ಪ್ರಕಾಶ್ ರೈ ಅಂಕಣ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ
ಮೈಸೂರು

ಪ್ರಕಾಶ್ ರೈ ಅಂಕಣ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ

October 8, 2018

ಮೈಸೂರು: ಚಿತ್ರನಟ ಪ್ರಕಾಶ್ ರೈ ಅವರ ಅಂಕಣ ಬರಹಗಳ ಸಂಗ್ರಹ `ಅವರವರ ಭಾವಕ್ಕೆ’ ಪುಸ್ತಕ ಹಸ್ತಾಂತರ ಕಾರ್ಯಕ್ರಮ ಮೈಸೂರಿನಲ್ಲಿ ಭಾನುವಾರ ನಡೆಯಿತು.

ಮೈಸೂರಿನ ಮಾನಸ ಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ನೆಲೆ ಹಿನ್ನೆಲೆ, ಜನಮನ ಸಾಂಸ್ಕøತಿಕ ಸಂಘಟನೆ ಹಾಗೂ ಸಾವಣ್ಣ ಪ್ರಕಾಶನದ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ, ಹಿರಿಯ ಸಾಹಿತಿ ದೇವನೂರ ಮಹಾದೇವ ಅವರಿಗೆ ಪುಸ್ತಕವನ್ನು ಹಸ್ತಾಂತರಿಸಿದರು.

ಪುಸ್ತಕ ಸ್ವೀಕರಿಸಿ ಮಾತನಾಡಿದ ದೇವನೂರ ಮಹಾದೇವ ಅವರು, ಪ್ರಕಾಶ್ ರೈ ಅವರ ಬರವಣಿಗೆಯಲ್ಲಿ ಉಗುರು ಬೆಚ್ಚನೆಯ ಜೀವಂತ ಸ್ಪರ್ಶವಿದೆ. ಇವರ ಬರವಣಿಗೆ ಹಾಗೂ ಸ್ಪಂದನೆಗಳಿಗೆ ಸಂಬಂಧವಿದೆ. ಇವರು ಆಲೋಚನೆಗಳಿಂದ ಬದುಕು ನೋಡುವುದಿಲ್ಲ. ಹೃದಯದ ಮಿಡಿತ, ಸ್ಪಂದನಗಳಿಂದ ಜೀವನವನ್ನು ಹಿಡಿಯು ತ್ತಾರೆ. ಈ ಪುಸ್ತಕವನ್ನು ಕುರಿತು ವಾರ ದಲ್ಲೇ ಒಂದು ಟಿಪ್ಪಣಿ ಬರೆಯುತ್ತೇನೆಂದು ಹೇಳಿ ಶುಭ ಕೋರಿದರು.

ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ ಮಾತನಾಡಿ, ಪ್ರಯಾಣ ಹಾಗೂ ಪ್ರವಾಸದ ನಡುವೆ ವ್ಯತ್ಯಾಸವಿದೆ. ಪೂರ್ವ ಯೋಜಿತವಾಗಿ ಪಟ್ಟಿ ಮಾಡಿಕೊಂಡು ಸ್ಥಳಗಳಿಗೆ ಹೋಗುವುದು ಪ್ರವಾಸ. ಆದರೆ ಪ್ರಯಾಣ ಇದಕ್ಕೆ ಭಿನ್ನವಾದುದು. ಜೀವನವೇ ಒಂದು ಪ್ರಯಾಣ. ಯಾವುದೇ ಮುಂದಾ ಲೋಚನೆಗಳಿಲ್ಲದೆ, ಹೆಜ್ಜೆ ಹಾಕುತ್ತೇವೆ. ಹೀಗೆಯೇ ಇಂದು ಮೊದಲ ಬಾರಿಗೆ ನನ್ನ ಹಾಗೂ ಪ್ರಕಾಶ್ ರೈ ಅವರ ಮೊದಲ ನೇರ ಭೇಟಿಯಾಗಿದೆ ಎಂದು ಹೇಳಿದರು.

ಪ್ರಕಾಶ್ ರೈ ಅದ್ಭುತ ನಟ ಎಂಬ ಚಿತ್ರಣ ಎಲ್ಲರ ಮನಸ್ಸಿನಲ್ಲಿದೆ. ಅದಕ್ಕೂ ಮೀರಿದ ವ್ಯಕ್ತಿತ್ವ, ಅವರು ಬದುಕನ್ನು ನೋಡುವ ರೀತಿಯ ಬಗ್ಗೆ ತಿಳಿದುಕೊಳ್ಳಬೇಕೆಂಬ ಕುತೂ ಹಲ, ಈ ಪುಸ್ತಕದ ಓದಿಗೆ ಪ್ರೇರೇಪಣೆ ನೀಡು ತ್ತದೆ. ಪುಸ್ತಕ ಓದಿದಾಗ ಅವರಲ್ಲಿರುವ ವಿಭಿನ್ನತೆ ಅರಿವಿಗೆ ಬರುತ್ತದೆ. ಓದುಗರಿಗೆ ಹೆಮ್ಮೆ, ಸಂತೋಷ, ಸಂಭ್ರಮದ ಅನುಭವ ವಾಗುವುದು. ಆತ್ಮ ನಿರೂಪಣೆ, ಹಳೆಯ ನೆನಪುಗಳು, ಜೀವನದಲ್ಲಿ ಬಂದು ಹೋದ ವ್ಯಕ್ತಿತ್ವಗಳು, ಜೀವನಾನುಭವ ಎಲ್ಲವನ್ನೂ ಪ್ರಕಾಶ್ ರೈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಸಾಹಿತ್ಯದ ಒಡನಾಟವಿರುವ ರೈ, ಲೋಕ ವನ್ನು ಅಂತರದೃಷ್ಟಿಯಲ್ಲಿ ನೋಡುವ ಕಣ್ಣು ಹೊಂದಿದ್ದಾರೆ. ಕಾದಂಬರಿ ಬರೆಯ ಬಹುದಾದ ಕ್ರಿಯಾಶೀಲತೆ, ಸಾಮಥ್ರ್ಯ ಇವರಲ್ಲಿದೆ ಎಂದು ಬಣ್ಣಿಸಿದರು.

`ನಾನು ಚೆನ್ನಾಗಿದ್ದರೆ ಪ್ರಪಂಚ ಚೆನ್ನಾಗಿ ರುತ್ತದೆ ಅಂದುಕೊಂಡಿದ್ದೆ. ಆದರೆ ಪ್ರಪಂಚ ಚೆನ್ನಾಗಿದ್ದರೆ ನಾನು ಚೆನ್ನಾಗಿರುತ್ತೇನೆ ಎಂಬುದು ನನಗೀಗ ತಿಳಿದಿದೆ’ ಎಂದು ಪ್ರಕಾಶ್ ರೈ ಅಂಕಣವೊಂದರ ಕೊನೆಯಲ್ಲಿ ಬರೆದಿದ್ದಾರೆ. ಇದು ಸಾಮಾನ್ಯ ನಿಲುವಲ್ಲ, ಪ್ರಬಲ ರಾಜ ಕೀಯ ನಿಲುವು. ಜಗತ್ತಿನ ಬದಲಾವಣೆ ತುಡಿತದಿಂದ ಈ ವಿಚಾರ ಹುಟ್ಟಿದೆ. ಜಗತ್ತು ಚೆನ್ನಾಗಿರಬೇಕೆಂಬುದು ಎಲ್ಲಾ ಸಾಹಿತಿ ಗಳ ಆಶಯ ಆದರೆ ಹಾಗೆ ಆಗುವುದಿಲ್ಲ ಎಂಬುದು ವಾಸ್ತವ. `ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಪಕ್ಷಿ ನವಿಲು ಆದರೆ ರಾಷ್ಟ್ರೀಯ ಭಾವ ಆತಂಕ’ ಎಂದು ಹೇಳಿಕೊಂಡಿದ್ದಾರೆ. ಇದು ಅಸಮಾನತೆ, ಹಿಂಸೆ, ದೌರ್ಜನ್ಯವನ್ನು ಪೋಷಿಸುವ ಭೌದ್ಧಿಕ ದ್ವೇಷವನ್ನು ಖಂಡಿಸುವಂತಿದೆ. ಪುಸ್ತಕದಲ್ಲಿರುವ ಪ್ರತಿಯೊಂದು ಅಂಕಣ ಗಳನ್ನೂ ಕಿರುಚಿತ್ರಗಳನ್ನಾಗಿ ನಿರ್ಮಿಸಬಹುದು ಎಂದು ನಾಗಭೂಷಣ ಸ್ವಾಮಿ ಹೇಳಿದರು.

ಲೇಖಕ ಪ್ರಕಾಶ್ ರೈ ಮಾತನಾಡಿ, ನನಗೆ ಬರವಣಿಗೆ ನೀಡಿದ ಮರುಹುಟ್ಟು ಅದ್ಭುತ ಎನಿಸುತ್ತದೆ. ಹಳೆಯ ನೆನಪು ಗಳು, ವ್ಯಕ್ತಿತ್ವಗಳ ಸ್ಮರಣೆಯ ಜೊತೆಗೆ ಯಾವುದೋ ಸಂಕೋಲೆಗಳಿಂದ ಹೊರ ಬಂದಂತೆ, ವಿನಯ ಹೆಚ್ಚಿದಂತೆ ಅನ್ನಿಸು ತ್ತದೆ. ಅಪ್ಪನ ಹೆಗಲನ್ನೇರಿ ಎತ್ತರದಲ್ಲಿ ಜಾತ್ರೆ ನೋಡಿದಂತೆ, ನಾನು ಅಪಾರ ಸಾಹಿತಿಗಳ, ಅನುಭವಗಳ ಹೆಗಲಲ್ಲಿ ಎತ್ತರಕ್ಕೆ ನಿಂತು ನೋಡಿದ ಭಾವನೆ ಮೂಡಿದೆ. ನನಗೆ ನೀರುಣಿಸಿದ, ಹಾಲುಣಿಸಿದ ಕನ್ನಡ ನಾಡಿನ ಪರಂಪರೆ ನನ್ನ ಕೈಹಿಡಿದಿದೆ. ಕನ್ನಡದ ಸಾಹಿತ್ಯ ಅಂತರ್ಜಲ ನನ್ನಲ್ಲಿ ಬರವಣಿಗೆಯ ಮೊಳಕೆ ಮೂಡಿಸಿದೆ. ನೇರ ಹಾಗೂ ನಿಷ್ಠೂರ ವಾಗಿ ಬದುಕುವುದು ನನಗಿಷ್ಟ. ಹಾಗೆಂದ ಮಾತ್ರಕ್ಕೆ ನಾನೇ ಸರಿ ಎನ್ನುವುದಿಲ್ಲ. ಸ್ವತಂತ್ರ ಚಿಂತನೆಯೊಂದಿಗೆ ಬರೆದಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಚಿರಋಣಿ ಎಂದರು.

ಲೇಖಕ ಸಿ.ನಾಗಣ್ಣ, ರಂಗಕರ್ಮಿ ಗಳಾದ ಮಂಡ್ಯ ರಮೇಶ್ ಹಾಗೂ ಕೆ.ಆರ್.ಸುಮತಿ ಪುಸ್ತಕದ ಒಂದೊಂದು ಅಂಕಣಗಳನ್ನು ಭಾವಸಹಿತ ವಾಚಿಸಿದರು. ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಸಾವಣ್ಣ ಪ್ರಕಾಶನದ ಜಮೀಲ್, ಪತ್ರಕರ್ತ ಜೋಗಿ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ದೇವನೂರ ಮಹಾದೇವ ಆದಿಯಾಗಿ ಎಲ್ಲಾ ಗಣ್ಯರೂ ಹಣ ಪಾವತಿಸಿಯೇ ಪುಸ್ತಕ ಸ್ವೀಕರಿಸಿದರು.

Translate »