ಸಾರ್ವಜನಿಕರಿಂದ ದೂರಿನ ಸುರಿಮಳೆ, ನೀರಿನದ್ದೇ ಹೆಚ್ಚು ದೂರು
ಮೈಸೂರು

ಸಾರ್ವಜನಿಕರಿಂದ ದೂರಿನ ಸುರಿಮಳೆ, ನೀರಿನದ್ದೇ ಹೆಚ್ಚು ದೂರು

June 18, 2019
  • 47ನೇ ವಾರ್ಡ್‍ನಲ್ಲಿ ಶಾಸಕ ರಾಮದಾಸ್ `ಜನಸ್ಪಂದನಾ ಯಾತ್ರೆ’
  • ತಕ್ಷಣದಿಂದ ನೀರು ಪೂರೈಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ

ಮೈಸೂರು: ಕೃಷ್ಣ ರಾಜ ಶಾಸಕ ಎಸ್.ಎ.ರಾಮದಾಸ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ 47ನೇ ವಾರ್ಡ್ ನಲ್ಲಿ ಸೋಮವಾರ ಕೈಗೊಂಡ ಜನಸ್ಪಂದನಾ ಯಾತ್ರೆಯಲ್ಲಿ ಕುಡಿಯುವ ನೀರಿನದ್ದೇ ಹೆಚ್ಚು ದೂರುಗಳು ಕೇಳಿಬಂದವು.

ಹುಡ್ಕೋ, ಅನಿಕೇತನ ರಸ್ತೆ, ಸರಸ್ವತಿ ಪುರಂ 12 ಕ್ರಾಸ್, ಸಿಎನ್‍ಡಿ ಬ್ಲಾಕ್, ದಿನೇಶ್ ಕೋಚಿಂಗ್ ಸೆಂಟರ್ ರಸ್ತೆ, ಕುವೆಂಪುನಗರ ಜೋಡಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶಾಸಕ ರಾಮದಾಸ್ ಅವರು ನಗರಪಾಲಿಕೆ ಸದಸ್ಯ ಶಿವಕುಮಾರ್, ಪಾಲಿಕೆ, ಚೆಸ್ಕಾಂ, ಸ್ಲಂ ಬೋರ್ಡ್, ಮುಡಾ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗ ಳೊಂದಿಗೆ ಪಾದಯಾತ್ರೆ ಕೈಗೊಂಡರು. ಜನರ ಬಳಿಗೇ ತೆರಳಿದ ಶಾಸಕರು ಅವರ ಕುಂದು ಕೊರತೆಗಳನ್ನು ಆಲಿಸಿದರು.

ಈ ವೇಳೆ ನಿವಾಸಿಗಳು ತಮ್ಮ ಸಮಸ್ಯೆ ಗಳ ಬಗ್ಗೆ ಶಾಸಕರ ಗಮನ ಸೆಳೆದರು. ನಮ್ಮ ಬೀದಿಯಲ್ಲಿ ಕುಡಿಯುವ ನೀರು ಬರುತ್ತಿಲ್ಲ. ಅಧಿಕಾರಿಗಳು ಸುಳ್ಳು ಹೇಳು ತ್ತಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸಿ, ಮೂಲಭೂತ ಸೌಕಂiÀರ್i ಕಲ್ಪಿಸಿ ಎಂದು ಸರಸ್ವತಿಪುರಂ 10, 11, 12ನೇ ರಸ್ತೆಯ ನಿವಾಸಿಗಳು ಮನವಿ ಮಾಡಿದರು.

ಬೆಳಿಗ್ಗೆ 5ರಿಂದ 8 ಗಂಟೆಯವರೆಗೆ ನೀರು ಬಿಡುವ ಸಮಯವಿದ್ದು, ನೀರು ಬರದೆ ತೊಂದರೆಪಡುತ್ತಿದ್ದೇವೆ. ಆದರೆ ಸಮರ್ಪಕ ನೀರು ನೀಡುತ್ತಿರುವುದಾಗಿ ಅಧಿಕಾರಿಗಳೂ ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಸ್ಥಳದಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಮಸ್ಯೆ ತಕ್ಷಣ ಪರಿಹರಿಸಿ, ಮನೆಗಳಿಗೆ ಭೇಟಿ ಕೊಟ್ಟು, ನೀರು ಬರುತ್ತಿದೆಯೇ ಇಲ್ಲವೇ? ಎಂದು ಪರಿಶೀಲಿಸಿ, ನೀರು ಬರುತ್ತಿರುವ ಬಗ್ಗೆ ಮನೆಯವರಿಂದಲೇ ದೂರವಾಣಿ ಮೂಲಕ ನನಗೆ ಖಾತ್ರಿ ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ವಾರ್ಡ್‍ನಲ್ಲಿ ಹಲವು ಕಡೆಗಳಲ್ಲಿ ವಿದ್ಯುತ್ ಕಂಬ ದುರಸ್ತಿ ಮಾಡಲಾಗಿದ್ದು, 35-40 ಹಳೆಯ ಕಂಬಗಳನ್ನು ಅಲ್ಲಲ್ಲೇ ಬಿಡಲಾಗಿರುವ ಬಗ್ಗೆ ನಿವಾಸಿ ಹೊಂಬಯ್ಯ ದೂರಿದರು. ಈ ಸಂಬಂಧ ವಾರದೊಳಗೆ ಹಳೆಯ ಕಂಬಗಳನ್ನು ತೆಗೆಯುವಂತೆ ಕೆಇಬಿ ಇಂಜಿನಿಯರ್ ಅವರಿಗೆ ಆದೇಶಿಸಿದರು.

ಮೋರಿಗಳ ದುರಸ್ತಿಗೆ ಸೂಚನೆ:ವಾರ್ಡ್‍ನ ಹಲವು ಕಡೆಗಳಲ್ಲಿ ಮೋರಿಗಳಲ್ಲಿ ಹೂಳು ತುಂಬಿ, ವಾಸನೆ ಹರಡುತ್ತಿರುವ ಬಗ್ಗೆ ಬಂದ ಸಾರ್ವಜನಿಕ ದೂರಿಗೆ ಸ್ಪಂದಿಸಿದ ಶಾಸಕರು, ಈ ಸಂಬಂಧ 20 ಜನ ಪೌರ ಕಾರ್ಮಿಕರ ತಂಡ ರಚಿಸಿಕೊಂಡು, ವಾರ್ಡ್ ಪ್ರತಿ ಬೀದಿಯಲ್ಲೂ ಮೋರಿ ಗಳಲ್ಲಿ ತುಂಬಿರುವ ಹೂಳು ಜೊತೆಗೆ ಕಸವನ್ನು ತೆಗೆಸಬೇಕು ಎಂದು ಉಪ ಆಯುಕ್ತ ಶಿವಾನಂದಮೂರ್ತಿ ಅವರಿಗೆ ಸೂಚನೆ ನೀಡಿದರು.

ಖಾಲಿ ನಿವೇಶನಗಳ ಸ್ವಚ್ಛತೆಗೆ ಸೂಚನೆ: ವಾರ್ಡ್ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳಲ್ಲಿ ಗಿಡ, ಗಂಟಿಗಳು ಬೆಳೆದು ನಿಂತಿರುವುದನ್ನು ಕಂಡ ಶಾಸಕ ರಾಮ ದಾಸ್, ತಾವೇ ಕುಡುಗೋಲು ಹಿಡಿದು ಸ್ವಚ್ಛತೆಗೆ ಮುಂದಾದರು. ಖಾಲಿ ನಿವೇಶನ ದಲ್ಲಿ ಬೆಳೆದಿರುವ ಗಿಡ-ಗಂಟಿಗಳ ಸ್ವಚ್ಛ ತೆಗೂ ಆದ್ಯತೆ ನೀಡಬೇಕು. ಸ್ವಚ್ಛಗೊಳಿ ಸಿರುವ ಕುರಿತು ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿ ದರು. 15 ದಿನದೊಳಗೆ ಈ ಕಾರ್ಯ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಕುವೆಂಪುನಗರದ ಸುಮಸೋಪಾನ ಉದ್ಯಾನವನದಲ್ಲಿ ಶೌಚಾಲಯ ಬ್ಲಾಕ್ ಆಗಿದ್ದು, ಬಳಕೆಗೆ ಇಲ್ಲದಂತಾಗಿದೆ. ಸರಿ ಪಡಿಸಿಕೊಡಬೇಕು. ಸಾರ್ವಜನಿಕ ಗ್ರಂಥಾ ಲಯದಲ್ಲಿ ಮಹಿಳಾ ಸಿಬ್ಬಂದಿ ಇದ್ದು, ಜೊತೆಗೆ ಮಹಿಳಾ ಓದುಗರೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವ ಬಗ್ಗೆ ವಿಜಯಕುಮಾರ್ ಎಂಬುವರು ಶಾಸಕರ ಗಮನ ಸೆಳೆದರು. ವಿಶ್ವ ಮಾನವ ಜೋಡಿ ರಸ್ತೆಯಲ್ಲಿರುವ ಫೌಂಟನ್ ಕೆಟ್ಟು ಹೋಗಿದೆ. ಜೊತೆಗೆ ಕುವೆಂಪು ಪ್ರತಿಮೆ ಪಾರ್ಕ್‍ನಲ್ಲಿಯೂ ಇರುವ ಫೌಂಟನ್ ಕೆಲಸ ಮಾಡುತ್ತಿಲ್ಲ. ಹಾಗಾಗಿ ಈ ಫೌಂಟನ್‍ಗಳಿಗೂ ಜೀವ ತುಂಬುವಂತೆ ಮನವಿ ಮಾಡಿದರು. ಈ ಬಗ್ಗೆ ಪಾಲಿಕೆ ಅಧಿಕಾರಿಗಳು ದುರಸ್ತಿಪಡಿಸಿ ಫೌಂಟನ್‍ನಲ್ಲಿ ನೀರು ಚಿಮ್ಮುವಂತೆ ಮಾಡಲು ಶಾಸಕರು ಸೂಚಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮೈ.ವಿ.ರವಿಶಂಕರ್, ಶಾಂತವೀರಪ್ಪ, ಅಶೋಕ್ ಅರಸ್, ಉಪೇಂದ್ರ, ರವಿ, ಅನ್ನಪೂರ್ಣ, ರಮೇಶ್, ನಿವಾಸಿಗಳಾದ ಶಿಕ್ಷಣ ಪ್ರಸಾದ್, ಕೃಷ್ಣಮೂರ್ತಿ, ಮಮತಾ ಇನ್ನಿತರರು ಉಪಸ್ಥಿತರಿದ್ದರು.

Translate »