ಮೈಸೂರು,ಡಿ.1(ಎಸ್‍ಬಿಡಿ)- ಕಾಂಗ್ರೆಸ್-ಜೆಡಿಎಸ್ ಪುನರ್ ಮೈತ್ರಿ ಯೊಂದಿಗೆ ರಾಜ್ಯದಲ್ಲಿ ಸರ್ಕಾರ ರಚನೆ ಯಾಗುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸದ್ಯ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಉಪ ಚುನಾವಣೆಯನ್ನು ಎದು ರಿಸುತ್ತಿಲ್ಲ. ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕೆಲಸ ಮಾಡುತ್ತಿದ್ದೇವೆ. ಆದರೆ ಫಲಿತಾಂಶದ ಬಳಿಕ ಕಾಂಗ್ರೆಸ್-ಜೆಡಿಎಸ್ ಪುನರ್ ಮೈತ್ರಿಯಲ್ಲಿ ಸರ್ಕಾರ ರಚನೆ ಯಾಗಲಿದೆ ಎಂದು ಭವಿಷ್ಯ ನುಡಿದರು.
ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಒಟ್ಟಿಗೆ ಚುನಾವಣೆ ಎದುರಿಸಿದರೂ, ನಂತರದಲ್ಲಿ ಗಮನಾರ್ಹ ಬದಲಾವಣೆ ಆಯಿತು. ರಾತ್ರೋರಾತ್ರಿ ಬಿಜೆಪಿ, ಶಿವಸೇನೆಯ ಸಖ್ಯ ತೊರೆದು, ಎನ್‍ಸಿಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿತು. ಆದರೆ ನಂತರದ ಬೆಳ ವಣಿಗೆಯಲ್ಲಿ ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಉದ್ದೇಶ ದಿಂದ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಪಕ್ಷಗಳು ಒಂದುಗೂಡಿ ಸರಕಾರ ರಚನೆ ಮಾಡುವ ಪರಿಸ್ಥಿತಿ ನಿರ್ಮಾಣವಾ ಯಿತು. ಇದು ಚುನಾವಣೆ ರಾಜಕೀಯ ಹಾಗೂ ಸರ್ಕಾರ ರಚನೆ ಪ್ರಕ್ರಿಯೆ ನಡು ವಿನ ಭಿನ್ನತೆಯನ್ನು ತಿಳಿಸುತ್ತದೆ. ಹಾಗಾಗಿ ಕರ್ನಾಟಕದಲ್ಲಿ ಉಪ ಚುನಾವಣೆ ಯನ್ನು ಪ್ರತ್ಯೇಕವಾಗಿ ಎದುರಿಸುತ್ತಿರುವ ಕಾಂಗ್ರೆಸ್-ಜೆಡಿಎಸ್, ಫಲಿತಾಂಶದ ಬಳಿಕ ಮತ್ತೆ ಮೈತ್ರಿಯಾಗಿ ಸರ್ಕಾರ ರಚಿಸಲಿವೆ ಎಂದು ಪುನರುಚ್ಛರಿಸಿದರು.
ಹಲವು ರಾಜ್ಯಗಳಲ್ಲಿ ಬಿಜೆಪಿಯ ನಡೆ ಸಂವಿಧಾನ ಬಾಹಿರವಾಗಿದೆ. ಗೋವಾ, ಅರುಣಾಚಲ ಪ್ರದೇಶ ಸೇರಿದಂತೆ ಹಲ ವೆಡೆ ಪ್ರತಿಸ್ಪರ್ಧಿ ಪಕ್ಷಗಳ ಶಾಸಕರನ್ನೇ ಖರೀದಿ ಮಾಡಿ,
ಬಿಜೆಪಿ ಸರ್ಕಾರ ರಚಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈ ರೀತಿಯ ಕೆಲಸಗಳೇ ಬಿಜೆಪಿಗೆ ಅತ್ಯಂತ ದೊಡ್ಡ ಹಿನ್ನೆಡೆಯಾಗುತ್ತಿದ್ದು, ಕರ್ನಾಟಕದಲ್ಲೂ ಅದರ ಬಿಸಿ ತಟ್ಟಿದೆ. ಇಲ್ಲಿನ ಉಪ ಚುನಾವಣೆ ಬಿಜೆಪಿಗೆ ಅಗ್ನಿ ಪರೀಕ್ಷೆಯಾಗಿ ಎದು ರಾಗಿದೆ. ಒಟ್ಟು 15ರಲ್ಲಿ 8 ಕ್ಷೇತ್ರಗಳಲ್ಲಿ ಗೆದ್ದರೆ ಮಾತ್ರ ಬಿಜೆಪಿಗೆ ರಾಜ್ಯದಲ್ಲಿ ಉಳಿ ಗಾಲವಿದೆ. ಆದರೆ ಮತದಾರರು, ಕಾರ್ಯಕರ್ತರ ಭಾವನೆಗಳನ್ನು ಲೆಕ್ಕಿಸದೆ ಪಕ್ಷಾಂತರ ಆಗಿರುವ ಅನರ್ಹರ ಮುಂದಿಟ್ಟುಕೊಂಡು ಗೆಲ್ಲುತ್ತೇವೆ ಎಂಬುದು ಸುಳ್ಳು. ಪ್ರಸ್ತುತ ವಾತಾ ವರಣ ಗಮನಿಸಿದರೆ ಬಿಜೆಪಿ ಕೇವಲ 1-2 ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಬಹುದು. ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಅನರ್ಹ ಶಾಸಕರ ಅನರ್ಹತೆಯನ್ನು ಖಾಯಂಗೊಳಿಸುವ ಜವಾಬ್ದಾರಿ ಮತದಾರರ ಮೇಲಿದೆ. ಈಗಾಗಲೇ ಸುಪ್ರೀಂಕೋರ್ಟ್, ಪಕ್ಷ ತೊರೆದ ಶಾಸಕರನ್ನು ಅನರ್ಹರೆಂದು ತೀರ್ಮಾನಿಸಿದ್ದಾಗಿದೆ. ಹಾಗೆಯೇ ಅವರನ್ನು ಉಪ ಚುನಾವಣೆಯಲ್ಲಿ ಸೋಲಿಸುವ ಮೂಲಕ ಅವರ ಅನರ್ಹತೆಯನ್ನು ಖಾಯಂಗೊಳಿಸಬೇಕು. ಈ ಮೂಲಕ ಭವಿಷ್ಯದಲ್ಲಿ ಯಾರೂ ಜನಾದೇಶವನ್ನು ಬದಿಗೊತ್ತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೊಂದು ಪಕ್ಷಕ್ಕೆ ಸೇರಬಾರದೆಂಬ ಎಚ್ಚರಿಕೆ ನೀಡಬೇಕು. ಸಿದ್ದರಾಮಯ್ಯ ಒಬ್ಬರೇ ಎಲ್ಲಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ, ಉಳಿದ ನಾಯಕರು ದೂರ ಉಳಿದಿದ್ದಾರೆ ಎಂಬುದು ಊಹಾ ಪೋಹವಷ್ಟೇ. ನನ್ನನ್ನೂ ಒಳಗೊಂಡಂತೆ ಪಕ್ಷದ ಎಲ್ಲಾ ಮುಖಂಡರೂ ಉಪ ಚುನಾವಣೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ಸೋಮವಾರ ನಾನು ಹುಣಸೂರು ಕ್ಷೇತ್ರ ಪ್ರಚಾರದಲ್ಲಿ ಭಾಗಿಯಾಗಲಿದ್ದೇನೆ ಎಂದು ಸ್ಪಷ್ಟಪಡಿಸಿದರು. ಮಾಜಿ ಶಾಸಕ ವಾಸು, ಮೇಯರ್ ಪುಷ್ಪಲತಾ ಜಗನ್ನಾಥ್ ಮತ್ತಿತರ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.