ಆರೋಗ್ಯ, ಶಿಕ್ಷಣ ಇಲಾಖೆಯ ನೌಕರರ 15 ಸಿಎಲ್, 2 ಪಿಎಲ್ ರಜೆ ಮುಂದುವರೆಸಲು ಸಿಎಂ ಆದೇಶ
ಮೈಸೂರು

ಆರೋಗ್ಯ, ಶಿಕ್ಷಣ ಇಲಾಖೆಯ ನೌಕರರ 15 ಸಿಎಲ್, 2 ಪಿಎಲ್ ರಜೆ ಮುಂದುವರೆಸಲು ಸಿಎಂ ಆದೇಶ

December 1, 2019

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರಿಗೆ ಈ ಹಿಂದೆ 2 ಮತ್ತು 4ನೇ ಶನಿವಾರದಂದು ರಜೆಯನ್ನು ನೀಡಲಾಗುತ್ತಿತ್ತು. ಇದರ ಜೊತೆಗೆ 15 ಸಾಂದರ್ಭಿಕ ರಜೆಯನ್ನು 10ಕ್ಕೆ ಇಳಿಸಲಾಗಿತ್ತು. ಆದರೆ ಆರೋಗ್ಯ ಮತ್ತು ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಈ ದಿನಗಳಲ್ಲಿ ಕೂಡ ಕೆಲಸ ಮಾಡುತ್ತಿದ್ದರಿಂದ ಅನ್ಯಾಯ ಉಂಟಾಗಿತ್ತು. ಹೀಗಾಗಿ ಇಂತಹ ಇಲಾಖೆಯ ನೌಕರರಿಗೆ ಇದೀಗ 15 ಸಾಂದರ್ಭಿಕ ರಜೆಯ ಜೊತೆಗೆ, 2 ಪರಿಮಿತ ರಜೆಯನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಹಲವಾರು ವರ್ಷಗಳಿಂದಲೂ ತಿಂಗಳ ಎರಡನೇ ಶನಿವಾರ ರಜೆ ನೀಡಲಾಗುತ್ತಿತ್ತು. ಆದರೆ 13-06-2019ರಿಂದ ಎರಡನೇ ಶನಿವಾರ ಮತ್ತು 4ನೇ ಶನಿವಾರ ಕೂಡ ರಜೆ ಘೋಷಣೆ ಮಾಡುವ ಮೂಲಕ, ಸಾಂದರ್ಭಿಕ ರಜೆಯನ್ನು 15ರಿಂದ 10ಕ್ಕೆ ಇಳಿಕೆ ಮಾಡಲಾಗಿತ್ತು. ಆದರೆ ಇಂತಹ ನಿಯಮ ದಿಂದಾಗಿ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಅನಾನುಕೂಲ ಆಗುತ್ತಿದೆ ಎಂಬುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮನವಿ ಮಾಡಿದ್ದರು. ಈ ಕುರಿತಂತೆ ಪರಿಶೀಲನೆ ನಡೆಸಿದ ಯಡಿಯೂರಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಕೋರಿಕೆಯಂತೆ ಶಿಕ್ಷಣ ಇಲಾಖೆಯ ಹಾಗೂ ಆರೋಗ್ಯ ಇಲಾಖೆಯಲ್ಲಿ ಯಾರು ಪ್ರತಿ ತಿಂಗಳು 2ನೇ ಶನಿವಾರ ಹಾಗೂ 4ನೇ ಶನಿವಾರದ ರಜೆಗಳನ್ನು ಪಡೆಯುವುದಿಲ್ಲವೋ ಅಂತಹ ಸರ್ಕಾರಿ ನೌಕರರಿಗೆ ಈ ಹಿಂದೆ ಇದ್ದಂತೆ 15 ಸಾಂದರ್ಭಿಕ ರಜೆ ಹಾಗೂ 2 ಪರಿಮಿತ ರಜೆಗಳನ್ನು ಮುಂದುವರೆಸುವಂತೆ ಸೂಚಿಸಿ ಆದೇಶ ಹೊರಡಿಸಿದ್ದಾರೆ.

Translate »