ಮಾವುತರು, ಕಾವಾಡಿಗಳಿಗೆ ಪಾನಿಪುರಿ ವಿತರಣೆ
ಮೈಸೂರು

ಮಾವುತರು, ಕಾವಾಡಿಗಳಿಗೆ ಪಾನಿಪುರಿ ವಿತರಣೆ

October 8, 2018

ಮೈಸೂರು:  ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ 12 ಮಾವುತರು, ಕಾವಾಡಿಗಳು ಹಾಗೂ ವಿಶೇಷ ಮಾವುತರ ಕುಟುಂಬದ ಸದಸ್ಯರಿಗೆ ಭಾನುವಾರ ಸಿದ್ಧಾರ್ಥ ಬಡಾವಣೆಯ ಶ್ರೀ ಗುರು ರಾಘವೇಂದ್ರ ಬಂಗಾರ ಪೇಟೆ ಪಾನಿಪೂರಿ ಸೆಂಟರ್ ವತಿಯಿಂದ ಉಚಿತವಾಗಿ ಪಾನಿಪೂರಿ ನೀಡಲಾಯಿತು.

ಕಳೆದ ಮೂರು ವರ್ಷದಿಂದ ದಸರಾ ಆನೆಗಳ ಮಾವುತರು, ಕಾವಾಡಿಗರು ಹಾಗೂ ವಿಶೇಷ ಮಾವುತರಿಗೆ ಶ್ರೀ ಗುರು ರಾಘವೇಂದ್ರ ಬಂಗಾರಪೇಟೆ ಪಾನಿಪೂರಿ ಸೆಂಟರ್‌ನ ಮಾಲೀಕ ದಿನೇಶ್ ಅವರು ಒಂದು ದಿನ ಪಾನಿಪೂರಿಯನ್ನು ನೀಡುವ ಸೇವೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಟಾಟಾ ಏಸ್‍ನಲ್ಲಿ ಪಾನಿಪೂರಿಯ ಸಾಮಗ್ರಿಗಳನ್ನು ತಂದು ವಿತರಿಸಿದರು.

ಇಂದು ಬೆಳಿಗ್ಗೆ ಗನ್‍ಹೌಸ್ ಬಳಿ ದಸರಾ ಆನೆಗಳಿಗೆ ನಡೆದ ಸಿಡಿಮದ್ದಿನ ತಾಲೀಮಿನ ಸ್ಥಳಕ್ಕೆ ಟಾಟಾ ಏಸ್‍ನಲ್ಲಿ ಆಗಮಿಸಿದ ಪಾನಿಪೂರಿ ಸೆಂಟರ್‌ನ ನೌಕರರು, ಫಿರಂಗಿ ದಳದ ಸಿಬ್ಬಂದಿಗಳು, ಪೊಲೀಸರು ಹಾಗೂ ಅಶ್ವಾರೋಹಿ ದಳದ ಸಿಬ್ಬಂದಿಗಳಿಗೆ ಪಾನಿಪೂರಿ ವಿತರಿಸಿದರು.

ನಂತರ ಅರಮನೆಯ ಆವರಣಕ್ಕೆ ಬಂದು ಎಲ್ಲಾ 12 ಆನೆಗಳ ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬದ ಸದಸ್ಯರನ್ನು ಆಹ್ವಾನಿಸಿ ಅನಿಯಮಿತವಾಗಿ ಬಂಗಾರಪೇಟೆಯ ಪಾನಿಪೂರಿಯನ್ನು ನೀಡಿದರು.

ಈ ವೇಳೆ ಬಂಗಾರಪೇಟೆ ಪಾನಿಪೂರಿ ಸೆಂಟರ್‌ನ ಮಾಲೀಕ ದಿನೇಶ್ ಮಾತನಾಡಿ, ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಆನೆಗಳ ಪಾತ್ರ ಬಹು ಮುಖ್ಯವಾಗಿದ್ದು, ಅವುಗಳನ್ನು ನೋಡಿಕೊಳ್ಳುವ ಮಾವುತರು, ಕಾವಾಡಿಗಳು ಮತ್ತು ಅವರ ಕುಟುಂಬಗಳಿಗೆ ನಮ್ಮ ಪಾನಿಪೂರಿ ಸೆಂಟರ್ ವತಿಯಿಂದ ಉಚಿತವಾಗಿ ಪಾನಿಪೂರಿ ನೀಡುವ ಮೂಲಕ ಒಂದು ದಿನದ ಸೇವೆಯನ್ನು ಮಾಡುತ್ತಿದ್ದೇವೆ. ಇದು ನಮಗೆ ಸಂತೋಷವಾಗಿದೆ ಎಂದು ತಿಳಿಸಿದರು.

Translate »