ಮೈಸೂರು ಅಭಿವೃದ್ಧಿಗೆ ಸಂಪರ್ಕದ್ದೇ ಸಮಸ್ಯೆ
ಮೈಸೂರು

ಮೈಸೂರು ಅಭಿವೃದ್ಧಿಗೆ ಸಂಪರ್ಕದ್ದೇ ಸಮಸ್ಯೆ

July 12, 2018
  • ದ್ವಿಚಕ್ರ ವಾಹನಗಳ ದುರಸ್ತಿದಾರರ ಕುಂದು ಕೊರತೆ ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ವಿಷಾದ
  • ಪ್ರಧಾನಿ ಮೋದಿ ನೆರವಿಂದ ರಸ್ತೆ, ರೈಲು, ವಿಮಾನ ಸಂಪರ್ಕ ಸುಧಾರಣೆ

ಮೈಸೂರು: ಮೈಸೂರಿನ ಅಭಿವೃದ್ಧಿಗೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬೆಸೆಯುವ ಸಂಪರ್ಕದ್ದೆ ಸಮಸ್ಯೆಯಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಜರ್‌ಬಾದಿನ ವಿ.ಕೆ.ಹಾಲ್‍ನಲ್ಲಿ ಮೈಸೂರು ದ್ವಿಚಕ್ರ ವಾಹನಗಳ ದುರಸ್ತಿದಾರರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕುಂದು-ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು.

ಮೈಸೂರಿನ ಸಮಗ್ರ ಅಭಿವೃದ್ಧಿಗೆ ಇತರೆ ನಗರ ಮತ್ತು ರಾಜ್ಯಗಳ ಸಂಪರ್ಕ ಕಲ್ಪಿಸುವ ರಸ್ತೆಗಳ ಅಗಲೀಕರಣದ್ದೆ ಸಮಸ್ಯೆ. ಇದನ್ನು ಮನಗಂಡ ಕೇಂದ್ರ ಸರ್ಕಾರ ಸಾವಿರಾರು ಕೋಟಿ ವೆಚ್ಚದಲ್ಲಿ ರೈಲ್ವೆ, ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಹಾಗೂ ವಿಮಾನ ನಿಲ್ದಾಣಗಳ ಉನ್ನತೀಕರಣಕ್ಕೆ ಮೊದಲ ಆದ್ಯತೆ ನೀಡಿ, ಅನುದಾನ ಬಿಡುಗಡೆ ಮಾಡಿದೆ. ಅದರಲ್ಲೂ ರಾಷ್ಟ್ರೀಯ ಹೆದ್ದಾರಿ ಮೇಲೆ ವಿಮಾನ ನಿಲ್ದಾಣ ರನ್‍ವೇ ವಿಸ್ತರಣೆಯಾಗುತ್ತಿರುವುದು ದೇಶದಲ್ಲೆ ಮೊದಲು ಎಂದರು.

ಯುಪಿಎ ಅಧಿಕಾರಾವಧಿಯಲ್ಲಿ ಮೈಸೂರು-ಬೆಂಗಳೂರು ಜೋಡಿ ಹಳಿ ರೈಲ್ವೆ ಯೋಜನೆ ಮಂದಗತಿಯಲ್ಲಿ ಸಾಗುತಿತ್ತು. ಅಲ್ಲದೆ, ಈ ಯೋಜನೆ ವಿಸ್ತರಣೆಗೆ ರಾಮನಗರದಿಂದ ಮೈಸೂರಿನವರೆಗೆ ಅಲ್ಲಲ್ಲಿ ಅಗತ್ಯ ಭೂಮಿ ಸಮಸ್ಯೆ ಎದುರಾಗಿದ್ದು, ಇದನ್ನು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇಲ್ಲಿನ ಸಮಸ್ಯೆಗಳನ್ನು ನಿವಾರಿಸಿ, ಅಭಿವೃದ್ಧಿಗೊಂಡ ಜೋಡಿ ರೈಲು ಮಾರ್ಗವನ್ನು ಫೆ.19 ರಂದು ಪ್ರಧಾನಿ ಮೋದಿಯವರೇ ಲೋಕಾರ್ಪಣೆಗೊಳಿಸಿದ್ದರು. ಇದೇ ಸಂದರ್ಭದಲ್ಲಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೂ ಚಾಲನೆ ನೀಡಿದ್ದರು ಎಂದು ಮಾಹಿತಿ ನೀಡಿದರು.

ರೈಲ್ವೆ ನಿಲ್ದಾಣ, ಹೆದ್ದಾರಿ ಹಾಗೂ ವಿಮಾನ ನಿಲ್ದಾಣ ರನ್‍ವೇ ವಿಸ್ತರಣೆಯಿಂದ ಮೈಸೂರಿನಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಹಾಗೂ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೂ ಇನ್ನು ಮುಂದೆ ನಾಂದಿಯಾಗಲಿದೆ. ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕಾಗಿದೆ. ಮೈಸೂರು ವಿವಿಧ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದರೂ, ಇಲ್ಲಿಯವರೆಗೂ ಇದಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸದ ಕಾರಣ ಮೈಸೂರು ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದು ಆರೋಪಿಸಿದರು.

ಕೌನ್ಸಿಲ್ ಸಭೆಗೆ ಹಾಜರಾಗುತ್ತೇನೆ: ಮೈಸೂರು ದ್ವಿಚಕ್ರ ವಾಹನಗಳ ದುರಸ್ತಿದಾರರ ಒಕ್ಕೂಟದ ಸಮಸ್ಯೆಗಳನ್ನು ಬಗೆಹರಿಸಲು ಈ ಬಾರಿ ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಗೆ ಹಾಜರಾಗಿ, ಈ ವಿಷಯವನ್ನು ಅಲ್ಲಿ ಪ್ರಸ್ತಾಪಿಸಿ ನಿಮ್ಮ ಸಮಸ್ಯೆಗೆ, ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮೆಕ್ಯಾನಿಕ್ ವಿಷಯ ಪಿಎಂ ಕೌಶಲ್ಯಾಭಿವೃದ್ಧಿಗೆ ಸೇರ್ಪಡೆ: ದಿನ ಕಳೆದಂತೆ ದ್ವಿಚಕ್ರ ವಾಹನಗಳ ತಂತ್ರಜ್ಞಾನ ಉನ್ನತೀಕರಣಗೊಳ್ಳುತ್ತಿರುವುದರಿಂದ ಈ ವಲಯವನ್ನೇ ನಂಬಿಕೊಂಡಿರುವ ಮೆಕ್ಯಾನಿಕ್‍ಗಳಿಗೆ ಸಾಕಷ್ಟು ಸಮಸ್ಯೆ ಎದುರಾಗಿದೆ.

ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ವಿಷಯವನ್ನು ಪ್ರಧಾನ ಮಂತ್ರಿ ಕೌಶಲ್ಯಾಭಿವೃದ್ಧಿ ಕಲಿಕಾ ಕೇಂದ್ರಕ್ಕೆ ಸೇರ್ಪಡೆಗೊಳಿಸಲು ಪ್ರಯತ್ನಿಸುತ್ತೇನೆ. ಇದರಿಂದ ಈ ವಲಯದಲ್ಲಿ ಗುರುತಿಸಿಕೊಂಡ ಕಾರ್ಮಿಕರಿಗೆ ಪ್ರಮಾಣಪತ್ರ ದೊರೆತರೆ, ಮುಂದೆ ಮುದ್ರಾ ಬ್ಯಾಂಕ್ ಸಾಲ ಸೇರಿದಂತೆ ಇತರೆ ಪ್ರಯೋಜನ ಪಡೆಯಲು ಅನುಕೂಲವಾಗುತ್ತದೆ ಎಂದರು.

ಆ.18ರಂದು ಆಯುಷ್ಮಾನ್ ಭಾರತ್ ಜಾರಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸಿನ ಕೂಸಾದ ಆಯುಷ್ಮಾನ್ ಭಾರತ್ ಬೃಹತ್ ಆರೋಗ್ಯ ಯೋಜನೆಯು ಮುಂದಿನ ತಿಂಗಳು ಜಾರಿಗೊಳ್ಳುತ್ತಿದೆ. ಈ ಯೋಜನೆಯು ಕಡು ಬಡವರ ಆರೋಗ್ಯ ಸುಧಾರಣೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

`ಮೈಸೂರು ಮಿತ್ರ’ ವರದಿ ಪ್ರಸ್ತಾಪ: ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೇ ಅನುಷ್ಠಾನದ ಬಗ್ಗೆ `ಮೈಸೂರು ಮಿತ್ರ’ದಲ್ಲಿ ಪ್ರಕಟವಾಗಿದ್ದ ವರದಿಯನ್ನು ಉಲ್ಲೇಖಿಸಿ, ಈ ಯೋಜನೆಗೆ ಕೇಂದ್ರ ಸರ್ಕಾರದಿಂದ 7 ಸಾವಿರ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಈ ಯೋಜನೆಗೆ ರಾಜ್ಯ ಸರ್ಕಾರದ ಅನುದಾನ ನಯಾ ಪೈಸೆಯಿಲ್ಲ. ಆದರೂ ರಾಜ್ಯ ಸರ್ಕಾರ ಈ ಯೋಜನೆಯನ್ನು ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಲೀಡ್ ಬ್ಯಾಂಕ್ ಮ್ಯಾನೇಜರ್ ವೆಂಕಟಾಚಲಪತಿ, ಮುದ್ರಾ ಬ್ಯಾಂಕ್‍ಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಇಂದಿರಾಗಾಂಧಿ ವಸತಿ ಯೋಜನೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ದಿಚಕ್ರ ವಾಹನಗಳ ದುರಸ್ತಿದಾರರ ಒಕ್ಕೂಟದ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಕುಮಾರ್ ಉಪಸ್ಥಿತರಿದ್ದರು.

Translate »