ದಸರಾ ಆನೆಗಳಿಗೆ ಸಿದ್ಧಗೊಳ್ಳುತ್ತಿದೆ ಗಾದಿ, ನಮ್ದಾ
ಮೈಸೂರು

ದಸರಾ ಆನೆಗಳಿಗೆ ಸಿದ್ಧಗೊಳ್ಳುತ್ತಿದೆ ಗಾದಿ, ನಮ್ದಾ

October 8, 2018

ಮೈಸೂರು:  ನಾಡಹಬ್ಬ ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಆನೆಗಳ ಸುರಕ್ಷತೆ ದೃಷ್ಟಿಯಿಂದ `ಗಾದಿ’ ಹಾಗೂ ನಮ್ದಾ ತಯಾರಿ ಕೆಲಸ ಪ್ರತಿ ವರ್ಷದಂತೆ ಈ ಬಾರಿಯೂ ಆರಂಭವಾಗಿದೆ.

ಅರಮನೆ ಆವರಣದ ಶ್ರೀ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದ ಪ್ರಾಂಗಣದಲ್ಲಿ ವಿಶೇಷ ಮಾವುತರಾದ ಪಾಷಾ, ಜಕಾವುಲ್ಲಾ, ಗಾದಿ ತಯಾರಿಯನ್ನು ಇಂದು ಆರಂಭಿಸಿದ್ದಾರೆ. ಶತಮಾನಗಳಿಂದ ಅಂಬಾರಿ ಕೆಳಗೆ ಗಾದಿ ಬಳಸುತ್ತಾ ಬರಲಾಗುತ್ತಿದೆ.

ಮೆರವಣಿಗೆಯಲ್ಲಿ ಸಾಗುವ ಆನೆಗಳ ಮೇಲೆ ಅಲಂಕಾರಿಕ ಗೌನ್‍ಗೆ ಅನುಗುಣವಾಗಿ ಗಾದಿ ಮತ್ತು ನಮ್ದಾ ಬಳಸಲಾಗುತ್ತದೆ. ಸುಮಾರು 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು 5 ಕಿ.ಮೀ. ಹೊತ್ತು ಸಾಗುವ ಆನೆಗೆ ಸುರಕ್ಷತಾ ದೃಷ್ಟಿಯಿಂದ ಗಾದಿ ಬಳಸಲಾಗುತ್ತದೆ. ಭಾರವಾದ ವಸ್ತುವನ್ನು ಹೊರುವ ಆನೆಗೆ ಗಾಯವಾಗದಿರಲೆಂದು ಬಳಕೆ ಮಾಡುವ ಮೃದು ವಸ್ತುವೇ ‘ಗಾದಿ’.

ಕೆರೆಗಳ ಆಸುಪಾಸಿನಲ್ಲಿ ಬೆಳೆಯುವ ಜೊಂಡು ಹುಲ್ಲು ಬಳಸಿ ಇದನ್ನು ಸಿದ್ಧಪಡಿಸಲಾಗುತ್ತದೆ. ಇದಕ್ಕೆ ನುರಿತ ವಿಶೇಷ ಮಾವುತರಾದ ಜಕಾವುಲ್ಲಾ ಹಾಗೂ ಪಾಷಾ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಕಳೆದ 13 ವರ್ಷಗಳಿಂದ ಇವರು ಗಾದಿ ಸಿದ್ಧಪಡಿಸುತ್ತಿದ್ದಾರೆ. ತಮ್ಮ ಹಿರಿಯರಿಂದ ಈ ಕೌಶಲ್ಯವನ್ನು ಇವರು ಕಲಿತು ಕೊಂಡಿದ್ದಾರೆ. ಈ ಕಾರ್ಯ ತಲೆಮಾರಿನಿಂದ ತಲೆಮಾರಿಗೆ ಮುಂದುವರಿಯುತ್ತಿದೆ. ಜಕಾವುಲ್ಲಾ ಚೈತ್ರಾ ಕಾವಾಡಿ, ಮಾವುತರಾಗಿ ನಿವೃತ್ತರಾಗಿದ್ದರೆ, ಪಾಷಾ, ಸರಳಾ ಮಾವುತರಾಗಿ ನಿವೃತ್ತಿಯಾಗಿ ಇದೀಗ ದಸರಾ ವೇಳೆ ವಿಶೇಷ ಮಾವುತರಾಗಿ ಸೇವೆ ಸಲ್ಲಿಸುವುದರೊಂದಿಗೆ ಗಾದಿ, ನಮ್ದಾ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಗಾದಿ ಉದ್ದ: ಆನೆಯ ಮೇಲೆ 6 ಅಡಿ ಉದ್ದ, 5 ಅಡಿ ಅಗಲದ ಗಾದಿ ತಯಾರಿಸಲಾಗುತ್ತಿದೆ. ಇದರ ಮಧ್ಯ ಭಾಗದಲ್ಲಿ ಒಂದು ಅಡಿ ಅಗಲ ಚೌಕಾಕೃತಿಯ ಸ್ಥಳಾವಕಾಶ ಕಲ್ಪಿಸಲಾಗಿದೆ. ಇದರಲ್ಲಿ ಆನೆಯ ಬೆನ್ನಿನ ಮೂಳೆ ಸೇರುವುದರಿಂದ ಅಂಬಾರಿ ಸಮತಟ್ಟಾಗಿ ಕೂರಲು ಸಹಕಾರಿಯಾಗುತ್ತದೆ. ಇತರೆ ಆನೆಗಳಿಗೂ ಗಾದಿ, ನಮ್ದಾ ಇಟ್ಟು ತದನಂತರ ಗೌನ್ ಹೊದಿಸಲಾಗುತ್ತದೆ.

ಜೊಂಡು ಹುಲ್ಲು: ಗಾದಿಗಳ ತಯಾ ರಿಕೆಗೆ ಕೆರೆಗಳ ದಡದಲ್ಲಿ ಬೆಳೆಯುವ ಜೊಂಡು ಹುಲ್ಲು (ಒಡಕೆ ಹುಲ್ಲು) ಬಳಸಲಾಗುತ್ತದೆ. ಗಾದಿ ತಯಾ ರಿಕೆಗೆ 20 ದಿನ ಮುನ್ನ ಒಡಕೆ ಹುಲ್ಲು ತಂದು, ಒಣಗಿಸಲಾಗುತ್ತದೆ. ಈ ಹುಲ್ಲು ಮೃದುವಾಗಿದ್ದು, ನೀರನ್ನು ಹೀರಿಕೊಳ್ಳುವುದಿಲ್ಲ. ಆನೆಯ ಮೇಲೆ ಸ್ಪಂಜ್‍ನಂತೆ ಇರುವುದರಿಂದ ಅಂಬಾರಿ ಸಮ ತೋಲನ ರೀತಿ ಕೂರುತ್ತದೆ. ಇದರಿಂದ ಆನೆಗೂ ಮೃದುವಾದ ಅನುಭವವಾಗುತ್ತದೆ. ಜೊಂಡು ಹುಲ್ಲನ್ನು ಸುರುಳಿಯಾಕಾರದಲ್ಲಿ ಸುತ್ತಿ ಗೋಣಿ ಚೀಲದಲ್ಲಿ ಜೋಡಿಸಿ ಹೊಲೆಯಲಾಗುತ್ತದೆ.

ಗಾದಿ, ನಮ್ದಾ ಬಳಕೆ: ಅಂಬಾರಿ ಆನೆ ಮೇಲೆ ಗಾದಿಯನ್ನು ಇಟ್ಟು, ನಂತರ ನಮ್ದಾ ಇಡಲಾಗುತ್ತದೆ. ಬಳಿಕ ಇದರ ಮೇಲೆ ಜೂಲಾ(ಅಲಂಕಾರಿಕ ಬಟ್ಟೆ) ಹೊದಿಸಲಾಗುತ್ತದೆ. ನಂತರ ಅಂಬಾರಿಯನ್ನು ಕಟ್ಟ ಲಾಗುತ್ತದೆ. ಗಾದಿಯ ಅಳತೆ ಹಾಗೂ ಹಾಸಿಗೆ ಮಾದ ರಿಯ ಅರ್ಧ ಅಡಿ ದಪ್ಪನೆ ನಮ್ದಾವನ್ನು ತೆಂಗಿನ ಕಾಯಿ ಚಗರೆಯಿಂದ ಸಿದ್ಧಪಡಿಸಲಾಗುವುದು.

– ಎಂ.ಟಿ.ಯೋಗೇಶ್ ಕುಮಾರ್

Translate »