ದಸರಾ ಆಹಾರ ಮೇಳದಲ್ಲಿ ನಾಟಿ ವೈದ್ಯೆ ನಾಗಮ್ಮನಿಗೆ ಫುಲ್ ಡಿಮ್ಯಾಂಡ್
ಮೈಸೂರು

ದಸರಾ ಆಹಾರ ಮೇಳದಲ್ಲಿ ನಾಟಿ ವೈದ್ಯೆ ನಾಗಮ್ಮನಿಗೆ ಫುಲ್ ಡಿಮ್ಯಾಂಡ್

October 6, 2019

ಮೈಸೂರು, ಅ.5- ಮೈಸೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಏರ್ಪಡಿಸಿರುವ ದಸರಾ ಆಹಾರ ಮೇಳದಲ್ಲಿ ಆದಿವಾಸಿಗಳ ಆಹಾರ ವಿಭಾಗ ದಲ್ಲಿ ಕೊಡಗಿನ ನಾಟಿ ವೈದ್ಯೆ ನಾಗಮ್ಮ ಅವರ ಔಷಧಿಗೆ ಭಾರೀ ಡಿಮ್ಯಾಂಡ್. ಈ ಹಿಂದೆ ಇಲ್ಲಿಯೇ ಔಷಧಿ ಪಡೆದಿದ್ದವರೂ ಸೇರಿದಂತೆ ವಿವಿಧೆಡೆಯಿಂದ ದಿನ ನಿತ್ಯ ನೂರಾರು ಮಂದಿ ಭೇಟಿಯಾಗಿ ನಾಟಿ ಔಷಧಿ ಪಡೆಯುತ್ತಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರದ ದುಬಾರೆ ರಸ್ತೆಯ ದೊಡ್ಡ ಬೆಟಗೇರಿ ಗ್ರಾಮದ ನಿವಾಸಿ ನಾಗಮ್ಮ ಔಷಧೀಯ ಸಸ್ಯ, ಬೇರು, ಗಂಟು ಸೇರಿದಂತೆ ನಾನಾ ಗಿಡಮೂಲಿಕೆಗಳ ಪ್ರದರ್ಶನದೊಂದಿಗೆ ವಿವಿಧ ಕಾಯಿಲೆಗಳಿಗೆ ನಾಟಿ ಔಷಧಿ ನೀಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಹೀಗೆ ನಾಟಿ ಔಷಧಿ ನೀಡುತ್ತಾ, ಭಾರೀ ಹೆಸರು ಗಳಿಸಿರುವ ನಾಗಮ್ಮರ ಕೈಗುಣಕ್ಕೆ ಹಲವಾರು ಮಂದಿ ಮಾರು ಹೋಗಿದ್ದಾರೆ.

ಯಾವ ಸಮಸ್ಯೆಗೆ: ಮಂಡಿ ನೋವು, ಮೈ-ಕೈ ನೋವು, ಕಿವಿ ನೋವು, ಹಲ್ಲು ನೋವು, ಎದೆ ನೋವು, ಕುರ, ತಲೆ ನೋವು, ರಕ್ತ ಭೇದಿ, ಹೊಟ್ಟೆ ನೋವು, ಉಳುಕಡ್ಡಿ, ಮೂಳೆ ಮುರಿತ, ಸ್ತ್ರೀ ಸಂಬಂಧಿ ರೋಗ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ನಾಟಿ ಔಷಧಿ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಹಿರಿಯ ನಾಗರಿ ಕರನ್ನು ಕಾಡುವ ಮಂಡಿ ನೋವು, ತಲೆ ನೋವು, ಹೊಟ್ಟೆ ಉರಿ, ಉಬ್ಬಸ, ಕೀಲು ನೋವು ಸಮಸ್ಯೆ ಔಷಧಿಗೆ ಬೇಡಿಕೆ ಹೆಚ್ಚಾಗಿದೆ.

ಹಳೇ ಗ್ರಾಹಕರು: ಆಹಾರ ಮೇಳದಲ್ಲಿ ಮೂರನೇ ಬಾರಿ ನಾಟಿ ವೈದ್ಯೆ ನಾಗಮ್ಮ ಪಾಲ್ಗೊಂಡಿದ್ದಾರೆ. ಅವರಿಂದ ಈ ಹಿಂದೆ ಔಷಧಿ ಪಡೆದು ಗುಣಮುಖ ರಾಗಿರುವ ಅನೇಕರು ಈ ಬಾರಿ ಬಂದು ತಮ್ಮ ನಾನಾ ಆರೋಗ್ಯ ಸಮಸ್ಯೆಗಳಿಗೆ ಔಷಧಿ ಪಡೆಯುತ್ತಿದ್ದಾರೆ. ಅಲ್ಲದೆ ಹೆಚ್ಚಿನ ಅವಧಿಗೆ ಬೇಕಾಗುವ ವಿವಿಧ ಔಷಧಿ ಸಸ್ಯಗಳಿಂದ ತಯಾರಿಸಿದ್ದ ಪುಡಿ, ಎಣ್ಣೆ ಸೇರಿದಂತೆ ಇನ್ನಿತರ ಔಷಧಿಗಳನ್ನು ಖರೀದಿಸುತ್ತಿದ್ದಾರೆ. ಅಲ್ಲದೆ ಇವರ ಕೈಗುಣ ಬಾಯಿಂದ ಬಾಯಿಗೆ ಹರಡಿ ದಿನ ದಿಂದ ದಿನಕ್ಕೆ ಇವರಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಹಿರಿಯರ ಬಳುವಳಿ: ನಾಟಿ ಔಷಧೀ ತಜ್ಞೆ ನಾಗಮ್ಮ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ನಾನು ಸಣ್ಣ ವಯಸ್ಸಿನಲ್ಲೇ ನಾಟಿ ಔಷಧಿ ತಯಾ ರಿಸುವುದನ್ನು ಕಲಿತುಕೊಂಡೆ. ನಮ್ಮ ಮನೆಯಲ್ಲಿ ನಾನು ನಾಲ್ಕನೇ ತಲೆಮಾರಿನವಳಾಗಿದ್ದು, ಸೊಸೆ ಹಾಗೂ ಮಗಳಿಗೆ ಇದನ್ನು ಕಲಿಸುತ್ತಿದ್ದೇನೆ. ನಮ್ಮ ಅಜ್ಜ ದೊಳ್ಳಜ್ಜ ಮಾವ್ದರೆಗೆ ಪಟೇಲ್ ಆಗಿದ್ದರೂ ನಾಟಿ ಔಷಧಿ ನೀಡುತ್ತಿದ್ದರು. ನಮ್ಮ ಅಜ್ಜಿ ಈ ಔಷಧಿ ನೀಡುವ ಪರಂಪರೆಯನ್ನು ಮುಂದುವರೆಸಿಕೊಂಡು ಬಂದರು. ನನ್ನ ತಂದೆ ಮಸಣ್ಣಯ್ಯ, ತಾಯಿ ಸಿದ್ದಮ್ಮ ಸಹ ನಾಟಿ ಔಷಧಿ ನೀಡುವುದನ್ನು ಕಲಿತಿದ್ದರು. ತಂದೆ ಹಾಗೂ ತಾಯಿಯಿಂದ ನಾಟಿ ಔಷಧಿ ತಯಾ ರಿಸುವ ಹಾಗೂ ಯಾವ ಸಮಸ್ಯೆಗಳಿಗೆ ಯಾವ ಔಷಧಿ ನೀಡಬೇಕೆಂಬುದನ್ನು ನೋಡುತ್ತಲೆ ಕಲಿತು ಕೊಂಡಿದ್ದೇನೆ. ಈ ಪರಂಪರೆಯನ್ನು ಮುಂದು ವರೆಸಿಕೊಂಡು ಹೋಗುತ್ತಿದ್ದೇನೆ ಎಂದರು.

ಹುಡುಕಾಡಿ ತರಬೇಕು: ಔಷಧೀಯ ಸಸ್ಯಗಳು ಸುಲಭವಾಗಿ ಸಿಗುವುದಿಲ್ಲ. ಒಂದಷ್ಟು ಔಷಧಿ ತಯಾ ರಿಸಬೇಕೆಂದರೆ ಸರಿ ಸುಮಾರು 2 ವರ್ಷ ಸಮಯ ತೆಗೆದುಕೊಳ್ಳುತ್ತದೆ. ಕೇವಲ ಒಂದೇ ದಿನ ಅಥವಾ ಒಂದು ತಿಂಗಳಲ್ಲಿ ಔಷಧಿ ತಯಾರಿಸಲು ಸಾಧ್ಯವಾಗು ವುದಿಲ್ಲ. ಅರಣ್ಯ ಪ್ರದೇಶಕ್ಕೆ ಹೋಗದೆ ಎಲ್ಲಿ ಸಸ್ಯಗಳು ಬೆಳೆದಿರುತ್ತದೋ ಅಂತಹ ಸ್ಥಳಗಳಲ್ಲಿ ಹುಡುಕುತ್ತೇವೆ. ಗದ್ದೆ ಬಯಲು, ಕೊಲ್ಲಿ ಕಡೆ, ಹೊಳೆ, ಕೆರೆಗಳ ದಡದಲ್ಲಿ ಬೆಳೆದಿರುವ ಔಷಧೀಯ ಗಿಡಗಳನ್ನು ಕಿತ್ತ್ತುಕೊಂಡು ಬರುತ್ತೇವೆ ಎಂದು ತಿಳಿಸಿದರು.

ಎರಡು ವರ್ಷದಿಂದ ಹಲವು ಮಂದಿ ನನ್ನಿಂದ ಔಷಧಿ ಪಡೆದಿದ್ದರು. ಹೀಗೆ ನನ್ನಿಂದ ಔಷಧಿ ಪಡೆ ದಿದ್ದವರು ಈ ಬಾರಿಯೂ ಬಂದು ಪಡೆಯುತ್ತಿ ದ್ದಾರೆ. ಮೈಸೂರಿನಲ್ಲಿ ಮಂಡಿ ನೋವು, ಕಿವಿ, ಹಲ್ಲು, ಹೊಟ್ಟೆ ನೋವಿಗೆ ಹೆಚ್ಚಿನ ಜನರು ಬರುತ್ತಿದ್ದಾರೆ. ನನ್ನ ಮೊಬೈಲ್ ನಂಬರ್ ಪಡೆದಿರುವ ಹಲವು ಗ್ರಾಹಕರು, ಕರೆ ಮಾಡಿ ನಮ್ಮೂರಿಗೆ ಬಂದು ಔಷಧಿ ಪಡೆಯುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಎಂ.ಟಿ.ಯೋಗೇಶ್ ಕುಮಾರ್

Translate »