ಬೆಂಗಳೂರು, ಮಾ.12- ರೌಡಿಗಳ ಜೊತೆಗೆ ಸಂಪರ್ಕ ಹೊಂದಿರುವ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಎಚ್ಚರಿಕೆ ನೀಡಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿ ಜತೆಗೆ ಪೊಲೀಸ್ ಅಧಿಕಾರಿಯೊಬ್ಬರು ಸಂಪರ್ಕ ದಲ್ಲಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡ ಹಿನ್ನೆಲೆ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ವೇಳೆ ರವಿಪೂಜಾರಿ ಹಲವು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿ ದ್ದಾನೆ. ಸಿಸಿಬಿಯಲ್ಲಿ ಕಾರ್ಯ ನಿರ್ವಹಿಸಲು ನಮ್ಮ ಅಧಿಕಾರಿಯೊಬ್ಬರು ಯೋಗ್ಯರಲ್ಲ ಎಂದ ಅವರು ತನಿಖೆಯಲ್ಲಿ ಪಾರದರ್ಶಕತೆ ಇರಬೇಕು. ಸಾರ್ವಜನಿಕರು, ದೇಶಕ್ಕೆ ಮೋಸ ಮಾಡಿರುವ ಓರ್ವ ಅಪರಾಧಿ ಯೊಂದಿಗೆ ಸಂಪರ್ಕ ಹೊಂದಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಕುರಿತು ನಾವು ಮೇಲಾಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಎಂದು ಮಾಹಿತಿ ನೀಡಿದರು.
ಅಲ್ಲದೇ, ರೌಡಿಗಳ ಜೊತೆಗೆ ಸಂಪರ್ಕ ಇರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಜರುಗಿಸಲಾಗುವುದು. ಸ್ಲಂ ದೊರೆಗಳೇ ಇರಲಿ, ಇನ್ನಿತರರಿರಲಿ ಅವರ ಜೊತೆ ಪೊಲೀಸರು ಸಂಪರ್ಕ ಹೊಂದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು. ಅಪರಾಧಿಗಳ ಜೊತೆಗೆ ಹುಟ್ಟು ಹಬ್ಬ ಆಚರಣೆ, ವ್ಯವಹಾರ ನಡೆಸುವುದು, ರಿಯಲ್ ಎಸ್ಟೆಟ್, ಡೀಲಿಂಗ್ ಮಾಡಿಸುವುದು ತಿಳಿದು ಬಂದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.