ತಲಕಾಡು ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ
ಮೈಸೂರು

ತಲಕಾಡು ಗ್ರಾಮದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ

March 27, 2019

ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಕೈ ಮುಖಂಡರ ಕಿಡಿ
ತಿ.ನರಸೀಪುರ: ಪ್ರಸಕ್ತ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿನ ಹಾಲಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್‍ರನ್ನು ಸೋಲಿಸಲು ನಾನೇ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದಿರುವ ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ವಿರುದ್ಧ ಕೈ ಮುಖಂಡರು ಕಿಡಿಕಾರಿದರು.

ತಾಲೂಕಿನ ತಲಕಾಡು ಗ್ರಾಮದಲ್ಲಿರುವ ನಾಯಕರ ಸಮುದಾಯ ಭವನದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಧ್ರುವನನ್ನು ಸೋಲಿಸುತ್ತೇನೆ ಅಂದಿದ್ದ ವಿ.ಶ್ರೀನಿವಾಸ್ ಪ್ರಸಾದ್ ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ ಬನ್ನೂರಿನ ಮಾಜಿ ಶಾಸಕ, ಹಿರಿಯ ರಾಜಕಾರಣಿ ಎಸ್.ಕೃಷ್ಣಪ್ಪ ಅವರು ತೀವ್ರ ವಾಗ್ದಾಳಿ ನಡೆಸಿದರು.

ಮೊದಲಿನಿಂದಲೂ ಶ್ರೀನಿವಾಸ್ ಪ್ರಸಾದ್ ಅವರಿಗೆ ಓಟ್ ಹಾಕುತ್ತಾ ಬೆಂಬಲಿಸುತ್ತಿದ್ದೆ ಎಂದ ಅವರು, ಚಾರಿತ್ರಿಕ ಹಿನ್ನೆಲೆಯುಳ್ಳ ರಾಜಕಾರಣಿಯ ಬಾಯಲ್ಲಿ ದ್ವೇಷದ ಕೆಂಡ ಕಾರುವ ಮಾತುಗಳನ್ನು ನಿರೀಕ್ಷಿಸರಿಲ್ಲ. ಲೋಕಸಭಾ ಚುನಾವಣೆಯಲ್ಲಿ ಧ್ರುವನಾರಾಯಣ್ ಅವರೊಬ್ಬರೇ ಸ್ಪರ್ಧಿಸಿಲ್ಲ. ಮತ್ತೊಂದು ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಕೂಡ ಕಣದಲ್ಲಿದ್ದಾರೆ. ಅದೇಗೆ ಸಂಸದರೊಬ್ಬರನ್ನೇ ಸೋಲಿಸುತ್ತೇನೆ ಎನ್ನುತ್ತಾರೆ. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಹಿರಿತನ ಮತ್ತು ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷದ ಅಭ್ಯರ್ಥಿಯ ವಿರುದ್ಧ ಆರ್.ಧ್ರುವನಾರಾಯಣ್ ಒಬ್ಬರೇ ಇಲ್ಲ. ಅವರ ಹಿಂದೆ ಕಾಂಗ್ರೆಸ್‍ನ ಲಕ್ಷಾಂತರ ಕಾರ್ಯಕರ್ತರು ಹಾಗೂ ಅವರ ವ್ಯಕ್ತಿತ್ವವನ್ನು ಒಪ್ಪಿಕೊಳ್ಳುವಂತಹ ಲಕ್ಷಾಂತರ ಜನರು ಅವರ ಜೊತೆ ಇದ್ದೇವೆ. ಧ್ರುವ ಅವರನ್ನು ಸೋಲಿಸುತ್ತೇನೆ ಎನ್ನುವುದು ಅಷ್ಟೂ ಸುಲಭವಲ್ಲ. ಯಾವುದೇ ಚುನಾವಣೆಯನ್ನೂ ಚುನಾವಣೆಯಾಗಿಯೇ ತೆಗೆದುಕೊಳ್ಳಬೇಕು. ದ್ವೇಷ ರಾಜಕಾರಣ ಚುನಾವಣೆಗಳಲ್ಲಿ ಉತ್ತಮ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮಾತನಾಡಿ, ಪ್ರಸಕ್ತ ಲೋಕಸಭಾ ಚುನಾವಣೆಯು ಜಾತ್ಯಾತೀತ ಹಾಗೂ ಕೋಮುವಾದಿ ಶಕ್ತಿಗಳ ನಡುವೆ ನಡೆಯುತ್ತಿರುವ ಹೋರಾಟವಾಗಿದ್ದು, ಜಾತ್ಯಾತೀತ ಶಕ್ತಿ ಗೆಲ್ಲಿಸಲು ಕಾಂಗ್ರೆಸ್ ಬೆಂಬಲಿಸಬೇಕು. ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿತ್ತು. ತದ ನಂತರ ಬಂದ ಬಿಜೆಪಿ ಸರ್ಕಾರ ಹಾಗೂ ನರೇಂದ್ರ ಮೋದಿಯವರು ಅಭಿವೃದ್ಧಿಗೆ ಆದ್ಯತೆ ನೀಡಲಿಲ್ಲ. ಉದ್ಯೋಗದ ಭರವಸೆ ಹುಸಿಯಾಗಿದೆ. ಸರ್ಜಿಕಲ್ ಸ್ಟ್ರೈಕ್ ನೆಪವಿಟ್ಟು ರಾಜಕೀಯ ಮಾಡುತ್ತಿದ್ದಾರೆ. ವಿದೇಶಿದರಲ್ಲಿರುವ ಕಪ್ಪು ಹಣ ತಂದು ಬಡವರ ಖಾತೆಗಳಿಗೆ ಹಣ ಹಾಕುವುದಾಗಿ ಹೇಳಿ ಜನರನ್ನು ವಂಚಿಸಿದ್ದಾರೆ. ಇಂತಹ ಸರ್ಕಾರವನ್ನು ಅಧಿಕಾರದಿಂದ ದೂರವಿಡಲು ಮತ್ತೆ ಕಾಂಗ್ರೆಸ್‍ಗೆ ಅಧಿಕಾರ ನೀಡಬೇಕು ಎಂದು ಕರೆ ನೀಡಿದರು.

ಸಭೆಯನ್ನು ಉದ್ಘಾಟಿಸಿ ವರುಣಾ ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಎಸ್.ಬಾಲರಾಜು, ಗುಂಡ್ಲುಪೇಟೆ ಯುವ ಮುಖಂಡ ಗಣೇಶ್ ಪ್ರಸಾದ್, ಜಿಪಂ ಸದಸ್ಯ ಮಂಜುನಾಥನ್, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಸೋಸಲೆ ಮಹದೇವಸ್ವಾಮಿ, ಮಾಜಿ ಸದಸ್ಯೆ ಎಂ.ಸುಧಾ ಮಹದೇವಯ್ಯ, ತಾಪಂ ಅಧ್ಯಕ್ಷ ಆರ್.ಚೆಲುವರಾಜು, ಸದಸ್ಯ ಕುಕ್ಕೂರು ಗಣೇಶ್, ಮಾಜಿ ಉಪಾಧ್ಯಕ್ಷ ಪ್ರಸನ್ನ, ಕೆಎಂಎಫ್ ನಿರ್ದೇಶಕ ಕೆ.ಸಿ.ಬಲರಾಮ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಮಾಜಿ ಸದಸ್ಯೆ ಮಲ್ಲಾಜಮ್ಮ, ಟಿ.ಬೆಟ್ಟಹಳ್ಳಿ ನಂಜಮ್ಮಣ್ಣಿ, ಯುವ ಕಾಂಗ್ರೆಸ್ ಅಧ್ಯಕ್ಷ ಟಿ.ಎಸ್.ಲೋಕೇಶ್, ಪುರಸಭಾ ಸದಸ್ಯರಾದ ಎನ್.ಸೋಮು, ಎಸ್.ಮದನ್‍ರಾಜ್, ಮುಖಂಡರಾದ ಎಂ.ಬಿ.ಚಂದ್ರಶೇಖರ, ನರಸಿಂಹ ಮಾದನಾಯಕ, ಸತೀಶ್ ನಾಯಕ, ಡಾ.ಬಿ.ಪ್ರದೀಪ, ಆರ್.ಪ್ರಕಾಶ್‍ಕುಮಾರ್, ಬಸವರಾಜನಾಯಕ, ಎಂ.ಶಿವಪ್ರಸಾದ್, ಎಂ.ಮಹದೇವಯ್ಯ, ಮಲ್ಲಣ್ಣಿ, ವಿಜಯಕುಮಾರ್, ಕುಮಾರನಾಯಕ, ಕಲಿಯೂರು ಶಿವಣ್ಣ, ಸಿದ್ದರಾಜು ಹಾಗೂ ಇನ್ನಿತರರಿದ್ದರು.

ಕ್ಷೇತ್ರದಲ್ಲಿ ಕಾಣಿಸದ ಅಪ್ಪ-ಮಗ
ಸಾರ್ವತ್ರಿಕ ಲೋಕಸಭಾ ಚುನಾವಣೆಯ ರಂಗೇರುತ್ತಿದ್ದರೂ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಅವರ ಪುತ್ರ ಸುನೀಲ್ ಬೋಸ್ ಅವರಿಬ್ಬರೂ ಕ್ಷೇತ್ರದಾದ್ಯಂತ ಇನ್ನೂ ಕಾಣಿಸುತ್ತಿಲ್ಲ. ತಲಕಾಡಿನಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಗೆ ಇಬ್ಬರೂ ಗೈರು ಹಾಜರಾಗಿರುವುದು ಎದ್ದು ಕಾಣುತ್ತಿತ್ತು. ಈ ಹಿಂದೆ ನಡೆದ ಜನಸಂಪರ್ಕ ಅಭಿಯಾನದಲ್ಲಿ ಗೈರುಹಾಜರಾಗಿದ್ದರು. ಅಪ್ಪ ಮಗ ಇಲ್ಲದಿದ್ದರೂ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಕ್ಷೇತ್ರದಾದ್ಯಂತ ಚುನಾವಣೆ ಪ್ರಚಾರವನ್ನು ಕೈಗೊಳ್ಳುತ್ತಿದ್ದಾರೆ. ಇದರಿಂದಾಗಿ ಕಾಂಗ್ರೆಸ್‍ನ ಕೆಲ ಮುಖಂಡರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಮಹದೇವಪ್ಪ ಮತ್ತು ಸುನೀಲ್ ಬರಬಹುದೇನೊ ಎಂದು ಬರುವ ಕಾರ್ಯಕರ್ತರಿಗೆ ಇರುಸು ಮುರುಸು ಉಂಟಾಗುತ್ತಿದ್ದರೆ, ಕಾರ್ಯಕ್ರಮ ಆಯೋಜಿಸುವ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಖಂಡರಿಗೆ ಮುಜುಗರವಾಗುತ್ತಿದೆ. ಇಂತಹ ಗೊಂದಲಕ್ಕೆ ತೆರೆ ಎಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತ ಗಮನಹರಿಸಬೇಕಿದೆ.

ತಿ.ನರಸೀಪುರ ತಾಲ್ಲೂಕಿನ ತಲಕಾಡು ಗ್ರಾಮದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಮಾತನಾಡಿದರು. ಶಾಸಕರಾದ ಡಾ.ಎಸ್.ಯತೀಂದ್ರ, ಸಿ.ಚಿಕ್ಕಮಾದು, ಮಾಜಿ ಶಾಸಕ ಎಸ್.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಇನ್ನಿತರÀರಿದ್ದರು.

Translate »