ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಲಾ ಪ್ರಚಾರ
ಕೊಡಗು

ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಲಾ ಪ್ರಚಾರ

May 7, 2018

ಮಡಿಕೇರಿ: ಮಡಿಕೇರಿ ನಗರ ಕಾಂಗ್ರೆಸ್ ವತಿಯಿಂದ ನಗರದ ವಿವಿಧೆಡೆ ಬಿರುಸಿನ ಪ್ರಚಾರ ಕಾರ್ಯ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.ಚಂದ್ರಕಲಾ ಮತ್ತು ಪಕ್ಷದ ಕಾರ್ಯಕರ್ತರು ಮಡಿಕೇರಿಯ ವಿವಿಧ ಬಡಾವಣೆಗಳಲ್ಲಿ ಮನೆ ಮನೆ ಪ್ರಚಾರ ನಡೆಸಿದರು. ಮತದಾರರ ಮನೆಗಳಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಧನೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಕಾಂಗ್ರೆಸ್‍ಗೆ ಮತ ನೀಡುವಂತೆ ಮನವಿ ಮಾಡಿದರು.
ನಗರಸಭಾ ವ್ಯಾಪ್ತಿಯ ಬಡವಾಣೆಗಳಿಗೆ ಭೇಟಿ ನೀಡಿದ ಅಭ್ಯರ್ಥಿ ಕೆ.ಪಿ.ಚಂದ್ರಕಲಾ, ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾóಕ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಪ್ರು ರವೀಂದ್ರ ಸೇರಿದಂತೆ ಪಕ್ಷದ ಪ್ರಮುಖರು ಮತಯಾಚಿಸಿದರು.

ಈ ಸಂದರ್ಭ ಮಾತನಾಡಿದ ಕೆ.ಪಿ.ಚಂದ್ರಕಲಾ, ಮಡಿಕೇರಿ ಕ್ಷೇತ್ರದ ಜನ ಬದಲಾವಣೆ ಯನ್ನು ಬಯಸಿದ್ದು, ಮಹಿಳಾ ಅಭ್ಯರ್ಥಿಯಾಗಿರುವ ನನ್ನನ್ನು ಬಹುಮತದಿಂದ ಗೆಲ್ಲಿಸಲಿ ದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಐದು ವರ್ಷಗಳ ಕಾಲ ರಾಜ್ಯವನ್ನಾಳಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರವಾದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿದೆ. ಇದೇ ಕಾರಣದಿಂದ ಕೊಡಗಿನ ಮತ ದಾರರು ಕೂಡ ಈ ಬಾರಿ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ ಎಂದರು. ಮತಯಾಚಿಸಿ ಹೋದ ಕಡೆಯಲೆಲ್ಲ ಜನರು ನನಗೆ ಅಭೂತಪೂರ್ವ ಬೆಂಬಲವನ್ನು ಸೂಚಿಸುವ ಮೂಲಕ ಚುನಾವಣಾ ಉತ್ಸಾಹವನ್ನು ಹೆಚ್ಚಿಸಿದ್ದಾರೆ ಎಂದು ಕೆ.ಪಿ.ಚಂದ್ರಕಲಾ ಅಭಿಪ್ರಾಯಪಟ್ಟರು.

ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಯು.ಅಬ್ದುಲ್ ರಜಾóಕ್ ಮಾತನಾಡಿ, ಮಡಿ ಕೇರಿ ಕ್ಷೇತ್ರದ ಅಭ್ಯರ್ಥಿ ಮಹಿಳೆಯಾಗಿರುವುದರಿಂದ ಇಡೀ ಮಹಿಳಾ ಸಮೂಹ ಚಂದ್ರಕಲಾ ಅವರ ಪರವಾಗಿ ನಿಂತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ರು ರವೀಂದ್ರ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಪರ ಜನರ ಒಲವು ಹೆಚ್ಚಾಗುತ್ತಿದ್ದು, ಕೆ.ಪಿ.ಚಂದ್ರಕಲಾ ಅವರ ಗೆಲುವು ಖಚಿತವೆಂದರು. ಪಕ್ಷದ ಪ್ರಮುಖರಾದ ಮುನೀರ್ ಅಹಮ್ಮದ್ ಮಾತನಾಡಿದರು. ಮತಯಾಚನೆ ಸಂದರ್ಭ ನಗರಸಭಾ ಅಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಮಾಜಿ ಅಧ್ಯಕ್ಷೆ ಜುಲೇಕಾಬಿ, ಮೂಡ ಅಧ್ಯಕ್ಷ ಚುಮ್ಮಿ ದೇವಯ್ಯ, ಪಕ್ಷದ ಪ್ರಮುಖರಾದ ಮಿಟ್ಟು ಚಂಗಪ್ಪ, ಚಂದ್ರಶೇಖರ್, ಮ್ಯಾಥ್ಯು, ಅಂಬೆಕಲ್ಲು ನವೀನ್ ಕುಶಾಲಪ್ಪ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ.ಯಾಕೂಬ್, ನಗರಸಭೆಯ ಕಾಂಗ್ರೆಸ್‍ನ ಹಾಲಿ ಹಾಗೂ ಮಾಜಿ ಸದಸ್ಯರುಗಳು ಮತ್ತು ಕಾರ್ಯಕರ್ತರು ಮತಯಾಚನೆ ಸಂದರ್ಭ ಹಾಜರಿದ್ದರು.

Translate »