ಪಾದಯಾತ್ರೆ ಮೂಲಕ ಮತ ಯಾಚನೆ
ಮೈಸೂರು

ಪಾದಯಾತ್ರೆ ಮೂಲಕ ಮತ ಯಾಚನೆ

April 5, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಪರವಾಗಿ ಪ್ರಗತಿಪರರು ಪ್ರಚಾರ ಆರಂಭಿಸಿದ್ದಾರೆ. ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ, ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಕಾರ್ಯಕರ್ತರು ಗುರುವಾರ ಅಗ್ರಹಾರ ಸುತ್ತಮುತ್ತ ಪಾದಯಾತ್ರೆ ಕೈಗೊಂಡು ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಮತ ಯಾಚಿಸಿದರು.

ಮೈಸೂರಿನ ಅಗ್ರಹಾರ ನೂರೊಂದು ಗಣಪತಿ ದೇವಸ್ಥಾನದ ಬಳಿ ಸೇರಿದ ನೂರಕ್ಕೂ ಹೆಚ್ಚು ಕಾರ್ಯಕರ್ತರು ದೇಶದ ಹಿತ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಅಧ್ಯಕ್ಷ, ಮಾಜಿ ಎಂಎಲ್‍ಸಿ ಕೆ.ಸಿ.ಪುಟ್ಟಸಿದ್ದಶೆಟ್ಟಿ, ಈಗಾಗಲೇ ಕೊಡಗಿನಲ್ಲಿ ಪ್ರಚಾರ ಮಾಡಿದ್ದೇವೆ. ಪ್ರಕೃತಿ ವಿಕೋಪಕ್ಕೆ ಒಳಗಾದವರಿಗೆ ಕೇಂದ್ರದಿಂದ ಬರಬೇಕಾದ ಹಣವನ್ನು ತರುವಲ್ಲಿ ಹಾಲಿ ಸಂಸದ ಪ್ರತಾಪಸಿಂಹ ವಿಫಲರಾಗಿದ್ದಾರೆ. ಅಲ್ಲಿನ ದಿಡ್ಡಳ್ಳಿ ಆದಿವಾಸಿ ನಿರಾಶ್ರಿತರ ಪುನರ್ವಸತಿ ವಿಚಾರದಲ್ಲೂ ಕೈಚೆಲ್ಲಿದ್ದಾರೆ. ಪಿರಿಯಾಪಟ್ಟಣ, ಹುಣಸೂರು ಹೊಗೆಸೊಪ್ಪು ಬೆಳೆಗಾರರು ಸಂಸದರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದನ್ನು ಕಂಡಿದ್ದೇವೆ ಎಂದರು.

ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಒಡೆದ ಮನೆ. ಸ್ಥಳೀಯ ಮುಖಂಡರು ಒಳಗೊಳಗೆ ಅಸಮಾಧಾನಗೊಂಡಿದ್ದಾರೆ. ಶಾಸಕ ರಾಮದಾಸ್ ಅವರು ತೋರಿಕೆಗಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೊರಗಿನಿಂದ ಅಭ್ಯರ್ಥಿ ತಂದು ಸ್ಥಳೀಯ ಕಾರ್ಯಕರ್ತರನ್ನು ಕಡೆಗಣಿಸಿ ರುವುದಕ್ಕೆ ಬಿಜೆಪಿಯಲ್ಲಿ ಅಸಮಾಧಾನವಿದೆ. ಈ ಎಲ್ಲಾ ಕಾರಣದಿಂದ ಪ್ರತಾಪಸಿಂಹ ಅವರಿಗೆ ಸೋಲಿನ ಭೀತಿ ಕಾಡುತ್ತಿದೆ ಎಂದರು. ರಾಷ್ಟ್ರ ರಕ್ಷಣೆ ಮೋದಿಯಿಂದ ಸಾಧ್ಯವಿಲ್ಲ. ಅದು ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ. ಸಿದ್ದರಾಮಯ್ಯ ನೀಡಿದ ಹಲವು ಭಾಗ್ಯಗಳ ಫಲ ಸರ್ವಜನಾಂಗಕ್ಕೂ ಲಭ್ಯವಾಗಿದೆ. ಇದರ ಲಾಭ ನಮ್ಮ ಅಭ್ಯರ್ಥಿ ವಿಜಯಶಂಕರ್ ಅವರಿಗೆ ದೊರೆಯಲಿದ್ದು, ಅವರು ಅಭೂತಪೂರ್ವ ಗೆಲುವು ಸಾಧಿಸಲಿದ್ದಾರೆ ಎಂದರು

ಪ್ರಗತಿಪರ ಚಿಂತಕ ಪ್ರೊ.ಮಹೇಶ್‍ಚಂದ್ರಗುರು ಮಾತನಾಡಿ, ಎನ್‍ಡಿಎ ತೊಲಗಿಸಿ, ಪ್ರಜಾಪ್ರಭುತ್ವ ಉಳಿಸಲು ಮೈತ್ರಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಮುಖಂಡರಾದ ಪ್ರೊ.ಶಬ್ಬೀರ್ ಮುಸ್ತಫಾ,ನಂದೀಶ್ ಜಿ.ಅರಸ್, ನಿವೃತ್ತ ಪಿಯು ಡಿಡಿ ಕೆ.ಎಂ.ಪುಟ್ಟು, ಹೆಚ್.ಬಿ.ಸಂಪತ್ತು, ಬೋರಪ್ಪ ಶೆಟ್ಟಿ, ಎಸ್.ಮಹೇಶ್ ಇನ್ನಿತರರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Translate »