ನಗರ ಪ್ರದೇಶದಲ್ಲಿ ಕಾಳಿಂಗ ಸರ್ಪ ವಾಸಿಸಲ್ಲ
ಮೈಸೂರು

ನಗರ ಪ್ರದೇಶದಲ್ಲಿ ಕಾಳಿಂಗ ಸರ್ಪ ವಾಸಿಸಲ್ಲ

February 9, 2020

ಉರಗ ತಜ್ಞ ಸ್ನೇಕ್ ಜಾಯ್ ವಿಶ್ವಾಸ
ಹಾವುಗಳು ಸುಖಾಸುಮ್ಮನೆ ಕಚ್ಚುವುದಿಲ್ಲ
ಮೈಸೂರು,ಫೆ.8(ಎಂಟಿವೈ)- ಕಾಳಿಂಗ ಸರ್ಪವಾಗಲಿ, ಎಂತಹ ವಿಷಕಾರಿ ಹಾವುಗಳು ಸುಖಾಸುಮ್ಮನೆ ಕಚ್ಚುವುದಿಲ್ಲ. ಅವುಗಳು ಘಾಸಿಗೊಂಡಾಗ, ತೊಂದರೆ ಕೊಟ್ಟರೆ ಮಾತ್ರ ಕಚ್ಚುತ್ತವೆ. ಅವು ಗಳನ್ನು ದ್ವೇಷಿಸುವ, ಸಂಹರಿಸುವ ಬದಲು ಸಂರಕ್ಷಣೆ ಅವಶ್ಯ ಎಂದು ಕಾಳಿಂಗ ಸರ್ಪ ರಕ್ಷಕ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ನಿವಾಸಿ, ಉರಗ ತಜ್ಞ ಸ್ನೇಕ್ ಜಾಯ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿ ಸಿದ್ದ ಅವರು ಶುಕ್ರವಾರ `ಮೈಸೂರು ಮಿತ್ರ’ನೊಂದಿಗೆ ಕಾಳಿಂಗ ಸರ್ಪ ಸಂರಕ್ಷಣೆ ಕುರಿತಂತೆ ತಮ್ಮ ಅನುಭವವನ್ನು ಹಂಚಿ ಕೊಂಡರು. ಖಾಸಗಿ ವಿಮಾ ಕಂಪನಿ ಪ್ರತಿನಿಧಿಯಾಗಿರುವ ಸ್ನೇಕ್ ಜಾಯ್ ಪ್ರವೃತ್ತಿಯಲ್ಲಿ ಉರಗ ಸಂರಕ್ಷಕರಾಗಿದ್ದಾರೆ. ಧರ್ಮಸ್ಥಳದ ಸಮೀಪವಿರುವ ಉಜಿರೆ ನಿವಾಸಿಯಾಗಿರುವ ಇವರು, ಇದುವರೆಗೂ ವಿವಿಧ ಪ್ರಭೇದ 6 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಸಂರಕ್ಷಿಸಿರುವುದಾಗಿ ತಿಳಿಸಿದರು.

ನಮ್ಮ ಮನೆಯ ಸಮೀಪ 2005ರಲ್ಲಿ ಹೆಬ್ಬಾವು ಕಾಣಿಸಿ ಕೊಂಡಿತ್ತು. ಯಾವುದೇ ಅನುಭವ ಹಾಗೂ ತರಬೇತಿ ಇಲ್ಲದಿ ದ್ದರೂ ನಾನು ಅದನ್ನು ಹಿಡಿದಿದ್ದೆ. ನಂತರ 2006ರಲ್ಲಿ ನಾಗರ ಹಾವೊಂದನ್ನು ಹಿಡಿದೆ. 2007ರಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ಮಾಡಿದೆ. ಆ ನಂತರ ಸಂದರ್ಭ ಬಂದಾಗಲೆಲ್ಲಾ ಹಾವುಗಳ ಸಂರಕ್ಷಣೆ ಕಾರ್ಯಕ್ಕೆ ತೊಡಗಿಸಿಕೊಂಡೆ. ಇದುವ ರೆಗೂ 188 ಕಾಳಿಂಗ ಸರ್ಪ, 2500 ರಷ್ಟು ನಾಗರಹಾವು, ಹೆಬ್ಬಾವು, ಕಟ್ಟು ಹಾವು, ಮಂಡಲದ ಹಾವು. 2007 ಹಾಗೂ 2009ರಲ್ಲಿ ಹಾವು ಹಿಡಿಯುವ ವೇಳೆ ಕಚ್ಚಿಸಿಕೊಂಡಿದ್ದೇನೆ. ನಂತರ ಎಚ್ಚೆತ್ತು ಅತ್ಯಂತ ತಾಳ್ಮೆಯಿಂದ ರಕ್ಷಣಾ ಕಾರ್ಯ ನಡೆಸುತ್ತಿದ್ದೇನೆ ಎಂದರು.

ಯಾವುದೇ ಹಾವುಗಳು ಸುಮ್ಮನೆ ಕಚ್ಚುವುದಿಲ್ಲ. ಅವುಗಳಿಗೆ ತೊಂದರೆ ಆದರೆ ಮಾತ್ರ ಕಚ್ಚುತ್ತವೆ. ಹಾವು ಅಟ್ಟಾಡಿಸಿ ಬಂದು ಕಚ್ಚುವುದಿಲ್ಲ. ಕಾಳಿಂಗ ಸರ್ಪ ಕಚ್ಚುವುದು ಕಡಿಮೆ. ಮೊದಲು ರಕ್ಷಣಾತ್ಮಕವಾಗಿ ಹೆಡೆ ಎತ್ತಿ ಬುಸು ಗುಟ್ಟುವ ಮೂಲಕ ಭೀತಿ ಮೂಡಿಸುತ್ತದೆ. ಇದುವರೆಗೆ ಇಬ್ಬರು ಮಾತ್ರ ಕಾಳಿಂಗ ಸರ್ಪ ಕಚ್ಚಿ ಮೃತಪಟ್ಟಿದ್ದಾರೆ.
ಕಳಸದ ನಿವಾಸಿ, ಉರಗ ಪ್ರೇಮಿ ಪ್ರಫುಲ್ ದಾಸ್ ಭಟ್ ಹಾಗೂ ಪಶುವೈದ್ಯರೊಬ್ಬರು ರಾತ್ರಿ ವೇಳೆ ಬೈಕ್‍ನಲ್ಲಿ ಹೋಗುವಾಗ ರಸ್ತೆ ದಾಟುತ್ತಿದ್ದ ಕಾಳಿಂಗ ಸರ್ಪ ಕಂಡು ಹೆದರಿ ಅದರ ಮೇಲೆ ಬೈಕ್‍ನೊಂದಿಗೆ ಬಿದ್ದು, ಕಚ್ಚಿಸಿಕೊಂಡು ಮೃತಪಟ್ಟಿ ದ್ದಾರೆ. ಇದನ್ನು ಹೊರತುಪಡಿಸಿ ಬೇರಾವ ಘಟನೆ ದಕ್ಷಿಣ ಕನ್ನಡ ದಲ್ಲಿ ನಡೆದಿಲ್ಲ. ಕಾಳಿಂಗ ಕಚ್ಚಿದರೆ ಚಿಕಿತ್ಸೆ ನೀಡಲು ಭಾರತದಲ್ಲಿ ಆಂಟಿವೆನಮ್(ಔಷಧಿ) ಇಲ್ಲ. ಕಚ್ಚಿದ 3 ರಿಂದ 10 ನಿಮಿಷದಲ್ಲಿ ಸಾವನ್ನಪ್ಪುತ್ತಾರೆ. ನಗರ ಪ್ರದೇಶ ಕಾಳಿಂಗ ಸರ್ಪದ ನೆಲೆಯಲ್ಲ. ಬೇರೆ ಬೇರೆ ಸಂದರ್ಭದಲ್ಲಿ ಕಾಳಿಂಗ ಸರ್ಪ ವಿಷ ಕಾರುತ್ತದೆ. ಆಹಾರ ತಿನ್ನುವಾಗ ಹಾಗೂ ಘಾಸಿಗೊಂಡಾಗ ಕಾರುವ ವಿಷದ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ ಎಂದು ಅವರು ತಿಳಿಸಿದರು.

Translate »