ನ್ಯಾಯಾಧೀಶೆ, ಪಪಂ ಚುನಾವಣೆಯಲ್ಲಿ ಗೆದ್ದ ನ್ಯಾಯವಾದಿಗೆ ಅಭಿನಂದನೆ
ಕೊಡಗು

ನ್ಯಾಯಾಧೀಶೆ, ಪಪಂ ಚುನಾವಣೆಯಲ್ಲಿ ಗೆದ್ದ ನ್ಯಾಯವಾದಿಗೆ ಅಭಿನಂದನೆ

December 9, 2018

ವಿರಾಜಪೇಟೆ:  ಹಿಂದಿನ ದಿನಗಳಲ್ಲಿ ಮಹಿಳಾ ನ್ಯಾಯಾಧೀಶರ ಹುದ್ದೆಯನ್ನು ಸಮಾಜ ಒಪ್ಪುತ್ತಿರಲಿಲ್ಲ. ಇತ್ತೀಚೆಗೆ ಆ ಹುದ್ದೆಯನ್ನು ಜನರು ಗೌರವಿಸುತ್ತಾರೆ. ಮಹಿ ಳೆಯರು ದಿನನಿತ್ಯ ಮನೆಯ ಕೆಲಸಗಳನ್ನು ಮುಗಿಸಿ ನಂತರ ಕರ್ತವ್ಯಕ್ಕೆ ಹೋಗಬೇಕಾಗಿರುವುದರಿಂದ ಮಹಿಳೆಗೆ ಕಾರ್ಯಭಾರ ಹೆಚ್ಚಾಗುತ್ತದೆ ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ.ರಮಾ ಹೇಳಿದರು.

ವಿರಾಜಪೇಟೆ ನ್ಯಾಯಾಲಯದಲ್ಲಿ ವಕೀಲರಾಗಿದ್ದು, ಈಗ ನ್ಯಾಯಾಧೀಶರಾಗಿ ಆಯ್ಕೆಯಾದ ಎ.ಎಸ್.ಸಲ್ಮಾ ಹಾಗೂ ವಕೀಲೆ ಯಶೋಧ ಅನಿಲ್ ಅವರು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಿನ್ನಲೆ ನ್ಯಾಯಾ ಲಯದ ಸಭಾಂಗಣದಲ್ಲಿ ವಿರಾಜಪೇಟೆ ವಕೀಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ‘ಅಭಿನಂದನಾ ಸಮಾರಂಭ’ ದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಯಾಧೀಶೆ ಬಿ.ಜಿ.ರಮಾ ಮಾತನಾಡುತ್ತಾ ನ್ಯಾಯಾಧೀಶರಾಗಿ ಆಯ್ಕೆ ಯಾಗಿರುವ ಸಲ್ಮಾ ಅವರು ಹಿರಿಯ ವಕೀಲರೊಂದಿಗೆ ಕೆಲಸ ಮಾಡಿರುವುದರಿಂದ ಮುಂದೆ ಅವರಿಗೆ ಉತ್ತಮ ಭವಿಷ್ಯ ವಿದೆ. ತಮ್ಮ ಕಾರ್ಯವನ್ನು ಸರಿಯಾಗಿ ನಿಭಾಯಿಸಬಹುದು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಡಿ.ಆರ್.ಜಯ ಪ್ರಕಾಶ್ ಮಾತನಾಡಿ, ನ್ಯಾಯಾಧೀಶರಾದವರಿಗೆ ಪ್ರಮಾಣಿ ಕತೆ ಹಾಗೂ ಪರಿಶ್ರಮ ಅವಶ್ಯ. ಅಧಿಕಾರವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು, ಸಮಾಜ ಮತ್ತು ಜನರಿಗೂ ನ್ಯಾಯ ದೊರಕಿಸುವಂತಾಗಬೇಕು ಎಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಾನಂದ ಲಕ್ಷ್ಮಣ ಅಂಚಿ ಮಾತನಾಡಿ, ಯುವ ವಕೀಲರು ಬಹಳಷ್ಟು ಅವಕಾಶಗ ಳಿದ್ದು, ಅದನ್ನು ಸದುಪಯೋಗಪಡಿಸಿ ಕೊಳ್ಳುವಂತಾಗಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಎಂ.ಎಂ.ನಂಜಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿರುವ ಸಲ್ಮಾ ಅವರ ಪೋಷಕರ ಪರಿಶ್ರಮ ದಿಂದ ಮತ್ತು ಅವರ ಆತ್ಮಸ್ಥೈರ್ಯದಿಂದ ಅವರ ವೃತ್ತಿ ಜೀವನ ಎತ್ತರಕ್ಕೇರಿದೆ ಎಂದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಹಿರಿಯ ವಕೀಲರಾದ ಐ.ಆರ್.ಪ್ರಮೋದ್ ಹಾಗೂ ಸನ್ಮಾನ ಸ್ವೀಕರಿಸಿದ ಸಲ್ಮಾ ಮತ್ತು ವಕೀಲೆ ಪಟ್ಟಣ ಪಂಚಾಯಿತಿ ಸದಸ್ಯೆ ಯಶೋಧ ಅನಿಲ್ ಮಾತ ನಾಡಿದರು. ಹಿರಿಯ ವಕೀಲರುಗಳಾದ ಎಂ.ಕೆ. ಪೂವಯ್ಯ, ಎನ್.ಜಿ.ಕಾಮತ್, ಕೆ.ಎಂ.ಮಾದಪ್ಪ, ಎಂ.ಕೆ.ದಿನೇಶ್ ಸಭೆಯಲ್ಲಿ ಮಾತನಾಡಿದರು. ಹಿರಿಯ ವಕೀಲರಾದ ದೇವಲಿಂಗಯ್ಯ ಸ್ವಾಗತಿಸಿದರೆ, ಅನುಪಮ ಕಿಶೋರ್ ವಂದಿಸಿದರು.

Translate »