ಕೆರೆ ಸ್ವಚ್ಛಗೊಳಿಸಿದ ಕೊತ್ತತ್ತಿ ಗ್ರಾಮದ ಯುವಕರು
ಮಂಡ್ಯ

ಕೆರೆ ಸ್ವಚ್ಛಗೊಳಿಸಿದ ಕೊತ್ತತ್ತಿ ಗ್ರಾಮದ ಯುವಕರು

October 22, 2018

ಮಂಡ್ಯ:  ಹಳ್ಳಿಗರ ಜೀವಾಳವೆಂದರೆ ಕೆರೆಗಳು. ಇತ್ತೀಚೆಗೆ ಕೆರೆಗಳಲ್ಲಿ ಹೂಳು ತುಂಬಿಕೊಂಡು ರೈತರಿಗೆ ಆತಂಕ ತಂದಿದೆ. ಸರ್ಕಾರಗಳು ಕೆರೆಗಳ ರಕ್ಷಣೆಗೆ ಮುಂದಾಗುತ್ತವೆ ಎಂಬ ನಂಬಿಕೆ ಈಗ ರೈತರಲ್ಲಿ ಇಲ್ಲ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ರೈತರು, ಗ್ರಾಮದ ಯುವಕರು ಕೆರೆಗಳ ಸ್ವಚ್ಛತೆಗೆ ಮುಂದಾಗಿದ್ದಾರೆ. ಸರ್ಕಾರದ ಹಣಕ್ಕೆ ಆಸೆ ಪಡೆದೇ, ತಾವೇ ಖುದ್ದು ಹಣ ಹಾಕಿ ಕೆರೆಗಳ ರಕ್ಷಣೆಗೆ ಮುಂದಾಗಿದ್ದಾರೆ. ಇದಕ್ಕೆ ಕೊತ್ತತ್ತಿ ಗ್ರಾಮದ ಯುವಕರು ಗ್ರಾಮದ ಕೆರೆಯನ್ನು ಸ್ವಚ್ಛಗೊಳಿಸುತ್ತಿರುವುದೇ ನಿದರ್ಶನವಾಗಿದೆ.

ಇತ್ತೀಚೆಗೆ ಕೆರೆಗಳಲ್ಲಿ ಹೂಳು ತುಂಬಿಕೊಂಡು ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರಗಳು ಹೂಳು ತೆಗೆಯಲು ಮುಂದಾಗದ ಹಿನ್ನೆಲೆಯಲ್ಲಿ ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದ ಯುವ ಪಡೆ ಸ್ವಂತ ಹಣದಲ್ಲಿ ಕೆರೆ ಸಂರಕ್ಷಣೆಗೆ ಮುಂದಾಗಿದೆ. ಕೆರೆ ಸಂರಕ್ಷಣಾ ಸಮಿತಿ ಕಟ್ಟಿಕೊಂಡು ಇಂದಿನಿಂದ ಕೆರೆಯ ಸ್ವಚ್ಛತಾ ಕಾರ್ಯಕ್ಕೆ ಕೈ ಹಾಕಿದ್ದಾರೆ. ಗ್ರಾಮದ ಯುವಕರೆಲ್ಲಾ ಸ್ವಚ್ಛತಾ ಕೆಲಸಕ್ಕೆ ಕೈ ಹಾಕಿದ್ದು, ಕೆರೆಯಲ್ಲಿ ಬೆಳೆದಿದ್ದ ಹೂಳು ತೆಗೆದು ಸ್ವಚ್ಛಗೊಳಿಸಿದರು.

ಬೆಳಿಗ್ಗೆಯಿಂದಲೇ ತೆಪ್ಪದಲ್ಲಿ ಕೆರೆಯ ಮಧ್ಯಭಾಗಕ್ಕೆ ಹೋಗುತ್ತೇವೆ, ಕೆರೆಯಲ್ಲಿ ಬೆಳೆದಿರುವ ಕಳೆಯನ್ನು ಕತ್ತರಿಸಿ, ನಂತರ ಟ್ರಾಕ್ಟರ್‍ಗೆ ಹಗ್ಗವನ್ನು ಕಟ್ಟಿ ಕೆರೆಯಿಂದ ಹೊರಕ್ಕೆ ಎಳೆದು ತಂದು ದೂರಕ್ಕೆ ಸಾಗಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರತಿ ನಿತ್ಯ ಕೆರೆಯ ಸ್ವಚ್ಛತೆಗೆ ಟೊಂಕ ಕಟ್ಟಿದ್ದು, ಸ್ವಚ್ಛತಾ ಕಾರ್ಯ ಮುಗಿಯುವ ವರೆಗೂ ಕೆಲಸದಲ್ಲಿ ತಲ್ಲೀನರಾಗಿದ್ದೇವೆ ಎನ್ನುತ್ತಾರೆ ಗ್ರಾಮದ ನವೀನ್, ಮತ್ತು ರವಿ.

ಯುವಕರ ಈ ಕಾರ್ಯಕ್ಕೆ ಗ್ರಾಮಸ್ಥರು ಸಾಥ್ ನೀಡಿದ್ದಾರೆ. ಜೊತೆಗೆ ಎಲ್ಲಾ ರೀತಿಯ ಸಹಾಯ ಹಸ್ತ ಚಾಚಿದ್ದು, ರೈತರು ಮುಂದೆ ನಿಂತು ಸಲಹೆ ನೀಡುತ್ತಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದು ಉಪನ್ಯಾಸಕ ಸಂತೋಷ್ ಹೇಳಿದರು.

Translate »