ಬಿಜೆಪಿ ಮಣಿಸಲು ದೋಸ್ತಿ ಸಂಕಲ್ಪ
ಮೈಸೂರು

ಬಿಜೆಪಿ ಮಣಿಸಲು ದೋಸ್ತಿ ಸಂಕಲ್ಪ

April 13, 2019

ಮೈಸೂರು: ಮೈಸೂರಿನಲ್ಲಿಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಶಕ್ತಿ ಪ್ರದರ್ಶನ ದೊಂದಿಗೆ ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ವನ್ನು ಬದಿಗೊತ್ತಿ ಪರಸ್ಪರ ಸಮನ್ವಯತೆ ಯಿಂದ ಬಿಜೆಪಿ ಮಣಿಸಬೇಕೆಂಬ ಸಂಕಲ್ಪ ಕೈಗೊಳ್ಳಲಾಯಿತು.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಉಭಯ ಪಕ್ಷಗಳ ನಾಯಕರ ಪರಸ್ಪರ ನಿಂದನೆಗೆ ವೇದಿಕೆಯಾಗಿದ್ದ ಮೈಸೂರು ಮಹಾರಾಜ ಕಾಲೇಜು ಮೈದಾನ ಇಂದು ಅದೇ ನಾಯಕರ ಪರಸ್ಪರ ಬಣ್ಣನೆಗೆ ಸಾಕ್ಷಿಯಾಯಿತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಾ ವೇಶದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇ ಗೌಡರು, ಮಾಜಿ ಮುಖ್ಯಮಂತ್ರಿ, ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ಸೇರಿದಂತೆ ಉಭಯ ಪಕ್ಷಗಳ ಎಲ್ಲಾ ನಾಯಕರು, ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ವಾಗ್ದಾನ ಮಾಡಿದರು.

ಮೈತ್ರಿ ಧರ್ಮಕ್ಕೆ ಕಳಂಕ ಬಾರದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಜಯಶಂಕರ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಆರ್.ಧ್ರುವನಾರಾ ಯಣ್ ಗೆಲುವಿಗೆ ಶ್ರಮಿಸಲೇಬೇಕೆಂದು ನಮ್ಮೆಲ್ಲಾ ಶಾಸಕರು, ಮುಖಂಡರಿಗೆ ಸೂಚಿಸಿದ್ದೇವೆಂದು ಹೆಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದರೆ, ವಿಜಯಶಂಕರ್, ಆರ್.ಧ್ರುವನರಾಯಣ್, ಮಂಡ್ಯದ ನಿಖಿಲ್ ಕುಮಾರಸ್ವಾಮಿ ಹಾಗೂ ಹಾಸನದ ಪ್ರಜ್ವಲ್ ರೇವಣ್ಣ ಎರಡೂ ಪಕ್ಷಗಳ ಅಭ್ಯರ್ಥಿಗಳು. ಈ ನಾಲ್ವರನ್ನೂ ನಾವು ಲೋಕಸಭೆಗೆ ಆಯ್ಕೆ ಮಾಡಬೇಕೆಂದು ಘೋಷಿಸಿ ದರು. ಸಚಿವ ಜಿ.ಟಿ.ದೇವೇಗೌಡರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಿದ್ದ ಸಿದ್ದ ರಾಮಯ್ಯನವರನ್ನು ಕೊಂಡಾಂಡಿದ್ದಲ್ಲದೆ, ಮೈತ್ರಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವ ಭರವಸೆ ನೀಡಿದರು. ಸಮಾವೇಶದಲ್ಲಿ ಮಾತನಾಡಿದವರಲ್ಲಿ ಬಹುತೇಕರು ಮೈತ್ರಿ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಲ್ಲದೆ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಲಾಗಿದೆ. 78 ಶಾಸಕರಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್, 37 ಶಾಸಕರಿರುವ ಪ್ರಾದೇಶಿಕ ಪಕ್ಷ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿ ಕೊಂಡಿದೆ. ಇದಾಗಿ 11 ತಿಂಗಳ ಅಧಿಕಾರದಲ್ಲಿ ಹಿಂದಿನ ಸಿಎಂ ಸಿದ್ದರಾಮಯ್ಯನವರ ಎಲ್ಲಾ ಜನಪರ ಕಾರ್ಯಕ್ರಮಗಳನ್ನು ಮುಂದುವರೆಸುವುದರ ಜೊತೆಗೆ ಹೊಸ ಕಾರ್ಯಕ್ರಮಗಳೂ ಬಂದಿವೆ. ಇದೀಗ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಶಕ್ತಿ ಕುಂದಿಸುವ ಉದ್ದೇಶದಿಂದ ಮೈತ್ರಿ ಹೋರಾಟ ನಡೆಸುತ್ತಿದ್ದೇವೆ. 7 ಕ್ಷೇತ್ರಗಳನ್ನು ಜೆಡಿಎಸ್‍ಗೆ ಬಿಟ್ಟು ಕೊಟ್ಟು, ಕಾಂಗ್ರೆಸ್ 21 ಕ್ಷೇತ್ರಗಳನ್ನು ಪಡೆದುಕೊಂಡಿದೆ. ಹಾಗೆಯೇ ಕಾಂಗ್ರೆಸ್‍ನ ವಿಜಯಶಂಕರ್ ಮೈಸೂರು-ಕೊಡಗು ಕ್ಷೇತ್ರದಲ್ಲಿ , ಚಾಮರಾಜನಗರದಲ್ಲಿ ಧ್ರುವನಾರಾಯಣ್ ಸ್ಪರ್ಧಿಸಿದ್ದಾರೆ. ಮೈತ್ರಿ ಧರ್ಮಕ್ಕೆ ಲೋಪವಾಗದಂತೆ ಈ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳ ಪರ ಶ್ರಮಿಸುವಂತೆ ಜಿ.ಟಿ.ದೇವೇಗೌಡರು ಸೇರಿದಂತೆ ನಮ್ಮೆಲ್ಲಾ ಶಾಸಕರಿಗೆ ಸೂಚನೆ ನೀಡಿದ್ದಾಗಿದೆ. ಎರಡೂ ಪಕ್ಷಗಳು ಸೇರಿ ಕೆಲಸ ಮಾಡಿದರೆ ಗೆಲುತ್ತೇವೆಂಬ ದೃಢವಾದ ನಂಬಿಕೆ ಇದೆ. ಸ್ಥಳೀಯ ಚುನಾವಣೆ ಸಂದರ್ಭದಲ್ಲಾದ ಭಿನ್ನಾಭಿಪ್ರಾಯಗಳನ್ನು ಮರೆತು ಹೋರಾಟ ಮಾಡಿದರೆ ಮಾತ್ರ ಮೈತ್ರಿ ಸರ್ಕಾರ ಮಾಡಿದ್ದು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಮೋದಿಗೆ ಉತ್ತರಿಸುವ ಸಾಮಥ್ರ್ಯವಿದೆ: ಮೋದಿ ಮನಬಂದಂತೆ ಟೀಕೆ ಮಾಡುತ್ತಿದ್ದಾರೆ. ಈ ಬಗ್ಗೆ ನಾನು ಹೆಚ್ಚು ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಮೋದಿಗೆ ಉತ್ತರ ನೀಡುವ ಯೋಗ್ಯತೆ ಹಾಗೂ ಸಾಮಥ್ರ್ಯ ಈ ದೇವೇಗೌಡರಿಗಿದೆ ಎಂಬುದನ್ನು ಸೂಚ್ಯಕವಾಗಿ ತಿಳಿಸುತ್ತಿದ್ದೇನೆ. ಹಾವೇರಿಯಲ್ಲಿ ಟೀಕೆ ಮಾಡಿದ್ದಾರಂತೆ. ನಾನೇನು ಸನ್ಯಾಸಿಯಾಗಲು ಹುಟ್ಟಿಲ್ಲ. ನಾನು ರೈತನ ಮಗ. ಜೀವನದಲ್ಲಿ ಕೊನೆ ಉಸಿರಿರುವ ತನಕ 24ಘಿ7 ಕೆಲಸ ಮಾಡುತ್ತೇನೆ. ದೇಶಕ್ಕೆ ಅಪಾಯವಾಗಿರುವ ಕೋಮುವಾದಿ ಪಕ್ಷವನ್ನು ತೊಡೆದು ಹಾಕದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಶಪಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಮೋದಿಯನ್ನು ವೈಭವೀಕರಿಸಲಾಗುತ್ತಿದೆ. ಸುಳ್ಳು ಸುದ್ದಿಗಳನ್ನು ಯುವ ಸಮುದಾಯ ಪರಾಮರ್ಶಿಸಬೇಕು. ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲಲೇಬೇಕೆಂದು ಶಪಥ ಮಾಡಿ ಹೋರಾಟ ಮಾಡೋಣ. ವಿಜಯಶಂಕರ್ ಯೋಗ್ಯ ವ್ಯಕ್ತಿ. ಇವರನ್ನು ಲೋಕಸಭೆಗೆ ಆಯ್ಕೆ ಮಾಡಿ ಕಳುಹಿಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಮೋದಿ ಮತ್ತೆ ಪ್ರಧಾನಿಯಾಗಬಾರದು: ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ಮೋದಿ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಪ್ರತಾಪ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ 10 ತಿಂಗಳ ಅಧಿಕಾರ ಪೂರೈಸಿದೆ. ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲೇ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಹೋರಾಟದೊಂದಿಗೆ ಬಿಜೆಪಿ ಎದುರಿಸುವ ತೀರ್ಮಾನವಾಗಿತ್ತು. ಇಡೀ ದೇಶದಲ್ಲಿ ಬಿಜೆಪಿಯನ್ನು ಸೋಲಿಸಿ, ಮತ್ತೆ ಮೋದಿ ಪ್ರಧಾನಿಯಾಗದಂತೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಳೆದ 4 ದಿನಗಳಿಂದ ದೇವೇಗೌಡರೊಂದಿಗೆ ಜಂಟಿ ಪ್ರಚಾರ ಮಾಡುತ್ತಿದ್ದೇನೆ. ಕೋಮುವಾದಿ ಗಳನ್ನು ಎದುರಿಸಲು ಒಟ್ಟಿಗೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ದೇಶದ ಹಿತಕ್ಕಿಂತ ನಮ್ಮ ಭಿನ್ನಾಭಿಪ್ರಾಯಗಳು ಮುಖ್ಯವಲ್ಲ ಎಂದು ಹೇಳಿದರು.

ಮೋದಿ ಅಧಿಕಾರಾವಧಿಯಲ್ಲಿ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ರೈತರು, ಹಿಂದುಳಿದವರು ಆತಂಕದಿಂದ ಬದುಕುವಂತಾಗಿದೆ. ಆರ್‍ಎಸ್‍ಎಸ್ ಹಾಗೂ ಬಿಜೆಪಿ ನಾಯಕರು ಸಂವಿಧಾನ ಸುಡಬೇಕು, ಅಂಬೇಡ್ಕರ್ ಪ್ರತಿಮೆ ಒಡೆಯಬೇಕೆಂದು ಹೇಳಿಕೆ ನೀಡುತ್ತಾರೆ. ಮೋದಿ ಹಾಗೂ ಅಮಿತ್ ಷಾ ಸೂಚನೆಯಿಲ್ಲದೆ ಹೀಗೆ ಹೇಳಲು ಸಾಧ್ಯವಿಲ್ಲ. ನೊಂದ ವರ್ಗದವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಒಂದು ಮತವನ್ನೂ ಹಾಕಬಾರದು. ಬಿಜೆಪಿಗೆ ಮತ ಹಾಕಿದರೆ ಪ್ರಜಾತಂತ್ರ, ಸಂವಿಧಾನದೊಂದಿಗೆ ನಾವೂ ಉಳಿಯುವುದಿಲ್ಲ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದರೆ ಮೋದಿ ಪ್ರಧಾನಿಯಾಗೋಲ್ಲಾ, ಸರ್ವಾಧಿಕಾರಿಯಾಗುತ್ತಾರೆ. ಮತ್ತೆ ಚುನಾವಣೆಯೇ ನಡೆಯದ ದುಸ್ಥಿತಿ ಎದುರಾ ಗುತ್ತದೆ ಎಂದರು. ಶ್ರೀಮಂತ ಉದ್ಯಮಿಗಳಿಗೆ ಅಚ್ಛೇದಿನ್ ಬಂದಿದೆ. ಬಡವರಿಗೆ, ಶೋಷಿತರಿಗಲ್ಲ. ಚೌಕಿದಾರ್ ಚೌಕಿದಾರ್ ಎನ್ನುತ್ತಾರಲ್ಲ ವಿಜಯಮಲ್ಯ, ನೀರವ್ ಮೋದಿ ಇನ್ನಿತರರು ಸಾವಿರಾರು ಕೋಟಿ ರೂ. ತೆಗೆದುಕೊಂಡು ಹೋಗುವಾಗ ಕಾವಲುಗಾರ ಏನು ಮಾಡುತ್ತಿದ್ದರು. ರಫೆಲ್‍ನ 30 ಸಾವಿರ ಕೋಟಿ ರೂ. ಹಗರಣ, 84 ಬಾರಿ ವಿದೇಶ ಪ್ರವಾಸಕ್ಕೆ 1690 ಕೋಟಿ ರೂ. ವೆಚ್ಚ ಮಾಡಿರುವುದು ಮೋದಿ ಸಾಧನೆ. ಮೋದಿ ಚೌಕಿದಾರ್ ಅಲ್ಲ, ಭ್ರಷ್ಟಾಚಾರದಲ್ಲಿ ಬಾಗೀದಾರ್. ಬಾಯಿ ಬಡಾಯಿ, ಸಾಧನೆ ಶೂನ್ಯ. ಚುನಾವಣೆ ವೇಳೆ ಕಾಂಗ್ರೆಸ್-ಜೆಡಿಎಸ್ ಮುಖಂಡರ ಮೇಲೆ ಐಟಿ ದಾಳಿ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಮನೆಯಲ್ಲಿ ಹಣವಿಲ್ಲವೇ? ಶಾಸಕರಿಗೆ ಹಣದ ಆಮಿಷ ನೀಡಿದ್ದರ ವಿರುದ್ಧ ಪೊಲೀಸರು, ಐಟಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾನು ಮುಖ್ಯ ಮಂತ್ರಿಯಾಗಿದ್ದಾಗ ಚುನಾವಣಾ ಪೂರ್ವದಲ್ಲಿ ನೀಡಿದ್ದ 165 ಭರವಸೆಗಳನ್ನೂ ಈಡೇರಿಸಿದ್ಧೇನೆ. ಮೋದಿ ಹೇಳಿದ್ದರಲ್ಲಿ ಒಂದೂ ಮಾಡಿಲ್ಲ. ಮೋದಿ ಮಹಾನ್ ಸುಳ್ಳುಗಾರ. ಬಿಟ್ಟರೆ ಸಂಸದ ಪ್ರತಾಪ ಸಿಂಹ 2ನೇ ಸುಳ್ಳುಗಾರ. ಕಾಂಗ್ರೆಸ್ ಮಾಡಿದ ಕೆಲಸವನ್ನೆಲ್ಲಾ ತನ್ನದೆಂದು ಪುಸ್ತಕದಲ್ಲಿ ಪ್ರಕಟಿಸಿದ್ದಾರೆ ಎಂದು ಏಕವಚನದಲ್ಲೇ ಮೋದಿ ಹಾಗೂ ಪ್ರತಾಪ ಸಿಂಹರನ್ನು ಸಿದ್ದರಾಮಯ್ಯ ಜರಿದರು.

Translate »