ನಾಳೆ ಬಿಎಸ್‍ವೈ ನೇತೃತ್ವದಲ್ಲಿ ಬಹಿರಂಗ ಸಭೆ
ಮಂಡ್ಯ

ನಾಳೆ ಬಿಎಸ್‍ವೈ ನೇತೃತ್ವದಲ್ಲಿ ಬಹಿರಂಗ ಸಭೆ

October 22, 2018

ಕೆ.ಆರ್.ಪೇಟೆ:  ಲೋಕಸಭಾ ಉಪ ಚುನಾವಣೆ ಹಿನ್ನಲೆಯಲ್ಲಿ ಅ. 23ರಂದು ಪಟ್ಟಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಹಿರಂಗ ಸಭೆಯು ನಡೆಯಲಿದ್ದು, ಸಭೆಯಲ್ಲಿ ತಾಲೂಕಿನ ಎಲ್ಲಾ 6 ಹೋಬಳಿಗಳಿಂದ 25 ಸಾವಿರ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿ ದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಡಾ. ಸಿದ್ದರಾಮಯ್ಯ ತಿಳಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಮತ್ತು ಪಿಎಸ್ ಎಸ್‍ಕೆ ಸಕ್ಕರೆ ಕಾರ್ಖಾನೆಗಳ ಪುನಶ್ಚೇತನಕ್ಕೆ ಸಾಕಷ್ಟು ಅನುದಾನ ನೀಡಿ ರೈತರಿಗೆ ನೆರವಾಗಿದ್ದರು. ಹಾಗಾಗಿ, ಜಿಲ್ಲೆಯ ಜನತೆ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಣಿಕೆ ನೀಡಬೇಕು ಎಂದರು.

ಚುನಾವಣೆಗೂ ಮುನ್ನಾ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಸ್ತ್ರೀಶಕ್ತಿ ಸಂಘದ ಸಾಲವನ್ನು ಮನ್ನಾ ಮಾಡು ತ್ತೇನೆ ಎಂದು ಭರವಸೆ ನೀಡಿದರು. ಆದರೆ, ಅವರ ಅಧಿಕಾರಕ್ಕೆ ಬಂದು 6 ತಿಂಗಳಾ ದರೂ ಸಾಲಮನ್ನಾ ಮಾಡಿಲ್ಲ. ಹಾಗಾಗಿ, ಜೆಡಿಎಸ್ ವಿರುದ್ಧ ಸ್ತ್ರೀ ಸಂಘದ ಸದಸ್ಯರು ಅಸಮಾಧಾನಗೊಂಡಿದ್ದು, ಲೋಕಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್‍ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ಲೋಕಸಭಾ ಉಪ ಚುನಾವಣೆಯ ಸಮರವು ನ್ಯಾಯ-ಅನ್ಯಾಯಗಳ ನಡುವೆ ನಡೆಯುತ್ತಿರುವ ಹೋರಾಟವಾಗಿದೆ. ಬಿಜೆಪಿ ಅಭ್ಯರ್ಥಿಯಾದ ನಾನು ಗೆದ್ದರೆ ಮಂಡ್ಯ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದ ನಿಮ್ಮ ಒಂದೊಂದು ಮತವನ್ನೂ ನರೇಂದ್ರ ಮೋದಿ ಅವರಿಗೆ ನೀಡಿ ಸುಭದ್ರ ರಾಷ್ಟ್ರದ ನಿರ್ಮಾಣಕ್ಕಾಗಿ ದುಡಿಯುತ್ತಿರುವ ಬಿಜೆಪಿಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ಉಸ್ತು ವಾರಿ ಈ.ಅಶ್ವತ್ಥನಾರಾಯಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಗಣ್ಣಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಬೂಕನಹಳ್ಳಿ ಮಂಜುನಾಥ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಳಾದ ಡಾ.ಪಾರ್ಥಸಾರಥಿ, ಕೆ.ಜೆ. ವಿಜಯ ಕುಮಾರ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಭರತ್‍ಕುಮಾರ್, ಪ್ರಧಾನ ಕಾರ್ಯದರ್ಶಿ ಬಿ.ಸಿ.ಹರೀಶ್, ಬಿಜೆಪಿ ಮಾಧ್ಯಮ ಕಾರ್ಯ ದರ್ಶಿ ಬೂಕನಕೆರೆ ಮಧುಸೂಧನ್ ಇದ್ದರು.

Translate »