮುಖ ರಸ್ತ್ತೆಗಳಲ್ಲಿ ಸ್ವಚ್ಛತಾ ಅಭಿಯಾನ – ವಿಶೇಷ ಜಾಗೃತಿ ಜಾಥಾ ನಡೆಸಿದರು.

ಮೈಸೂರಿನ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, ಮೈಸೂರು ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿ ವೃದ್ಧಿ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಶಾರದ ಎಜುಕೇಷನಲ್ ಟ್ರಸ್ಟ್, ಇಂದಿರಾ ವಿದ್ಯಾ ಸಂಸ್ಥೆ, ಜನಶಿಕ್ಷಣ ಸಂಸ್ಥೆ, ವಿವೇಕಾನಂದ ಯೂತ್ ಮೂಮೆಂಟ್ ಜಂಟಿ ಆಶ್ರಯದಲ್ಲಿ ನೂರಾರು ಮಕ್ಕಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಹಸಿ ಕಸ, ಒಣ ಕಸ ಮೂಲದಲ್ಲೇ ಬೇರ್ಪಡಿಸಿ, ನಿಮ್ಮ ಮನೆ, ರಸ್ತೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯ ವನ್ನು ಕಾಪಾಡಿಕೊಳ್ಳಿ ಎಂದು ವಿದ್ಯಾರ್ಥಿ ಗಳು ಜನರಲ್ಲಿ ಅರಿವು ಮೂಡಿಸಿದರು.

ಮೊದಲಿಗೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗ ನ್ನಾಥ್ ಜಾಗೃತಿ ಜಾಥಾಗೆ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರಿನ ಸ್ವಚ್ಛತೆಗೆ ಪಾಲಿಕೆ ಆದ್ಯತೆ ನೀಡಿದ್ದು, ಮೈಸೂರು ನಗರವನ್ನು ಮತ್ತೊಮ್ಮೆ ನಂಬರ್ ಒನ್ ಸ್ಥಾನಕ್ಕೆ ತರಲು ಶ್ರಮಿಸುತ್ತಿದೆ. ಅದಕ್ಕಾಗಿ ನಗರದ ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಸಂಘ ಸಂಸ್ಥೆಗಳನ್ನು ಸ್ವಚ್ಛತಾ ಅಭಿಯಾನಕ್ಕೆ ಒಳಪಡಿಸಿಕೊಳ್ಳ ಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸ್ವಚ್ಛತೆಯ ಅರಿವು ಉಂಟಾದರೆ ಅವರು ತಮ್ಮ ಮನೆಯ ಪೋಷಕರಿಗೆ ತಿಳಿಸುವ ಜೊತೆಗೆ ತಮ್ಮ ಮನೆ ಮತ್ತು ಬೀದಿಯ ಸ್ವಚ್ಛತೆ ಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಟಿ.ಸಿ. ಪೂರ್ಣಿಮಾ ಮಾತನಾಡಿ, ಸ್ವಚ್ಛತಾ ಪಾಕ್ಷಿಕ ಕಾರ್ಯ ಕ್ರಮದ ಮೂಲಕ ಮೈಸೂರಿನ ಎಲ್ಲಾ ವಾರ್ಡ್‍ಗಳಲ್ಲೂ ಬೀದಿ ನಾಟಕ, ಗೋಡೆ ಚಿತ್ರಕಲೆ, ಮನೆ ಮನೆ ಭೇಟಿ ಮೂಲಕ ಸ್ವಚ್ಛತೆಯ ಅರಿವು ಮೂಡಿಸಲಾಗುವುದು. ಜನರಿಗೆ ಸ್ವಚ್ಛತೆಯ ಸಂದೇಶ ಹರಡ ಲಾಗುವುದು ಎಂದು ಹೇಳಿದರು.
ಮೈಸೂರು ಮಹಾನಗರಪಾಲಿಕೆ ಸದಸ್ಯೆ ನಿರ್ಮಲಾ ಕೆ.ಹರೀಶ್, ಆಯುಕ್ತ ಕೆ.ಎಚ್. ಜಗದೀಶ್, ಇಂದಿರಾ ಪ್ರೌಢಶಾಲೆಯ ಸಂಸ್ಥಾ ಪಕ ಕಾರ್ಯದರ್ಶಿ ಎಚ್.ಆರ್.ನಾರಾ ಯಣ್, ಜನ ಶಿಕ್ಷಣ ಸಂಸ್ಥೆ ನಿರ್ದೇಶಕ ಎ.ಪಿ.ರಮೇಶ್ ಇನ್ನಿತರರು ಭಾಗವಹಿಸಿದ್ದರು.

Translate »