ದಸರಾ ಗಜ, ಅಶ್ವಪಡೆಗೆ ಪೂರ್ಣ ಪ್ರಮಾಣದ ಸಿಡಿಮದ್ದು ತಾಲೀಮು ಯಶಸ್ವಿ
ಮೈಸೂರು, ಮೈಸೂರು ದಸರಾ

ದಸರಾ ಗಜ, ಅಶ್ವಪಡೆಗೆ ಪೂರ್ಣ ಪ್ರಮಾಣದ ಸಿಡಿಮದ್ದು ತಾಲೀಮು ಯಶಸ್ವಿ

October 8, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಗಜ, ಅಶ್ವಪಡೆಗೆ ಭಾನುವಾರ ಅರಮನೆಯ ವರಾಹ ಗೇಟ್ ಬಳಿಯಿರುವ ವಾಹನ ನಿಲುಗಡೆ ಸ್ಥಳದಲ್ಲಿ ಅಂತಿಮ ಹಂತದಲ್ಲಿ ಪೂರ್ಣ ಪ್ರಮಾಣದ ಸಿಡಿಮದ್ದು ಸಿಡಿಸುವ ತಾಲೀಮನ್ನು ಯಶಸ್ವಿಯಾಗಿ ನಡೆಸಲಾಯಿತು.

ಜಂಬೂಸವಾರಿ ಹಾಗೂ ಬನ್ನಿಮಂಟ ಪದ ಪಂಜಿನ ಕವಾಯತು ವೇಳೆ ವಿಜಯದ ಸಂಕೇತವಾಗಿ 21 ಸುತ್ತು ಕುಶಾಲತೋಪು ಸಿಡಿಸುವ ಪರಂಪರೆಯಿದ್ದು, ಈ ಹಿನ್ನೆಲೆ ಯಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಜನಸಂದಣಿಯ ನಡುವೆ ಸಾಗಲಿರುವ ಆನೆ ಹಾಗೂ ಕುದುರೆಗಳು ಕುಶಾಲ ತೋಪಿನ ಶಬ್ದಕ್ಕೆ ಹೆದರದಂತೆ ತರಬೇತಿ ನೀಡುವು ದಕ್ಕಾಗಿ ಸಿಡಿಮದ್ದಿನ ತಾಲೀಮು ನಡೆಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಮೂರು ಬಾರಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಯಿತು.

ಸೆ.27 ಮತ್ತು 30ರಂದು ಎರಡು ಬಾರಿ ಸಿಡಿಮದ್ದು ಸಿಡಿಸುವ ತಾಲೀಮು ನಡೆಸಲಾಗಿತ್ತು. ಇಂದು ನಡೆಸಿದ ಅಂತಿಮ ಹಂತದ ತಾಲೀಮಿನಲ್ಲಿ ಆನೆ ಹಾಗೂ ಕುದುರೆಗಳ ವರ್ತನೆಯಲ್ಲಿ ಸುಧಾರಣೆ ಕಂಡು ಬಂದವು. ಫಿರಂಗಿ ದಳದ 30 ಮಂದಿ ಸಿಎಆರ್ ಪೊಲೀಸರು 7 ಫಿರಂಗಿಗಳ ಮೂಲಕ 3 ಸುತ್ತಿನಲ್ಲಿ 21 ಸಿಡಿಮದ್ದನ್ನು ಸಿಡಿಸುವ ಮೂಲಕ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಶಬ್ದದ ತಾಲೀಮು ನೀಡಿದರು.

ಸಿಡಿಮದ್ದು ಸಿಡಿಸಿ ಆನೆಗಳಿಗೆ ತಾಲೀಮು ನೀಡುವುದಕ್ಕಾಗಿ ವರಾಹ ಗೇಟ್ ಬಳಿಯಿರುವ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಯನ್ನು ನಿರ್ಬಂಧಿಸಲಾಗಿತ್ತು. ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನ ನೇತೃತ್ವದ 12 ಆನೆಗಳು ಹಾಗೂ ಅಶ್ವಾರೋಹಿ ದಳದ 16 ಕುದುರೆಗಳನ್ನು ಸಾಲಾಗಿ ನಿಲ್ಲಿಸಿ ಬೆಳಿಗ್ಗೆ 11.30ಕ್ಕೆ ತಾಲೀಮು ಆರಂಭಿಸಲಾಯಿತು. ಇಂದು ನಡೆದ ತಾಲೀಮು ಕೊನೆಯ ತಾಲೀಮಾಗಿದ್ದ ಹಿನ್ನೆಲೆಯಲ್ಲಿ ಒಂದು ನಿಮಿಷದೊಳಗೆ 21 ಸಿಡಿಮದ್ದನ್ನು ಸಿಡಿಸಲಾಯಿತು.

ಜಂಬೂಸವಾರಿಯ ದಿನ ರಾಷ್ಟ್ರ ಗೀತೆ ಮೊಳಗುವ ವೇಳೆ 21 ಬಾರಿ ಸಿಡಿಮದ್ದನ್ನು ಸಿಡಿಸಲಾಗುತ್ತದೆ. ಇದರಿಂದಾಗಿ ಈ ಹಿಂದೆ ನಡೆಸಲಾಗಿದ್ದ ತಾಲೀಮಿನಲ್ಲಿ 1 ಸುತ್ತಿನ ಸಿಡಿಮದ್ದು ಸಿಡಿದಾಗ ಕೆಲ ಸಮಯ ವಿರಾಮ ನೀಡಲಾಗುತ್ತಿತ್ತು. ಆದರೆ ಇಂದು 7 ಫಿರಂಗಿಗಳಿಂದ ತಲಾ ಮೂರು ಸುತ್ತಿನಂತೆ 21 ಸಿಡಿಮದ್ದನ್ನು ಎಡೆಬಿಡದೆ ಸಿಡಿಸಲಾಯಿತು. ಇದರಿಂದ ಒಂದೇ ನಿಮಿಷ ದೊಳಗೆ 21 ಸಿಡಿಮದ್ದು ಸಿಡಿದ ಪರಿಣಾಮ ಗಜ ಹಾಗೂ ಅಶ್ವಪಡೆ ವಿಚಲಿತವಾಗದೆ ಸುಮ್ಮನಿದ್ದವು. ಎಂದಿನಂತೆ ಪ್ರಶಾಂತ ಆನೆಯನ್ನು ಮರಕ್ಕೆ ಕಟ್ಟಿ ಹಾಕಲಾಗಿತ್ತು.

ಇಂದಿನ ತಾಲೀಮಿನಲ್ಲಿ 2ಕೆಜಿ 800 ಗ್ರಾಂ ಗನ್ ಪೌಡರ್‌ನಿಂದ ತಯಾರಿಸಿದ್ದ ಸಿಡಿಮದ್ದು ಬಳಕೆ ಮಾಡಿದ್ದರಿಂದ ಶಬ್ದದ ಪ್ರಮಾಣ ಹೆಚ್ಚಾಗುವುದರಿಂದ ಮೊದಲ ಬಾರಿಗೆ ಬಂದಿ ರುವ ಧನಂಜಯ ಆನೆಯನ್ನು ಪ್ರಶಾಂತ ಆನೆಯ ಬಳಿ ನಿಲ್ಲಿಸಲಾಗಿತ್ತು.

ಆನೆಗಳು ಹಾಗೂ ಕುದುರೆಗಳಿಗಾಗಿ ನಡೆಸಿದ ಸಿಡಿ ಮದ್ದಿನ ತಾಲೀಮನ್ನು ವೀಕ್ಷಿಸುವುದಕ್ಕೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ, ಡಿಸಿಪಿ ಗಳಾದ ಬಿ.ವಿ.ಕಿತ್ತೂರ್, ಡಾ.ವಿಷ್ಣುವರ್ಧನ್, ಎಸಿಪಿ ಸುರೇಶ್, ಆರ್‍ಎಫ್‍ಒ ಅನನ್ಯ ಕುಮಾರ್, ಪಶುವೈದ್ಯ ಡಾ.ಡಿ.ಎನ್.ನಾಗರಾಜು, ಅರಣ್ಯ ಸಿಬ್ಬಂದಿಗಳಾದ ಕುಮಾರ್, ರವಿಕುಮಾರ್, ಅಕ್ರಮ್ ಪಾಷಾ, ರಂಗ ರಾಜು ಸೇರಿದಂತೆ ಇನ್ನಿತರರು ಆಗಮಿಸಿದ್ದರು. ಅಲ್ಲದೆ ಇಂದು ಭಾನುವಾರವಾಗಿ ದ್ದರಿಂದ ವಿವಿಧೆಡೆಗಳಿಂದ ಅರಮನೆ ವೀಕ್ಷಿಸಲು ಆಗಮಿಸಿದ್ದ ಪ್ರವಾಸಿಗರು ಸಿಡಿಮದ್ದು ಸಿಡಿಸುವ ತಾಲೀಮನ್ನು ಕುತೂಹಲದಿಂದ ರಸ್ತೆ ಬದಿಯಲ್ಲಿ ನಿಂತು ವೀಕ್ಷಿಸಿದರು.

Translate »