ಕಾವೇರಿಗೆ ಸಿಎಂ ಯಡಿಯೂರಪ್ಪ ಬಾಗಿನ
ಮೈಸೂರು

ಕಾವೇರಿಗೆ ಸಿಎಂ ಯಡಿಯೂರಪ್ಪ ಬಾಗಿನ

August 30, 2019

ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕೆಆರ್‍ಎಸ್‍ನಲ್ಲಿ ಜೀವನದಿಗೆ ಭಕ್ತಿ ಸಮರ್ಪಣೆ
ಮಂಡ್ಯ, ಆ.29(ನಾಗಯ್ಯ,ವಿನಯ್)- ಜೀವನದಿ ಕಾವೇರಿಗೆ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಾಗಿನ ಸಮರ್ಪಿಸಿದರು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೈಸೂರಿನಿಂದ ಕೆಆರ್‍ಎಸ್‍ಗೆ ಆಗಮಿಸಿದ ಅವರು, ಮಧ್ಯಾಹ್ನ 12.50ರ ಅಭಿಜಿನ್ ಶುಭಲಗ್ನದಲ್ಲಿ ಕಾವೇರಿಗೆ ಪೂಜೆ ಸಲ್ಲಿಸಿ, ಸಂಪ್ರದಾಯದಂತೆ ಬಾಗಿನ ಅರ್ಪಿಸಿದರು.

ಮೊರದಲ್ಲಿ ಸೀರೆ, ಕುಪ್ಪಸ(ರವಿಕೆ ಕಣ),ಹೂ, ಹಣ್ಣು, ಕಾಯಿ, ಬಳೆ, ಅರಿಶಿಣ, ಕುಂಕುಮ, ಅಕ್ಕಿ ಇತರೆ ಸಾಮಗ್ರಿಗಳನ್ನೊಳ ಗೊಂಡ 20 ಜೊತೆ ಬಾಗಿನವನ್ನು ವಿಧಿ ವಿಧಾನದಂತೆ ಕಾವೇರಿಗೆ ಸಮರ್ಪಿಸಲಾಯಿತು. ಮುಖ್ಯಮಂತ್ರಿಗಳೊಂದಿಗೆ ಕಂದಾಯ ಸಚಿವ ಆರ್.ಅಶೋಕ್, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪರಿಮಳಾ ಶ್ಯಾಮ್, ಶಾಸಕರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸುರೇಶ್‍ಗೌಡ, ಬಿ.ಹರ್ಷವರ್ಧನ, ರವೀಂದ್ರ ಶ್ರೀಕಂಠಯ್ಯ ಮತ್ತಿತರರು ಬಾಗಿನ ಅರ್ಪಣೆ ಸತ್ಕಾರ್ಯದಲ್ಲಿ ಭಾಗಿಯಾದರು. ಪ್ರತಿ ವರ್ಷದಂತೆ ಶ್ರೀರಂಗಪಟ್ಟಣದ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಕೃಷ್ಣಭಟ್, ರಮೇಶ್ ಶರ್ಮಾ, ರಾಘ ವೇಂದ್ರ ಶರ್ಮಾ, ಭರತ್ ಶರ್ಮಾ ಅವರನ್ನೊಳಗೊಂಡ ಪುರೋಹಿತರ ತಂಡ ಬಾಗಿನ ಸಾಮಗ್ರಿ ಗಳನ್ನು ಸಿದ್ಧಪಡಿಸಿ, ಪೂಜಾ ಕೈಂಕರ್ಯ ನೆರವೇರಿಸಿಕೊಟ್ಟರು. ಮುಖ್ಯಮಂತ್ರಿಯಾಗಿ 4ನೇ ಬಾರಿ ಕಾವೇರಿಗೆ ಬಾಗಿನ ಅರ್ಪಿಸಿದ ಹೆಗ್ಗಳಿಕೆಗೆ ಬಿ.ಎಸ್.ಯಡಿಯೂರಪ್ಪನವರು ಪಾತ್ರರಾದರು. ಈ ಹಿಂದೆ 2008ರಿಂದ ಸತತವಾಗಿ ಮೂರು ಬಾರಿ ಬಾಗಿನ ಅರ್ಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇವರೊಂದಿಗೆ ಬಂಗಾರಪ್ಪ, ಎಸ್.ಎಂ.ಕೃಷ್ಣ, ಜೆ.ಹೆಚ್.ಪಟೇಲ್, ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾಗಿದ್ದಾಗ ತಲಾ 3 ಬಾರಿ ಬಾಗಿನ ಅರ್ಪಿಸಿದ್ದರು. ಇಂದು ಯಡಿಯೂರಪ್ಪ 4ನೇ ಬಾರಿಗೆ ಬಾಗಿನ ಸಮರ್ಪಿಸಿದ್ದು ಹೊಸ ದಾಖಲೆಯಾಗಿದೆ.

ಕೆರೆ-ಕಟ್ಟೆಗಳ ಭರ್ತಿಗೆ ಕ್ರಮ: ಕಾವೇರಿಗೆ ಬಾಗಿನ ಸಮರ್ಪಿಸಿದ ಬಳಿಕ ವೇದಿಕೆ ಕಾರ್ಯ ಕ್ರಮದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ವರುಣ ದೇವನ ಕೃಪೆಯಿಂದ ರಾಜ್ಯದ ಎಲ್ಲಾ ಅಣೆಕಟ್ಟುಗಳು ಭರ್ತಿಯಾಗಿದ್ದು, ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಕಾರ್ಯ ಭರದಿಂದ ಸಾಗಿದೆ. ಕೆಆರ್‍ಎಸ್ ಅಣೆಕಟ್ಟೆ ಸಂಪೂರ್ಣವಾಗಿ ತುಂಬಿರುವುದು ಮಂಡ್ಯ ಹಾಗೂ ಮೈಸೂರು ಭಾಗದ ರೈತರಲ್ಲಿ ಸಂತಸ ಮೂಡಿಸಿದೆ. ಈ ಭಾಗದ ಎಲ್ಲಾ ಕೆರೆಗಳ ಹೂಳು ತೆಗೆಸಿ, ಹೆಚ್ಚಿನ ಪ್ರಮಾಣದ ನೀರನ್ನು ಶೇಖರಣೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕೆಆರ್‍ಎಸ್‍ನಿಂದ ತಮಿಳುನಾಡಿಗೆ ಬಿಡಬೇಕಾದ ನೀರನ್ನು ಈಗಾಗಲೇ ಬಿಡಲಾಗಿದೆ. ಹಾಗಾಗಿ ನಮ್ಮ ರೈತರು ಆತಂಕಪಡುವ ಅಗತ್ಯವಿಲ್ಲ. ಅಲ್ಲದೇ ಬೆಂಗಳೂರು, ಮೈಸೂರು ನಗರದ ಜನರಿಗೂ ಕುಡಿಯುವ ನೀರಿಗೆ ತೊಂದರೆಯಾಗುವುದಿಲ್ಲ. ಪ್ರವಾಸಿ ತಾಣವೂ ಆಗಿರುವ ಕೆಆರ್‍ಎಸ್‍ಗೆ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮತ್ತಷ್ಟು ಆಕರ್ಷಣೀಯ ತಾಣವನ್ನಾಗಿ ಅಭಿವೃದ್ಧಿಪಡಿಸಲು ಸರ್ಕಾರ ಸಿದ್ಧವಿದೆ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ಕೆಲವೇ ದಿನಗಳಲ್ಲಿ ಅಧಿಕಾರಿಗಳ ಸಭೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು. ಇಲ್ಲಿನ ಕುಟುಂಬಗಳಿಗೆ ಹಕ್ಕು ಪತ್ರ ನೀಡಿ ಕೆಆರ್‍ಎಸ್ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಮಾಡಲು ಕಾನೂನು ಸಲಹೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಮಂಡ್ಯ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಕಬ್ಬು ಬೆಳೆಯುವುದರಿಂದ ಮಂಡ್ಯದ ಮೈ ಶುಗರ್ ಕಾರ್ಖಾನೆ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಸೂಕ್ತ ಸಂದರ್ಭದಲ್ಲಿ ಪುನರ್ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಸಕ್ಕರೆ ಕಾರ್ಖಾನೆ ಆರಂಭ: ಕನ್ನಂಬಾಡಿ ಗ್ರಾಮದಲ್ಲಿ ನನ್ನ ತಾತ ಇದ್ದರು. ಬೂಕನಕೆರೆ ಯಲ್ಲಿ ನನ್ನ ತಂದೆ ಇದ್ದರು. ದಸರಾ ನೋಡಲು ನಾನು ಇಲ್ಲಿಗೆ ಬರುತ್ತಿದ್ದೆ. ಈಗ ಈ ಭಾಗವನ್ನು ಅಭಿವೃದ್ಧಿಪಡಿಸುವ ಸೌಭಾಗ್ಯ ನನ್ನದಾಗಿದೆ. ಅತೀ ಶೀಘ್ರದಲ್ಲಿ ಮೈಷುಗರ್ ಕಾರ್ಖಾನೆ, ಪಾಂಡವಪುರ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಪುನರಾರಂಭ ಮಾಡಲು ಹಣಕಾಸಿನ ನೆರವು ನೀಡಲಿದ್ದೇನೆ. ಕಾರ್ಖಾನೆಗಳು ಮುಚ್ಚಿದೆ ಎಂಬ ಮಾತನ್ನು ನಾವು ಮತ್ತೊಮ್ಮೆ ಕೇಳಬಾರದು. ಯಡಿಯೂರಪ್ಪ ಭರವಸೆ ಕೊಟ್ಟರೆ ಅದು ಬರೀ ಭರವಸೆಯಾಗುವುದಿಲ್ಲ. ಕಾರ್ಯರೂಪಕ್ಕೆ ಬಂದೇ ಬರುತ್ತದೆ. ಕೆಲವು ಜಿಲ್ಲೆಗಳಲ್ಲಿ ಬರಗಾಲವಿದ್ದರೆ, ಕೆಲವು ಜಿಲ್ಲೆಗಳಲ್ಲಿ ಅತಿವೃಷ್ಟಿಯಾಗಿದೆ. ಕೇಂದ್ರದಿಂದ ಸಹಕಾರ ನೀಡುವ ಭರಸವೆಯನ್ನು ಪ್ರಧಾನಿ ಮೋದಿ ನೀಡಿದ್ದಾರೆ.

ಈಗ ಸಿಎಂಗೆ ತಲೆನೋವಾದ ಜಿಲ್ಲಾ ಉಸ್ತುವಾರಿ ನೇಮಕ
ಬೆಂಗಳೂರು, ಆ.29- ಸಾಕಷ್ಟು ಸರ್ಕಸ್ ನಡೆಸಿ ಖಾತೆಗಳನ್ನು ಹಂಚಿಕೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡುವುದು ಈಗ ಮತ್ತೊಂದು ರೀತಿಯ ತಲೆ ನೋವಾಗಿ ಪರಿಣಮಿಸಿದೆ. ಕೆಲವರು ತಮಗೆ ಇಂತಹದ್ದೇ ಜಿಲ್ಲೆಯ ಉಸ್ತುವಾರಿ ನೀಡಬೇಕೆಂದು ಈಗಾಗಲೇ ಬಿಎಸ್‍ವೈ ಬಳಿ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಬೇಕು ಎಂಬುದು ಕಗ್ಗಂಟಾಗಿದೆ.

ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರ, ಬಳ್ಳಾರಿ, ಬೆಳಗಾವಿ ಸೇರಿದಂತೆ ಪ್ರಮುಖ ಜಿಲ್ಲೆಗಳ ಹೊಣೆಗಾರಿಕೆಯನ್ನು ಯಾರಿಗೆ ನೀಡುವುದು ಎಂಬುದೇ ತಲೆನೋವಾಗಿದೆ. ಬೆಂಗ ಳೂರು ಮಹಾನಗರದಿಂದ ಯಡಿಯೂರಪ್ಪ ಸಂಪುಟಕ್ಕೆ ನಾಲ್ವರು ಸಚಿವರನ್ನು ತೆಗೆದುಕೊಳ್ಳಲಾಗಿದೆ. ಕಂದಾಯ ಸಚಿವ ಆರ್. ಅಶೋಕ್, ಉಪಮುಖ್ಯಮಂತ್ರಿ
ಡಾ.ಸಿ.ಎನ್.ಅಶ್ವತ್‍ನಾರಾಯಣ, ವಸತಿ ಸಚಿವ ವಿ.ಸೋಮಣ್ಣ ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್.ಅಶೋಕ್‍ಗೆ ಬೆಂಗಳೂರು ನಗರ ಉಸ್ತುವಾರಿ ನೀಡಲಾಗಿತ್ತು. ಜೊತೆಗೆ ಮಂಡ್ಯ ಹೊಣೆಗಾರಿಕೆಯನ್ನೂ ವಹಿಸಲಾಗಿತ್ತು. ಆದರೆ ಈಗ ಅಶ್ವತ್‍ನಾರಾಯಣ ಉಪಮುಖ್ಯಮಂತ್ರಿಯಾಗಿರುವುದರಿಂದ ಯಾರಿಗೆ ಉಸ್ತುವಾರಿ ಕೊಡಬೇಕೆಂಬ ಜಿಜ್ಞಾಸೆ ಎದುರಾಗಿದೆ. ಒಕ್ಕಲಿಗ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ ಅಶ್ವತ್‍ನಾರಾಯಣಗೆ ಡಿಸಿಎಂ ಸ್ಥಾನ ಕಲ್ಪಿಸಲಾಗಿದೆ. ಹೀಗಾಗಿ ಮೈಸೂರು ಭಾಗದಲ್ಲಿ ಅವರಿಗೆ ಹೊಣೆಗಾರಿಕೆ ಸಿಗುವ ಸಂಭವವಿದೆ. ಆದರೆ ಅವರು ತಮಗೆ ಬೆಂಗಳೂರು ನಗರದ ಉಸ್ತುವಾರಿ ನೀಡುವಂತೆ ಮನವಿ ಮಾಡಿದ್ದಾರೆ. ಹಿರಿತನದಲ್ಲಿ ಸುರೇಶ್‍ಕುಮಾರ್ ಹಾಗೂ ಅಶೋಕ್ ಅವರನ್ನು ಕಡೆಗಣಿಸುವಂತಿಲ್ಲ. ಮುಂದೆ ಮಹಾನಗರಪಾಲಿಕೆಯಲ್ಲಿ ಚುಕ್ಕಾಣಿ ಹಿಡಿಯುವ ಅಗತ್ಯವಿರು ವುದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹೊಣೆಗಾರಿಕೆ ಬಿಎಸ್‍ವೈ ಮೇಲಿದೆ.

ಅಶೋಕ್ ಮುನಿಸಿಕೊಳ್ಳಬಾರದೆಂಬ ಕಾರಣಕ್ಕಾಗಿ ಬೆಂಗಳೂರು ಹೊಣೆಗಾರಿಕೆ ನೀಡಿದರೆ, ಅಶ್ವತ್‍ನಾರಾಯಣಗೆ ಮಂಡ್ಯ ಅಥವಾ ರಾಮನಗರದ ಉಸ್ತುವಾರಿ ಸಿಗಲಿದೆ.ಕುಂದಾ ನಗರಿ ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಜಿಲ್ಲಾ ಉಸ್ತುವಾರಿಯ ಆಕಾಂಕ್ಷಿಯಾಗಿದ್ದಾರೆ.

ಅನರ್ಹಗೊಂಡಿರುವ ರಮೇಶ್‍ಜಾರಕಿ ಹೊಳಿ ಮುಂದೆ ಸಂಪುಟಕ್ಕೆ ತೆಗೆದುಕೊಳ್ಳ ಬೇಕೆಂಬ ಲೆಕ್ಕಾಚಾರ ಬಿಎಸ್‍ವೈ ಅವರಲ್ಲಿದೆ. ಅಲ್ಲದೆ, ಉಮೇಶ್‍ಕತ್ತಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಅವರು ಸಂಪುಟಕ್ಕೆ ಸೇರ್ಪಡೆಯಾದರೆ ಅವರಿಗೂ ಉಸ್ತುವಾರಿ ನೀಡಬೇಕಾಗುತ್ತದೆ. ಹೀಗಾಗಿಯೇ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸರ್ಕಾರಕ್ಕೆ ಸವಾಲಾಗಿದೆ. ಇದೇ ರೀತಿ ಗಣಿ ಜಿಲ್ಲೆ ಬಳ್ಳಾರಿಯ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಕಣ್ಣಿಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನಿಂದ ಅವರು ಗೆದ್ದಿದ್ದರೂ ತವರು ಜಿಲ್ಲೆ ಮೇಲೆ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿದ್ದಾರೆ. ತಮಗೆ ಕಡೇ ಪಕ್ಷ ಡಿಸಿಎಂ ಸ್ಥಾನವನ್ನೂ ನೀಡಿಲ್ಲ. ಬಳ್ಳಾರಿ ಹೊಣೆಗಾರಿಕೆಯನ್ನಾದರೂ ನೀಡಬೇಕೆಂದು ಕೋರಿದ್ದಾರೆ. ಉಳಿದಂತೆ ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಶಿವಮೊಗ್ಗವನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರಿಗೆ ಕೊಪ್ಪಳ ಇಲ್ಲವೆ, ದಾವಣಗೆರೆ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ.

ಹಾವೇರಿ ಹೊಣೆಗಾರಿಕೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ನೀಡುವ ಸಾಧ್ಯತೆ ಇದೆ. ಅನರ್ಹಗೊಂಡಿರುವ ಬಿ.ಸಿ.ಪಾಟೀಲ್ ಮುಂದೆ ಸಂಪುಟಕ್ಕೆ ಸೇರ್ಪಡೆಯಾದರೆ ಬದಲಾವಣೆ ಮಾಡುವ ಸಂಭವವಿದೆ ಎಂದು ತಿಳಿದುಬಂದಿದೆ.

ಸೆ.7ಕ್ಕೆ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ
ಬೆಂಗಳೂರು, ಆ.29- ಸೆಪ್ಟಂಬರ್ 7ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರಿಗೆ ಪ್ರವಾಹದ ಬಗ್ಗೆ ಮನವರಿಕೆ ಜತೆಗೆ ಹೆಚ್ಚಿನ ಪರಿಹಾರ ನೀಡುವಂತೆ ಕೋರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಭಿಯಾನವಾದ ಫಿಟ್ ಇಂಡಿಯಾ ಅಭಿಯಾನದ ಪ್ರಯುಕ್ತ ಇಂದು ವಿಧಾನ ಸೌಧದ ಮುಂಭಾಗ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿ, ಸೆಪ್ಟೆಂಬರ್ 7ರಂದು ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ವೇಳೆ ಪ್ರವಾಹ ಪರಿಸ್ಥಿತಿಯ ಕುರಿತು ಮನ ವರಿಕೆ ಮಾಡುವ ಜತೆಗೆ ಹೆಚ್ಚಿನ ಪರಿಹಾರ ಕೋರಲಾಗುವುದು. ಕೇಂದ್ರ ಸರ್ಕಾರ ರಾಜ್ಯಕ್ಕೆ ಶೀಘ್ರ ಶುಭ ಸುದ್ದಿ ನೀಡಲಿದೆ ಎಂದು ಹೇಳಿದರು. ರಾಜ್ಯದಲ್ಲಿ ಕ್ರೀಡೆಯ ಉತ್ತೇಜನಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಶೀಘ್ರದಲ್ಲಿಯೇ ಆ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಿದೆ. ಜೊತೆಗೆ ಮೋದಿ ಅವರ ಮಹತ್ವಾಕಾಂಕ್ಷೆಯ ಫಿಟ್ ಇಂಡಿಯಾ ಅಭಿಯಾನವನ್ನು ನಾವೆಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಅಂತ ಕರೆ ನೀಡಿದರು. ಅಲ್ಲದೆ, ಈ ಇಳಿ ವಯಸ್ಸಿನಲ್ಲೂ ಹಾಕಿ ಹಾಡುವ ಮೂಲಕ ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹ ತುಂಬಿದರು. ಈ ವೇಳೆ ಕ್ರೀಡಾಪಟು ಪ್ರಕಾಶ್ ನಂಜಪ್ಪ, ಸಲ್ಮಾನ್ ಪಾಷಾ, ಅರ್ಚನಾ ಕಾಮತ್ ಸಮಾರಂಭದಲ್ಲಿ ಭಾಗಿಯಾಗಿ ಯುವ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದರು. ಅಭಿಯಾನ ಕಾರ್ಯಕ್ರಮಕ್ಕೆ ಸಚಿವರಾದ ಸಿ.ಟಿ.ರವಿ, ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಅವರು ಉಪಸ್ಥಿತರಿದ್ದರು.

ಕೊಟ್ಟ ಮಾತು ಈಡೇರಿಸದೆ ಓಡಿ ಹೋಗುವವನಲ್ಲ ಈ ಯಡಿಯೂರಪ್ಪ
ಮಂಡ್ಯ, ಆ.29(ನಾಗಯ್ಯ)- ನಾನು ಕೊಟ್ಟ ಭರವಸೆ ಕಾರ್ಯರೂಪಕ್ಕೆ ಬರಲೇ ಬೇಕು ಅನ್ನೋದು ನನ್ನ ಅಭಿಲಾಷೆ. ಸಾಧನೆ ಗಳು ಮಾತಾಗಿ ಉಳಿಯಬಾರದು. ಸಾಧನೆ ಗಳು ಮಾತಾಡುವಂತಾಗಬೇಕು ಎಂಬಂತೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಜೆಡಿಎಸ್ ಶಾಸಕರ ಸಮ್ಮುಖದಲ್ಲೇ ಹೇಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.

ಕೆಆರ್‍ಎಸ್‍ನಲ್ಲಿ ಕಾವೇರಿಗೆ ಬಾಗಿನ ಅರ್ಪಿ ಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಯಡಿಯೂರಪ್ಪ ಕೊಟ್ಟ ಮಾತು ಕೇವಲ ಭರವಸೆಯಾಗಿ ಉಳಿಯಲ್ಲ. ನಾನು ಕೊಟ್ಟ ಭರವಸೆ ಕಾರ್ಯರೂಪಕ್ಕೆ ಬರಲೇ ಬೇಕು ಅನ್ನೋದು ನನ್ನ ಅಭಿಲಾಷೆ. ಸಾಧನೆ ಗಳು ಮಾತಾಡುವಂತಾಗಬೇಕು. ನಾನು ಸಾಲ ತಂದಾದ್ರೂ ಮೈಷುಗರ್, ಪಿಎಸ್‍ಎಸ್‍ಕೆ ಕಾರ್ಖಾನೆಗಳನ್ನು ಅಭಿವೃದ್ಧಿ ಮಾಡುತ್ತೇನೆ. ವ್ಯಾಪಕ ಮಳೆಯಿಂದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ತಮಿಳುನಾಡಿಗೆ ನಿಗದಿತ ನೀರನ್ನು ಬಿಟ್ಟಿರುವುದರಿಂದ ಬಹುಮುಖ್ಯ ಸಮಸ್ಯೆಯೊಂದು ಪರಿಹಾರವಾದಂತಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಈಗಾಗಲೇ ಭರದಿಂದ ಸಾಗಿದೆ, ಕೃಷ್ಣರಾಜ ಸಾಗರವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ನಾನು ಪಣತೊಟ್ಟು ಕೆಲಸ ಮಾಡುತ್ತೇನೆ. ಇದ ಕ್ಕಾಗಿ ಅಗತ್ಯವಿರುವ ಹಣಕಾಸು ನೆರವು ನೀಡಲು ಸಿದ್ಧನಿದ್ದೇನೆ. ಕೆಆರ್‍ಎಸ್ ಸಮಗ್ರ ಅಭಿವೃದ್ಧಿ ಕುರಿತು ಅಂದಾಜು ವೆಚ್ಚ ಮತ್ತು ಯೋಜನೆ ಸಿದ್ಧಪಡಿಸಿ, ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು. ಈ ಹಿಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆ, ಅಧಿ ಕಾರಿಗಳ ಕರ್ತವ್ಯ ಲೋಪದಿಂದಾಗಿ ಮೈಷು ಗರ್, ಪಿಎಸ್‍ಎಸ್‍ಕೆ ಕಾರ್ಖಾನೆಗಳೆರಡೂ ದುಸ್ಥಿತಿಗೆ ಬಂದಿವೆ. ಆದರೆ, ನನ್ನ ಅವಧಿ ಯಲ್ಲಿ ಈ ಕಾರ್ಖಾನೆಗಳನ್ನು ಮುಚ್ಚಲು ಬಿಡೋದಿಲ್ಲ. ಸಾಲ ತಂದಾದರೂ ಸರಿ ಪುನರುಜ್ಜೀವನಗೊಳಿಸುತ್ತೇನೆ. ಈಗಾಗಲೇ ಸಂಸದೆ ಸುಮಲತಾ ಅಂಬರೀಶ್ ಅವರು ಸಂಸತ್‍ನಲ್ಲಿ ಮತ್ತು ಇಲ್ಲಿಯೂ ಕೂಡ ಇದರ ಬಗ್ಗೆ ನನ್ನ ಗಮನ ಸೆಳೆದಿದ್ದಾರೆ. ಮಂಡ್ಯ ರೈತರ ಹಿತಕ್ಕಾಗಿ ಈ ಎರಡೂ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಲು ಬದ್ಧನಾಗಿದ್ದೇನೆ. 20 ದಿನದೊಳಗೆ ಕಾರ್ಖಾನೆಗಳ ಪುನಾರಂಭಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸಮಗ್ರ ಮಾಹಿತಿ ನೀಡಬೇಕು. ಶೀಘ್ರದಲ್ಲೇ ಸ್ಥಳೀಯ ಜನಪ್ರತಿನಿಧಿಗಳ ಸಭೆ ಕರೆದು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗುವುದು. ಈ ಬಾರಿ ಬೆಳೆದಿರುವ ಕಬ್ಬನ್ನು ಬೇರೆಡೆಗೆ ಸಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷದೊಳಗೆ ಕಾರ್ಖಾನೆಗಳ ಪುನರಾರಂಭ ವಾಗಲಿದೆ ಎಂದು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಕೆಆರ್‍ಎಸ್ ಜಲಾಶಯಕ್ಕೆ ಭೂಮಿ ನೀಡಿದ ಗ್ರಾಮಸ್ಥರು ಬಹುವರ್ಷಗಳಿಂದ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸುವಂತೆ ಮನವಿ ಮಾಡುತ್ತಿದ್ದಾರೆ. ಇಲ್ಲಿನ 20 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಮೂಲಕ ಅವರ ಬೇಡಿಕೆ ಈಡೇರಿಸುವುದರ ಜೊತೆಗೆ ಶ್ರೀರಂಗಪಟ್ಟಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಒತ್ತು ನೀಡಬೇಕೆಂದು ಮನವಿ ಮಾಡಿದರು.

ಕಂದಾಯ ಸಚಿವ ಆರ್.ಅಶೋಕ್, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ, ಶಾಸಕರಾದ ಎಂ.ಶ್ರೀನಿವಾಸ್ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಡಾ.ಕೆ.ಅನ್ನದಾನಿ, ಶ್ರೀಕಂಠೇಗೌಡ, ಸುರೇಶ್‍ಗೌಡ, ಅನರ್ಹ ಶಾಸಕ ನಾರಾಯಣಗೌಡ, ಮಂಡ್ಯ ಜಿಪಂ ಅಧ್ಯಕ್ಷೆ ನಾಗರತ್ನ, ಮೈಸೂರು ಜಿಪಂ ಅಧ್ಯಕ್ಷೆ ಪರಿಮಳ ಶ್ಯಾಂ, ಮೈಸೂರು ಮೇಯರ್ ಪುಷ್ಪಲತಾ ಜಗನ್ನಾಥ್, ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮತ್ತಿತರರು ಉಪಸ್ಥಿತರಿದ್ದರು.

Translate »