ಕಾಡಂಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಕಾಪಾಡುವ ಹೊಣೆ ಅರಣ್ಯ ಇಲಾಖೆ ಹೆಗಲಿಗೆ
ಮೈಸೂರು

ಕಾಡಂಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಕಾಪಾಡುವ ಹೊಣೆ ಅರಣ್ಯ ಇಲಾಖೆ ಹೆಗಲಿಗೆ

January 6, 2020

ಮೈಸೂರು, ಜ.5- ಕಾಡಿನಲ್ಲಿರುವ ವನ್ಯ ಜೀವಿಗಳ ಹಿತಕಾಯುವುದರೊಂದಿಗೆ ಕಾಡಂ ಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಕಾಪಾಡುವ ಹೊಣೆಗಾರಿಕೆ ಅರಣ್ಯ ಇಲಾಖೆ ಹೆಗಲಿಗೇರಿದೆ. ರೇಬಿಸ್ ಸೇರಿದಂತೆ ವಿವಿಧ ರೋಗಕ್ಕೆ ತುತ್ತಾಗುವ ನಾಯಿಗಳಿಂದ ವನ್ಯಜೀವಿ ಗಳಿಗೆ ತೊಂದರೆಯಾಗುವುದನ್ನು ತಡೆಗಟ್ಟಲು ಇದೀಗ ಕಾಡಂಚಿನ ಗ್ರಾಮಗಳಲ್ಲಿರುವ ನಾಯಿ ಗಳಿಗೆ ಚುಚ್ಚುಮದ್ದು ಹಾಕಲಾಗುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು 1024 ಚ.ಕಿ.ಮಿ(2.80 ಲಕ್ಷ ಎಕರೆ) ವಿಸ್ತೀರ್ಣ ಮೈಚಾಚಿ ಕೊಂಡಿದ್ದು, 13 ವಲಯಗಳಾಗಿ ವಿಂಗಡಿಸ ಲಾಗಿದೆ. 3 ಉಪವಿಭಾಗಗಳ ಮೂಲಕ ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಬಂಡೀಪುರ ಅಭಯಾರಣ್ಯವು ಗುಂಡ್ಲುಪೇಟೆ ಹಾಗೂ ಹೆಚ್.ಡಿ.ಕೋಟೆ ತಾಲೂಕಿನ ವ್ಯಾಪ್ತಿಗೆ ಬರಲಿದ್ದು, ಸುಮಾರು 123 ಕಾಡಂಚಿನ ಗ್ರಾಮಗಳನ್ನು ಹೊಂದಿದೆ. ಕೆಲವು ಗ್ರಾಮಗಳು ಅರಣ್ಯ ಪ್ರದೇಶ ಸಮೀಪ ದಲ್ಲಿಯೇ ಇದ್ದರೆ, ಮತ್ತಷ್ಟು ಗ್ರಾಮಗಳು ಎರಡರಿಂದ ಮೂರು ಕಿ.ಮೀ ದೂರದಲ್ಲಿಯೇ ಇವೆ. 123 ಕಾಡಂಚಿನ ಗ್ರಾಮಗಳಿಂದ 3 ಲಕ್ಷ ಜನಸಂಖ್ಯೆ ಹಾಗೂ 2 ಲಕ್ಷ ಜಾನುವಾರು ಗಳಿವೆ. ಈ ನಡುವೆ ನೂರಾರು ನಾಯಿಗಳೂ ಕಾಡಂಚಿನ ಗ್ರಾಮಗಳಲ್ಲಿ ನೆಲೆಸಿವೆ.

ಬೀದಿನಾಯಿಗಳಿಂದ ವನ್ಯಜೀವಿಗಳಿಗೆ ತೊಂದರೆ; ಇಲಾಖೆಗೆ ಭಯ: ಸಾಮಾನ್ಯವಾಗಿ ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ನುಗ್ಗಿ ಗ್ರಾಮಸ್ಥರಿಗೆ ತೊಂದರೆ ಕೊಡುತ್ತವೆ ಎಂಬ ದೂರು ಕೇಳಿ ಬರುತ್ತಲೇ ಇರುತ್ತದೆ. ಆನೆಗಳು ಬೆಳೆ ನಾಶ ಮಾಡಿದರೆ, ಹುಲಿ, ಚಿರತೆ ಜಾನುವಾರುಗಳ ಮೇಲೆ ದಾಳಿ ಮಾಡುವ ಆತಂಕ ಕಾಡಂಚಿನ ಗ್ರಾಮಗಳ ಜನರಲ್ಲಿ ಪ್ರತಿದಿನ ಕಾಡುವುದು ಸಹಜ. ಗ್ರಾಮಸ್ಥರಿಗೆ ಕಾಡುವ ಭಯದಂತೆ ಅರಣ್ಯ ಸಿಬ್ಬಂದಿಗೂ ಗ್ರಾಮದಲ್ಲಿರುವ ಬೀದಿನಾಯಿಗಳಿಂದ ವನ್ಯಜೀವಿಗಳಿಗೆ ಮಾರಕ ರೋಗ ಹರಡಬಹುದೆಂಬ ಚಿಂತೆ ಕಾಡುವುದು ಸಾಮಾನ್ಯ ಸಂಗತಿ. ಇದರಿಂದಾಗಿ ಎರಡೆರಡು ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಕೆಲಸ ಮಾಡಬೇಕಾದ ಅನಿವಾರ್ಯತೆ ಅರಣ್ಯ ಇಲಾಖೆ ಸಿಬ್ಬಂದಿ ಗಳದ್ದಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳೆದ ವರ್ಷ ನಡೆದ ಹುಲಿ ಗಣತಿಯಲ್ಲಿ 139 ಹುಲಿಗಳು ಕ್ಯಾಮರಾ ಟ್ರ್ಯಾಪ್‍ನಲ್ಲಿ ಸೆರೆಯಾಗಿದ್ದು, 80ಕ್ಕೂ ಹೆಚ್ಚು ಚಿರತೆಗಳಿರುವುದು ದೃಢವಾಗಿದೆ. ಮೈಸೂರು, ನಂಜನಗೂಡು, ಟಿ.ನರಸೀಪುರ ಸೇರಿದಂತೆ ವಿವಿಧೆಡೆ ಸೆರೆ ಹಿಡಿದ ಚಿರತೆಗಳನ್ನೂ ಬಂಡೀಪುರದ ಮೂಲೆಹೊಳೆ ವ್ಯಾಪ್ತಿಯಲ್ಲೇ ಬಿಡುತ್ತಿರುವುದರಿಂದ ಚಿರತೆಗಳ ಸಂಖ್ಯೆ ಬಂಡೀಪುರ ಅರಣ್ಯದಲ್ಲಿ ಉತ್ತಮವಾಗಿದೆ. ಅರಣ್ಯ ಪ್ರದೇಶದಲ್ಲಿ ಚುಕ್ಕಿ ಜಿಂಕೆಗಳ ಸಂಖ್ಯೆ ಹೆಚ್ಚಾಗಿದ್ದರೂ, ಚಿರತೆಗೆ ನಾಯಿ ಮಾಂಸ ಬಲು ಪ್ರಿಯವಾಗಿರುವ ಹಿನ್ನೆಲೆಯಲ್ಲಿ ಬೀದಿನಾಯಿಗಳನ್ನು ಬೇಟೆಯಾಡಲು ಇಚ್ಛಿಸುತ್ತವೆ. ಈ ಹಿನ್ನೆಲೆಯಲ್ಲಿ ಪದೇ ಪದೆ ಕಾಡಂಚಿನ ಗ್ರಾಮಗಳ ನಾಯಿಗಳು ಚಿರತೆಗೆ ಆಹಾರವಾಗುತ್ತಿವೆ. ಕೃಷಿ ಚಟುವಟಿಕೆಗೆ ಕಾಡಂಚಿನಲ್ಲಿರುವ ಹೊಲ, ತೋಟಕ್ಕೆ ರೈತರು ಹೋದಾಗ, ಅವರನ್ನು ಹಿಂಬಾಲಿಸುವ ನಾಯಿಗಳು ಹಲವು ಸಂದರ್ಭಗಳಲ್ಲಿ ಚಿರತೆಗಳಿಗೆ ಸುಲಭದ ತುತ್ತಾಗಿ ಪರಿಣಮಿಸುತ್ತಿವೆ. ಮತ್ತೆ ಕೆಲವು ಸಂದರ್ಭಗಳಲ್ಲಿ ಚಿರತೆ ರಾತ್ರಿ ವೇಳೆ ಗ್ರಾಮಕ್ಕೆ ನುಗ್ಗಿ ಬೀದಿನಾಯಿಗಳನ್ನು ಬೇಟೆಯಾಡಿ, ಕಾಡಿಗೆ ಎಳೆದೊಯ್ಯುತ್ತಿವೆ. ಇದರಿಂದ ವನ್ಯಜೀವಿ ಗಳಿಗೆ ಸೋಂಕಿನ ರೋಗ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅರಣ್ಯ ಇಲಾಖೆಗೆ ಕಾಡಂಚಿನ ಗ್ರಾಮಗಳ ಬೀದಿನಾಯಿಗಳ ಆರೋಗ್ಯ ಕಾಪಾಡುವತ್ತ ಗಮನ ಹರಿಸಿದೆ.

116 ನಾಯಿಗಳಿಗೆ ಲಸಿಕೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಿರ್ದೇಶಕರ ಕಚೇರಿ, ದಿ.ಮಾರಿಯಮ್ಮ ಚಾರಿಟಬಲ್ ಟ್ರಸ್ಟ್ ಮತ್ತು ಅನಿಮಲ್ ಪ್ರೊಟೆಕ್ಷನ್ ಅಂಡ್ ವೆಲ್ಫೇರ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಬೀದಿನಾಯಿಗಳಿಗೆ ಜನನ ನಿಯಂತ್ರಣ ಮತ್ತು ರೇಬಿಸ್ ನಿರೋಧಕ ಚುಚ್ಚುಮದ್ದು ನೀಡುವ ಅಭಿಯಾನ ಹಮ್ಮಿಕೊಂಡಿದೆ. ವಿವಿಧ ವಲಯಗಳಲ್ಲಿ ಬೇರೆ ಬೇರೆ ಸಂಘ ಸಂಸ್ಥೆಗಳು ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸಿವೆ. ಸಾಮಾನ್ಯ ವಾಗಿ ಬೀದಿನಾಯಿಗಳಿಗೆ ರೇಬಿಸ್ ಮತ್ತು ಕೆನೈನ್ ಡಿಸ್ಟಂಪರ್(ಮೈ,ಕೈ-ಕಾಲು ಒದರುವ ಲಕ್ಷಣ) ರೋಗ ಬರುವುದು ಸಾಮಾನ್ಯ. ಈ ರೋಗವುಳ್ಳ ನಾಯಿಗಳನ್ನು ತಿನ್ನುವ ಚಿರತೆ, ಹುಲಿಗೂ ಆ ರೋಗವು ಹರಡುವ ಸಾಧ್ಯತೆ ಹೆಚ್ಚಾಗಿದೆ. ಒಮ್ಮೆ ಮಾಂಸಾಹಾರಿ ಪ್ರಾಣಿಗಳಿಗೆ ಈ ರೋಗಗಳು ಹರಡಿದರೆ, ಅವು ಬೇರೆ ಬೇರೆ ಪ್ರಾಣಿಗಳಿಗೂ ವ್ಯಾಪಿಸುವ ಸಾಧ್ಯತೆ ಇದೆ. ಇದರಿಂದಾಗಿಯೇ ಅರಣ್ಯ ಇಲಾಖೆ ಕಾಡಂಚಿನ ಗ್ರಾಮಗಳಲ್ಲಿರುವ ನಾಯಿಗಳಿಗೆ ಚುಚ್ಚುಮದ್ದು ಹಾಕಿಸುವ ಕಾರ್ಯಕ್ರಮ ನಡೆಸುತ್ತಿದೆ. ಈ ವರ್ಷ 116 ನಾಯಿಗಳಿಗೆ ರೇಬಿಸ್ ಹಾಗೂ ಕೆನೈನ್ ಡಿಸ್ಟಂಪರ್ ರೋಗ ತಡೆಗೆ ಚುಚ್ಚುಮದ್ದು ನೀಡಲಾಗಿದೆ. ಮತ್ತಷ್ಟು ನಾಯಿಗಳಿಗೆ ಸಂತಾನ ಹರಣ(ಜನನ ನಿಯಂತ್ರಣ) ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಇನ್ನಷ್ಟು ನಾಯಿಗಳಿಗೆ ಚುಚ್ಚು ಮದ್ದು ನೀಡುವ ಅಗತ್ಯವಿದ್ದು, ಜನವರಿ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಿದೆ.

ಎಂ.ಟಿ.ಯೋಗೇಶ್ ಕುಮಾರ್

Translate »