ಸಿಎಎ ಕುರಿತು ಕಾಂಗ್ರೆಸ್ ಮುಸ್ಲಿಮರಲ್ಲಿ ಗೊಂದಲ ಸೃಷ್ಟಿಸುತ್ತಿದೆ: ಬಿಎಸ್‍ವೈ
ಮೈಸೂರು

ಸಿಎಎ ಕುರಿತು ಕಾಂಗ್ರೆಸ್ ಮುಸ್ಲಿಮರಲ್ಲಿ ಗೊಂದಲ ಸೃಷ್ಟಿಸುತ್ತಿದೆ: ಬಿಎಸ್‍ವೈ

January 6, 2020

ಬೆಂಗಳೂರು, ಜ.5- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕಾಂಗ್ರೆಸ್ ಮುಸ್ಲಿಮರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸುವ ಆಂದೋಲನದ ಭಾಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಸಂತನಗರದಲ್ಲಿ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕಾಯ್ದೆಯಿಂದ ದೇಶದಲ್ಲಿನ 130 ಕೋಟಿ ಜನರಲ್ಲಿ ಯಾರೊಬ್ಬರಿಗೂ ತೊಂದರೆಯಾಗುವುದಿಲ್ಲ. ಆದ್ದರಿಂದ ತಪ್ಪು ಮಾಹಿತಿಗಳಿಗೆ ಕಿವಿ ಗೊಡಬಾರದು. ಈ ಹಿಂದೆ ಪ್ರಧಾನಿಗಳಾಗಿದ್ದ ಜವಾಹರ್‍ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್‍ಗಾಂಧಿ ಈ ಕಾಯ್ದೆ ಜಾರಿಗೆ ತಂದಿದ್ದರು. ಆಗ ಯಾವ ವಿರೋಧವೂ ಇರಲಿಲ್ಲ. ಸಹಮತ ಇತ್ತು. ಮೋದಿಯವರ ಸರ್ಕಾರ ತಿದ್ದುಪಡಿ ತಂದಾಗ ಮಾತ್ರ ವಿರೋಧಿಸಲಾಗುತ್ತಿದೆ. ದುರುದ್ದೇಶದಿಂದ ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸ ಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಸ್ತವ ಸಂಗತಿಗಳನ್ನು ಜನರಿಗೆ ತಲುಪಿಸಲು ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುವ ಅಭಿಯಾನವನ್ನು ಇಂದಿನಿಂದ ಆರಂಭಿಸ ಲಾಗಿದೆ. ರಾಜ್ಯದಲ್ಲಿ 30 ಲಕ್ಷ ಮನೆಗಳು ಸೇರಿದಂತೆ ದೇಶದಲ್ಲಿ 3 ಕೋಟಿ ಮನೆ ಗಳಿಗೆ ತಲುಪಿ ವಾಸ್ತವಿಕ ಸಂಗತಿಗಳನ್ನು ತಿಳಿಸಲಾಗುವುದು ಎಂದರು.

ಅಭಿಯಾನದಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಪೌರತ್ವ ತಿದ್ದು ಪಡಿ ಕಾಯ್ದೆ ಅಭಿಯಾನದ ಸಂಚಾಲಕ ಎನ್.ರವಿಕುಮಾರ್,ಸಂಸದ ಪಿ.ಸಿ.ಮೋಹನ್, ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಅಸುರಕ್ಷತೆಯಿಂದ ಅಲ್ಪಸಂಖ್ಯಾತರಾರೂ ವಲಸೆ ಹೋಗಿಲ್ಲ: ಅಸುರಕ್ಷತೆಯಿಂದ ಯಾವೊಬ್ಬ ಅಲ್ಪಸಂಖ್ಯಾತರು ಭಾರತದಿಂದ ವಲಸೆ ಹೋಗಿಲ್ಲ ಎಂದು ಡಿಸಿಎಂ ಡಾ.ಸಿ. ಎನ್.ಅಶ್ವಥ್‍ನಾರಾಯಣ್ ಹೇಳಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಜನಜಾಗೃತಿ ಮೂಡಿಸಲು ಬಿಜೆಪಿ ಹಮ್ಮಿಕೊಂಡಿರುವ ಅಭಿಯಾನದ ಅಂಗವಾಗಿ ಭಾನುವಾರ ಬೆಂಗ ಳೂರಿನಲ್ಲಿ ಮನೆ-ಮನೆಗೆ ತೆರಳಿ ಜನರನ್ನು ಸಂಪರ್ಕಿಸಿದ ಅವರು, ಕಾಯ್ದೆ ಕುರಿತಂತೆ ಜನರಲ್ಲಿ ಬಿಂಬಿಸಲಾಗಿರುವ ತಪ್ಪು ಮಾಹಿತಿಯನ್ನು ದೂರ ಮಾಡುವುದಕ್ಕಾಗಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಾನವೀಯತೆಯ ಕಾಯ್ದೆಗೆ ಕಾಂಗ್ರೆಸ್ ಸೇರಿದಂತೆ ಕೆಲ ಶಕ್ತಿಗಳು ಕೋಮು ಬಣ್ಣ ಹಚ್ಚಲು ಯತ್ನಿಸುತ್ತಿರುವುದು ದುರದೃಷ್ಟಕರ ಎಂದರು. ಅಭಿಯಾನದ ಅಂಗವಾಗಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರ ಮನೆಗೆ ಭೇಟಿ ನೀಡಿ ಸಂವಾದ ನಡೆಸಿದರು. ಬಳಿಕ ಪ್ರದೇಶ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್, ಹಿರಿಯ ಚಲನಚಿತ್ರ ನಟಿ ಗಿರಿಜಾ ಲೋಕೇಶ್, ವೈದ್ಯ ರುದ್ರೇಶ್ ಅವರ ಮನೆಗೆ ಭೇಟಿ ನೀಡಿ, ಕಾಯ್ದೆಯಲ್ಲಿನ ಅಂಶಗಳ ಬಗ್ಗೆ ವಿವರಿಸಿದರು.

Translate »