ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆ
ಮೈಸೂರು

ದಸರಾ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆ

October 8, 2018

ಮೈಸೂರು:ಡ್ರಾಮಾ ಜೂನಿಯರ್ಸ್‍ನ ಅಚಿಂತ್ಯನ ಕಾಮಿಡಿ ಜಲಕ್, ಕನ್ನಡ ನಾಡು-ನುಡಿ-ಜಲ, ಮಹಿಳಾ ಸಬಲೀಕರಣ, ಕಾವೇರಿ ಕನ್ನಡಿಗರ ಸ್ವತ್ತು ಮತ್ತು ದೇಶಪ್ರೇಮದ ಸಂದೇಶ ಸಾರುವ ಮೂಲಕ 2018ರ ಯುವ ಸಂಭ್ರಮಕ್ಕೆ ವರ್ಣರಂಜಿತ ತೆರೆಬಿದ್ದಿತು.

ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ ಕಡೆಯ ದಿನವಾದ ಭಾನುವಾರ, ಕೆಲವು ಕಾಲೇಜು ವಿದ್ಯಾರ್ಥಿಗಳು ಕನ್ನಡ ನಾಡು- ನುಡಿ ಕುರಿತ ಹಾಡುಗಳಿಗೆ ನೃತ್ಯ ಪ್ರದರ್ಶಿಸಿ ಕನ್ನಡ ಪ್ರೇಮವನ್ನು ಎತ್ತಿಹಿಡಿದರೆ, ಮತ್ತೆ ಕೆಲವು ಕಾಲೇಜುಗಳು ದೇಶಪ್ರೇಮ, ರೈತ ದೇಶದ ಬೆನ್ನೆಲುಬು-ಯೋಧ ಕಳಸವಿ ದ್ದಂತೆ, ಮಹಾದಾಯಿ ನಮ್ಮ ತಾಯಿ, ಜಲ ಸಂರಕ್ಷಣೆ ನಮ್ಮ ಹೊಣೆ ಸಂದೇಶ ಗಳನ್ನು ಸಾರಿದರು.
ಚಾಮರಾಜನಗರ ಶಂಕರಪುರ ಸೇವಾ ಭಾರತಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿ ಗಳು, ಕನ್ನಡ ನೆಲ-ಜಲ ಕುರಿತ `ಬಂದ-ಬಂದ ಮೇಘ ರಾಜ ನಮ್ಮ ಊರ ಕೆರೆಗೆ’, `ಕನ್ನಡ ನಾಡಿನ ಜೀವನದಿ ಈ ಕಾವೇರಿ’, `ಅಡವಿ ದೇವಿಯ ಕಾಡು ಜನಗಳ ಈ ಹಾಡೂ ನಾಡಿನ ಜೀವ ತುಂಬಿದೆ’, ನಮ್ಮಮ್ಮ-ನಮ್ಮಮ್ಮ ಭೂಮಿ ತಾಯಮ್ಮ, ಈ ಸುಗ್ಗಿ ತಂದವಳ್ಯಾರಮ್ಮ’ ಹಾಡಿಗೆ ನೃತ್ಯ ಪ್ರದರ್ಶಿ ಸುವ ಮೂಲಕ ಕನ್ನಡ ಪ್ರೇಮವನ್ನು ಸಾರುವ ಜತೆಗೆ, ಕಾಡಿನ ನಾಶ ಪ್ರಕೃತಿ ವಿಕೋಪಕ್ಕೆ ಕಾರಣ, ಜಲ ಸಂರಕ್ಷಣೆ ನಮ್ಮ ಹೊಣೆ, ಮಹಾದಾಯಿ ನಮ್ಮ ತಾಯಿ, ಕಾವೇರಿ ಕನ್ನಡಿಗರ ಸ್ವತ್ತು ಎಂಬ ಸಂದೇಶಗಳನ್ನು ಅನಾವರಣಗೊಳಿಸಿದರು.

ಆಶಿಯಾನ್ ಬುದ್ದಿಮಾಂದ್ಯ ಶಾಲೆ, ನಿತ್ಯ ನಿರಂತರ ವಿಕಲಚೇತನರ ಶಾಲೆ, ಕೊಳ್ಳೇಗಾಲ ನಿಸರ್ಗ ಸ್ವತಂತ್ರ ಪಿಯು ಕಾಲೇಜು, ಪಿರಿಯಾ ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, `ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು, ಮೆಟ್ಟಿದರೆ ಕನ್ನಡ ಮಣ್ಣು ಮೆಟ್ಟಬೇಕು’, `ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’, ಶಿಲೆಗಳು ಸಂಗೀತವ ಹಾಡಿದೆ, ಬೇಲೂರ ಗುಡಿಯಲ್ಲಿ-ಕೇಶವನೆದುರಲ್ಲಿ’, ಕೇಳಿಸದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ’ ಹಾಡಿನ ಮೂಲಕ ಕನ್ನಡ ಪ್ರೇಮ ಮೆರೆದರು. ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ದೇಶಪ್ರೇಮ ಕುರಿತ `ಮೇರಾ ಭಾರತ್’ ಮತ್ತು ರೈತನ ಕುರಿತ `ರೈತ-ರೈತ-ರೈತ ಅನ್ನ ಕೊಡುವ ದಾತ’ ಹಾಡಿನ ಮೂಲಕ ರೈತ ದೇಶದ ಬೆನ್ನೆಲುಬು-ಯೋಧ ಕಳಸವಿದ್ದಂತೆ ಎಂಬ ಸಂದೇಶ ನೀಡಿದರು.

ಹುಣಸೂರು ಬಾಲಕಿಯರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಹೆಂಡತಿ-ತಾಯಿ-ಸಹೋದರಿಯಾಗಿ ನಿರ್ವಹಿಸುತ್ತಿರುವ ಅವಳಿಗೆ ಅವಳೇ ಸಾಟಿ. ಹೆಣ್ಣು ಮಗು ಜನಿಸಿತೆಂದು. ಶಾಲೆಗೆ ಹೋಗುತ್ತೇನೆಂದರೆ ಹೆಣ್ಣು ಮಕ್ಕಳು ಶಾಲೆಗೆ ಹೋಗಬಾರದೆಂದು ನಿಂದಿಸುವುದು. ಗಂಡ ಸತ್ತಿರುವ ನಿನಗ್ಯಾಕೆ ಇಷ್ಟು ಶೃಂಗಾರ. ಬಿಳಿಬಟ್ಟೆ ತೊಟ್ಟು ಮೂಲೆಯಲ್ಲಿ ಬಿದ್ದಿರು ಎಂದು ತೆಗಳುವ ಸನ್ನಿವೇಶಗಳನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಜತೆಗೆ ದೌರ್ಜನ್ಯ ವನ್ನು ತಡೆಯಲು ದುರ್ಗಿಯಾಗಿ ತಮ್ಮ ರಕ್ಷಣೆಗೆ ತಾವೇ ನಿಲ್ಲುವ ಮೂಲಕ ಹೆಣ್ಣು ಒಲಿದರೆ ನಾರಿ-ಮುನಿದರೆ ಮಾರಿ ಎಂಬುದನ್ನು ನೃತ್ಯದ ಮೂಲಕ ಕಟ್ಟಿಕೊಡು ವಲ್ಲಿ ಯಶಸ್ವಿಯಾದರು.

ಕಿಲಾ-ಕಿಲಾ ನಾ ಬರಕಿಲ: ಡ್ರಾಮ ಜ್ಯೂನಿ ಯರ್ಸ್ ಚಿಂತ್ಯ-ಅಚಿಂತ್ಯ, `ಕಿಲಾ-ಕಿಲಾ ನಾ ಬರಕಿಲ. ಅದೇನ್ ಮಾಡ್ಕೋತಿಯೋ ಮಾಡ್ಕೊ ಹೋಗ್. ಈ ಗೆರೆ ದಾಟಿ ನಾನು ಬರಕಿಲ-ನೀನು ಬರಬೇಡ. ಮಾತು ಮಾತಾಗಿರಬೇಕು. ಅಣ್ತಮ್ಮ ಎಲ್ರು ಆಟೋ ಡ್ರೈವರ್ ಆಗೋ ಮುಂಚೆ ಶಂಕ್ರಣ್ಣನ್ ಫ್ಯಾನೇ ಕಣೋ ಎಂದು ಹೇಳುವ ಮೂಲಕ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ಕೋಚಿಂಗ್‍ನಲ್ಲಿ 2018ರ ದ್ರೋಣಾ ಚಾರ್ಯ ಪ್ರಶಸ್ತಿ ಪಡೆದ ಕೊಡಗಿನ ಕುಟ್ಟಪ್ಪ ಅವರನ್ನು ಜಿಲ್ಲಾ ಪೊಲೀಸ್ ವÀರಿಷ್ಠಾಧಿ ಕಾರಿ ಅಮಿತ್ ಸಿಂಗ್, ಯುವದಸರಾ ಉಪ ಸಮಿತಿಯ ಕಾರ್ಯಾಧ್ಯಕ್ಷ ಎಂ.ಎನ್.ನಟ ರಾಜ್, ಕಾರ್ಯದರ್ಶಿ ಡಿ.ಬಿ.ಲಿಂಗಣ್ಣಯ್ಯ ಅವರು ಸನ್ಮಾನಿಸಿದರು.

Translate »