ನಾಲ್ವಡಿ ಆಪ್ತ ಕೆ.ಹೆಚ್.ರಾಮಯ್ಯರ ಸಂಸ್ಮರಣೆ
ಮೈಸೂರು

ನಾಲ್ವಡಿ ಆಪ್ತ ಕೆ.ಹೆಚ್.ರಾಮಯ್ಯರ ಸಂಸ್ಮರಣೆ

October 6, 2019

ಮೈಸೂರು,ಅ.5-ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅತ್ಯಾಪ್ತರು, ಹಿಂದುಳಿದ ವರ್ಗಗಳ ನೇತಾರರು ಹಾಗೂ ನೊಂದವರ ಪರ ಹೋರಾಟಗಾರರೂ ಆಗಿದ್ದ ಕೆ.ಹೆಚ್.ರಾಮಯ್ಯ ನವರ 86ನೇ ಸಂಸ್ಮರಣೋತ್ಸವದ ದಿನವಾದ ಇಂದು ಕೆ.ಹೆಚ್. ರಾಮಯ್ಯನವರ ಅಭಿಮಾನಿಗಳ ಬಳಗದ ವತಿಯಿಂದ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಲ್ಲಿರುವ ರಾಮಯ್ಯನವರ ಸಮಾಧಿ ಬಳಿ ಅವರ ಸಾಧನೆಗಳನ್ನು ಸ್ಮರಿಸುವ ಸಾತ್ವಿಕ ಕಾರ್ಯಕ್ರಮ ನಡೆಯಿತು.

ರಾಮಯ್ಯನವರ ಸಮಾಧಿ ಮೇಲೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಬರೆಸಿರುವ ಶಿಲಾಶಾಸನವಿದ್ದು, ಅದರಲ್ಲಿ `ನಿಜವಾಗಿ ನಮ್ಮ ದೇಶದ ಸುಪುತ್ರನಿವನು. ಮಿತ್ರನೋರ್ವನಿರುವನೆಂದರೆ ಅವನಿಲ್ಲಿ ಮಲಗಿಹನು. ಮಿತ್ರನೆಂಬ ಆ ವಸ್ತುವಿನಲ್ಲಿ ನೂರೆಂಟು ದೋಷಗಳಿ ದ್ದರೂ. ಅವುಗಳನ್ನು ಮರೆಸುವ ನೂರೆಂಟು ಗುಣಗಳು ಇದ್ದವು. ಹೆಚ್ಚು ಹೇಳಲೇಕೆ ಆ ವ್ಯಕ್ತಿಗೆ ನಾವೆಲ್ಲಾ ಸೇರಿ ತಲೆ ಬಾಗಿಸುವ’ ಎಂದು ನಮೂದಿಸಲಾಗಿದೆ. ಇಂಥಹ ಘೋಷ ವಾಕ್ಯ ಬರೆಸಿ ಆತ್ಮೀಯ ಗೆಳೆಯ ರಾಮಯ್ಯನವರ ಸ್ನೇಹ ಸಂಪತ್ತಿನ ಮೌಲ್ಯ ಹೆಚ್ಚಿಸಿ ದ್ದರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್. ನಾಲ್ವಡಿಯವರು ಹಿಂದುಳಿದವರಿಗೆ ಮೀಸಲಾತಿ ತರುವುದರಲ್ಲಿ ರಾಮಯ್ಯನವರ ಪಾತ್ರ ಪ್ರಮುಖವಾಗಿದೆ ಎಂದು ಸಮಾಧಿ ಬಳಿ ಸೇರಿದ ಕೆ.ಹೆಚ್. ರಾಮಯ್ಯ ಅಭಿಮಾನಿಗಳ ಬಳಗದವರು ಅವರ ಸತ್ಕಾರ್ಯಗಳನ್ನು ನೆನೆದು, ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹೆಚ್.ರಾಮಯ್ಯ ನವರ ಕುಟುಂಬ ಸದಸ್ಯರು, ಹೆಚ್.ಸಿ.ದಾಸಪ್ಪ ನವರ ಕುಟುಂಬ ಸದಸ್ಯರು, ರಾಮಯ್ಯನವರ ಅಭಿಮಾನ ಬಳಗದ ಸತೀಶ್‍ಗೌಡ, ಕುಮಾರ್‍ಗೌಡ, ಸ್ವರೂಪ್, ಜಯರಾಮ, ರವಿ, ಸಂತೋಷ್‍ಗೌಡ, ಆಕಾಶ್‍ಗೌಡ, ಕಾರ್ತಿಕ್, ಮಹೇಶ್, ಆನಂದ್, ನಾಗಣ್ಣ, ಕೃಷ್ಣೇ ಗೌಡ, ಸುಬ್ರಮಣ್ಯ, ಎನ್.ಜಿ.ನಾರಾಯಣ್, ಬಸವೇಗೌಡ, ಕೃಷ್ಣಪ್ಪ, ರಾಜ್‍ಕುಮಾರ್, ನಾಗೇಂದ್ರ, ಬೋರಯ್ಯ ಇತರರು ಹಾಜರಿದ್ದರು.

Translate »