ಲೇಖಕ ಡಾ.ಚಂದ್ರ ಪೂಜಾರಿ ಅಭಿಮತ
ಮೈಸೂರು, ಫೆ.8(ಪಿಎಂ)- ನಮ್ಮ ರಾಷ್ಟ್ರದ ರಾಜಕಾರಣ ಜಾತಿ-ಧರ್ಮದ ಆಧಾರದಲ್ಲಿ ನಡೆಯುತ್ತಿದ್ದು, ಜನತೆ ಜಾತಿ- ಧರ್ಮವನ್ನು ಮೀರಿ ನಮಗೆ ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಲಭ್ಯ ಕಲ್ಪಿಸಿ ಎಂದು ಒಗ್ಗಟ್ಟಾಗಬೇಕಿದೆ ಎಂದು ಲೇಖಕ ಹಾಗೂ ಹಂಪಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರ ಪೂಜಾರಿ ಅಭಿಪ್ರಾಯಪಟ್ಟರು.
ಮೈಸೂರಿನ ಪುರಭವನದಲ್ಲಿ ಕನ್ಸನ್ರ್ಡ್ ಸಿಟಿಜನ್ಸ್ ಆಫ್ ಇಂಡಿಯಾ(ಸಿಸಿಐ)ದ ಮೈಸೂರು ಘಟಕ ವತಿಯಿಂದ `ಸಿಎಎ, ಎನ್‍ಪಿಆರ್ ಹಾಗೂ ಎನ್‍ಆರ್‍ಸಿ ಬೇಡ ಹಾಗೂ ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯ ಬೇಕು’ ಶೀರ್ಷಿಕೆಯಡಿ ಶನಿ ವಾರ ಹಮ್ಮಿಕೊಂಡಿದ್ದ ಶೋಷಿತ ಜನಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಅಯೋಧ್ಯೆ ಹಾಗೂ ಕಾಶ್ಮೀರ ಮುಂದಿಟ್ಟುಕೊಂಡು ರಾಜಕೀಯ ಮಾಡಿದ್ದು ಮುಗಿದ ಹಿನ್ನೆಲೆಯಲ್ಲಿ ಈಗ ಎನ್‍ಆರ್‍ಸಿ, ಎನ್‍ಪಿಆರ್ ಹಾಗೂ ಸಿಎಎ ಮುನ್ನೆಲೆಗೆ ತರ ಲಾಗಿದೆ. ಬಿಜೆಪಿ ಧರ್ಮದ ಹೆಸರಿನಲ್ಲಿ ಕೋಮುವಾದ ಸೃಷ್ಟಿಸಿ ರಾಜಕಾರಣ ಮಾಡುತ್ತಿದ್ದರೆ, ಕಾಂಗ್ರೆಸ್ ಜಾತಿ ಹೆಸರಿನಲ್ಲಿ ಕೋಮುವಾದ ಸೃಷ್ಟಿಸಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಇದ್ದರೂ ಅದರ ಹೆಸರಿ ನಲ್ಲಿ ಜನತೆಯನ್ನು ವಂಚಿಸಲಾಗುತ್ತಿದೆ. ಹೀಗಾಗಿ ನಾವು ನೋಡುತ್ತಿರುವುದು ಪ್ರಜಾಪ್ರಭುತ್ವದ ನಾಟಕವಾಗಿದೆ. ಸಂವಿಧಾನ ಅಂಗೀಕರಿಸಿದ ದಿನದಿಂದಲೂ ಅದನ್ನು ತಿರು ಚುವ ಹುನ್ನಾರ ನಡೆಯುತ್ತಲೇ ಬಂದಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದೆ. ಆದರೂ ಒಬ್ಬರು ಇನ್ನೊ ಬ್ಬರನ್ನು ಸಹಿಸುವ ಗುಣವನ್ನು ಬೆಳೆಸಬೇಕಾದ ರಾಜಕೀಯ ವ್ಯವಸ್ಥೆ, ಅದರ ಬದಲು ಇನ್ನೊಬ್ಬರ ಬಟ್ಟೆ ಹಾಗೂ ಆಹಾರ ನೋಡಿ ಅವರನ್ನು ದ್ವೇಷಿಸುವುದನ್ನು ಕಲಿಸಿದೆ. ಈ ಒಡೆದಾ ಳುವ ರಾಜಕೀಯ ಅರ್ಥ ಮಾಡಿಕೊಳ್ಳಬೇಕಿದೆ. ಸಮಾಜ ವಾದಿ ವ್ಯವಸ್ಥೆ ತರಬೇಕೆಂದು ಸಂವಿಧಾನದ ಪ್ರಸ್ತಾವನೆ ಹೇಳಿದೆ. ಆದರೆ ಈ ವ್ಯವಸ್ಥೆ ದೇಶದ ಶೇ.70ರಷ್ಟು ಜನ ಮೂರು ಹೊತ್ತಿನ ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ತಂದಿಟ್ಟಿದೆ ಎಂದು ವಿಷಾದಿಸಿದರು.
ನಮ್ಮ ಜನಪ್ರತಿನಿಧಿಗಳಿಗೆ ಎಲ್ಲಾ ಐಷಾರಾಮಿ ಸೌಲಭ್ಯ ಗಳು ಬೇಕು. ಆದರೆ ಜನಸಾಮಾನ್ಯರು ಮಾತ್ರ ಮೂಲ ಸವಲತ್ತಿಗೆ ಪರದಾಡಬೇಕು. ಇದು ನಮ್ಮನ್ನು ಆಳಿದವರು ಮಾಡಿದ ಸಾಧನೆ. ರಾಜಕಾರಣ ಎಂದರೆ ದುಡ್ಡು ಹಾಕಿ ದುಡ್ಡು ತೆಗೆಯುವುದು ಎನ್ನುವಂತಾಗಿದೆ. ಜಾಗೃತಿ ಮೂಡಿಸ ಬೇಕಾದ ಮಾಧ್ಯಮಗಳು (ಬಹುತೇಕ) ಜೋಕರ್ ಕೆಲಸ ಮಾಡುತ್ತಿವೆ ಎಂದರು.
ಕಾಶ್ಮೀರ ಜನತೆಗೆ ಸ್ವಾತಂತ್ರ್ಯ ಕಲ್ಪಿಸಿ ಎಂಬ ಅರ್ಥದಲ್ಲಿ `ಫ್ರೀ ಕಾಶ್ಮೀರ’ ಫಲಕ ಹಿಡಿದರೆ ಅದನ್ನೇ ದೇಶದ್ರೋಹ ಎಂದು ಬಿಂಬಿಸಲಾಯಿತು. ಎನ್‍ಪಿಆರ್, ಎನ್‍ಆರ್‍ಸಿ, ಸಿಎಎ ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆ ನೀಡುವು ದಲ್ಲ. ಬದಲಾಗಿ ಯಾರ್ಯಾರು ದಾಖಲೆಗಳನ್ನು ಕೊಡಲು ವಿಫಲರು ಅವರೆಲ್ಲರಿಗೂ ಸಮಸ್ಯೆಯಾಗಲಿದೆ. ನಮ್ಮ ದೇಶ ದಲ್ಲಿ ಶೇ.94ರಷ್ಟು ಅಸಂಘಟಿತ ವಲಯದ ಕಾರ್ಮಿಕರು, 10-15 ಕೋಟಿ ಭೂರಹಿತ ಕಾರ್ಮಿಕರು ಹಾಗೂ 6 ಕೋಟಿ ಅಲೆಮಾರಿಗಳಿದ್ದಾರೆ. ಎನ್‍ಪಿಆರ್‍ಗಾಗಿ ಕೇಳುವ ತಂದೆ-ತಾಯಿಯ ಜನ್ಮಸ್ಥಳ, ಜನ್ಮದಿನಾಂಕ ಇತ್ಯಾದಿ ದಾಖಲೆಗಳನ್ನು ಇವರ್ಯಾರಿಗೂ ಕೊಡಲು ಸಾಧ್ಯವಾಗುವುದಿಲ್ಲ ಎಂದರು.
ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಮಾತನಾಡಿ, ಒಬ್ಬರಿಗೆ ಸಮಸ್ಯೆಯಾದರೆ ಉಳಿದ ಎಲ್ಲರೂ ಅವರ ರಕ್ಷಣೆಗೆ ಬರುವುದು ಭಾರತದ ಸಂಸ್ಕøತಿ. ಇದು ಇಂದು ಈ ಚಳುವ ಳಿಯ ಮೂಲಕ ಆಗುತ್ತಿದೆ. ಪ್ರೀತಿ-ವಿಶ್ವಾಸ, ಸಮಾನತೆ ಕೊಟ್ಟಿ ರುವ ಸಂವಿಧಾನಕ್ಕೆ ಇಂದು ಧಕ್ಕೆ ಬಂದಿದೆ. ನಮ್ಮನ್ನಾಳು ವವರು ನಮ್ಮನ್ನು 70 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಲು ಬಯಸಿದ್ದಾರೆ. ಇಂದು ಸರ್ಕಾರ ನಮಗೆ ಸಂವಿಧಾನ ಕೊಟ್ಟಿರುವ ನಾಗರಿಕ ಹಕ್ಕನ್ನು ಪ್ರಶ್ನಿಸುತ್ತಿದೆ. ಇದನ್ನು ನಾವು ವಿರೋಧಿಸಬೇಕಿದೆ. ದೇಶ ನಡೆಸಲು ಇವರಿಗೆ ಬುದ್ಧಿ ಇಲ್ಲ. ಬದಲಿಗೆ ದೇಶ ಒಡೆಯುವ ಬುದ್ಧಿ ಹೊಂದಿದ್ದಾರೆ ಎಂದರು. ಸಿಸಿಐ ರಾಜ್ಯ ಸಂಚಾಲಕ ಬಿ.ರವಿ, ಹಿರಿಯ ಸಾಫ್ಟ್‍ವೇರ್ ತಂತ್ರಜ್ಞ ಕೆ.ಜಿ.ಸತೀಶ್, ನಿವೃತ್ತ ಪ್ರಾಂಶುಪಾಲರಾದ ವಿದ್ಯಾಶಂಕರ್ ಮತ್ತಿತರರು ಹಾಜರಿದ್ದರು.