ಕೋರ್ಟ್ ಆದೇಶದ ಬೆನ್ನ ಹಿಂದೆಯೇ ಡಿಕೆಶಿಗೆ ಇಡಿ ಸಮನ್ಸ್
ಮೈಸೂರು

ಕೋರ್ಟ್ ಆದೇಶದ ಬೆನ್ನ ಹಿಂದೆಯೇ ಡಿಕೆಶಿಗೆ ಇಡಿ ಸಮನ್ಸ್

August 30, 2019

ಬೆಂಗಳೂರು, ಆ.29(ಕೆಎಂಶಿ)- ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಸಮನ್ಸ್ ರದ್ದು ಪಡಿಸುವಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ಹೈಕೋರ್ಟ್ ವಜಾ ಮಾಡಿದ ಬೆನ್ನಲ್ಲೇ ಇಡಿ ಅಧಿಕಾರಿಗಳು ವಿಚಾರಣೆಗೆ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಹಾಜ ರಾಗುವಂತೆ ಡಿ.ಕೆ. ಶಿವಕುಮಾರ್ ಅವರಿಗೆ ಗುರು ವಾರ ರಾತ್ರಿ ಸಮನ್ಸ್ ಜಾರಿ ಮಾಡಿದ್ದಾರೆ. ಹೈಕೋರ್ಟ್ ಆದೇಶ ಹೊರ ಬೀಳುತ್ತಿದ್ದಂತೆಯೇ ಡಿ.ಕೆ. ಶಿವ ಕುಮಾರ್ ರಹಸ್ಯ ಸ್ಥಳಕ್ಕೆ ತೆರಳಿದ್ದರು. ಅವರು ಮುಂದಿನ ಕಾನೂನು ಹೋರಾಟದ ಬಗ್ಗೆ ತಮ್ಮ ವಕೀಲರ ಜೊತೆ ಚರ್ಚಿಸಲು ತೆರಳಿದ್ದಾರೆ ಎಂದು ಹೇಳಲಾಗಿತ್ತು.

ಡಿ.ಕೆ. ಶಿವಕುಮಾರ್ ನಿವಾಸದ ಬಳಿಯೇ ಕಾದು ಕುಳಿತಿದ್ದ ನಾಲ್ವರು ಇಡಿ ಅಧಿಕಾರಿ ಗಳು ರಾತ್ರಿ ಡಿಕೆಶಿ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಅವರಿಗೆ ಸಮನ್ಸ್ ಜಾರಿ ಮಾಡಿದರು.

ಈ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಶಿವಕುಮಾರ್, ‘ನಾಳೆ ಸಿಗೋಣ, ಮಾತಾಡೋಣ, ಎಲ್ಲರೂ ಚೆನ್ನಾಗಿ ವ್ಯಾಖ್ಯಾನ ಮಾಡಿದ್ದೀರಿ, ಮಾಡಿ ಎಲ್ಲವನ್ನೂ ಹೇಳುತ್ತೇನೆ’ ಎಂದು ಹೇಳಿ ಮನೆಯೊಳಗೆ ತೆರಳಿದರು. ಇದಕ್ಕೂ ಮುನ್ನ ಜಾರಿ ನಿರ್ದೇಶ ನಾಲಯ ತಮಗೆ ನೀಡಿದ್ದ ಸಮನ್ಸ್ ಅನ್ನು ರದ್ದು ಪಡಿಸುವಂತೆ ಡಿ.ಕೆ. ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ಕಾಯ್ದಿರಿಸಿದ್ದ ತೀರ್ಪನ್ನು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಪ್ರಕಟಿಸಿ, ಡಿಕೆಶಿ ಅರ್ಜಿಯನ್ನು ವಜಾಗೊಳಿಸಿದ್ದರು.

ಶಿವಕುಮಾರ್ ವಿರುದ್ಧ ಸೆಕ್ಷನ್ 120ಬಿ ಆರೋಪವಿದೆ. ಸೆಕ್ಷನ್ 120 ಬಿ ಜೊತೆ ಮತ್ತೊಂದು ಅಸೂಚಿತ ಪ್ರಕರಣ ಇರಬೇಕೆಂದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಇಡಿ ಸಮನ್ಸ್ ಅನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

ದಾಳಿ ಸಂದರ್ಭದಲ್ಲಿ ದೊರೆತ ಹಣದ ಬಗ್ಗೆ ಇಡಿ ಪ್ರತ್ಯೇಕ ವಿಚಾರಣೆ ನಡೆಸಬಹುದು ಎಂದು ಹೇಳಿರುವ ನ್ಯಾಯಾಲಯ, ಕಳಂಕಿತ ಹಣವನ್ನು ಆರ್ಥಿಕತೆಗೆ ತೊಡಗಿಸುವುದು ಕೂಡ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಅಂತಹ ಹಣದ ಬಗ್ಗೆ ಇಡಿ ವಿಚಾರಣೆ ನಡೆಸಬಹುದು ಎಂದು ತಿಳಿಸಿತ್ತು. ಕಳೆದ 2017 ಆಗಸ್ಟ್ 2ರಂದು ಕೇಂದ್ರ ಆದಾಯ ತೆರಿಗೆ ಇಲಾಖೆ ದೆಹಲಿಯ ಶಿವಕುಮಾರ್ ಮೂರು ನಿವಾಸಗಳ ಮೇಲೆ ದಾಳಿ ನಡೆಸಿ ಇಷ್ಟು ದೊಡ್ಡ ಪ್ರಮಾಣದ ಹಣ ಜಪ್ತಿ ಮಾಡಿತ್ತು. ಕಲಂ 277 ಹಾಗೂ 278 ಅಲ್ಲದೆ ಭಾರತ ದಂಡ ಸಂಹಿತೆ ಕಲಂ 120 ಬಿ, 193 ಹಾಗೂ 199 ರಡಿ ಪ್ರಕರಣ ದಾಖಲು ಮಾಡಿಕೊಂಡು ಆದಾಯ ಇಲಾಖೆ ನಿಯಮಾವಳಿ 1960ರಡಿ ಡಿ.ಕೆ.ಶಿವಕುಮಾರ್, ಸಚಿನ್ ನಾರಾಯಣ, ಸುನೀಲ್‍ಕುಮಾರ್ ಶರ್ಮಾ, ಆಂಜನೇಯ ಹಾಗೂ ಹನುಮಂತಪ್ಪ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ನಾವಡಗಿ ಆರೋಪಿಗಳ ವಿರುದ್ಧ ವಾದ ಮಾಡಿದರೆ, ಆರೋಪಿಗಳ ಪರ ಸುಪ್ರೀಂ ಕೋರ್ಟ್‍ನ ಖ್ಯಾತ ವಕೀಲ ಕಪೀಲ್ ಸಿಬಲ್ ಸೇರಿದಂತೆ ಹಿರಿಯ ಖ್ಯಾತ ವಕೀಲರ ತಂಡವೇ ಇವರ ಪರ ವಾದ ಮಾಡಿತ್ತು.

Translate »