ಜೆಡಿಎಸ್ ಅಭ್ಯರ್ಥಿಗಳ ಸೋಲಿಸಲು ಬಿಜೆಪಿಗೆ ಕಾಂಗ್ರೆಸ್ ಮುಖಂಡರ ಸಾಥ್
ಮೈಸೂರು

ಜೆಡಿಎಸ್ ಅಭ್ಯರ್ಥಿಗಳ ಸೋಲಿಸಲು ಬಿಜೆಪಿಗೆ ಕಾಂಗ್ರೆಸ್ ಮುಖಂಡರ ಸಾಥ್

March 20, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಸೋಲಿಸಲು ಕಾಂಗ್ರೆಸ್‍ನ ಸ್ಥಳೀಯ ನಾಯಕರೇ ಬಿಜೆಪಿ ಜತೆ ಕೈಜೋಡಿಸುತ್ತಿದ್ದು ಇದರ ಪರಿ ಣಾಮವಾಗಿ ಮೈತ್ರಿ ಸರ್ಕಾರ ಜೂನ್ ತಿಂಗಳಲ್ಲಿ ಪತನವಾಗಬಹುದು ಎಂದು ಮಾಜಿ ಪ್ರಧಾನಿ ದೇವೇಗೌಡ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಪಕ್ಷದ ರಾಜ್ಯ ಘಟಕದವರಿಗೆ ಕರ್ನಾಟಕ ದಲ್ಲಿ ಮೈತ್ರಿ ಸರ್ಕಾರವೂ ಬೇಕಾಗಿಲ್ಲ.

ರಾಷ್ಟ್ರಮಟ್ಟದಲ್ಲಿ ಯುಪಿಎ ಸರ್ಕಾರ ಗದ್ದಿಗೆ ಹಿಡಿಯುವುದು ಅವರಿಗೆ ಇಷ್ಟವಿದ್ದಂತಿಲ್ಲ. ಈ ಹಿನ್ನೆಲೆಯಲ್ಲೇ ನಾವು ಎಲ್ಲಿ ಬಲಿಷ್ಠವಿದ್ದೇವೆಯೋ ಅಂತಹ ಕಡೆ ರಾಜ್ಯದ ನಾಯಕರು ಗಳೇ ಜಿಲ್ಲೆಯ ನಿಮ್ಮ ಪಕ್ಷದ ಪ್ರಮುಖರನ್ನು ಬಿಜೆಪಿ ಕಡೆಗೆ ಕಳುಹಿಸುತ್ತಿದ್ದಾರೆ ಎಂದು ಇತ್ತೀಚಿನ ಘಟನೆಗಳ ಅಂಕಿ-ಅಂಶಗಳನ್ನು ರಾಹುಲ್

ಗಮನಕ್ಕೆ ತಂದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ದೆಹಲಿ ಭೇಟಿ ಸಂದರ್ಭದಲ್ಲಿ ಗೌಡರು, ರಾಹುಲ್ ಅವರನ್ನು ಸಂಪರ್ಕಿಸಿ, ನಾವು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತಿದ್ದರೆ, ಕರ್ನಾಟಕದ ನಿಮ್ಮ ಕೆಲವು ನಾಯಕರು ಅವರ ಜೊತೆಯೇ ಸಖ್ಯ ಬೆಳೆಸಿ ಮೈತ್ರಿಗೆ ಧಕ್ಕೆ ತರುತ್ತಿದ್ದಾರೆ ಎಂದಿದ್ದಾರೆ. ಗೌಡರ ಅನಿಸಿಕೆಗೆ ಸ್ಪಂದಿಸಿದ ರಾಹುಲ್ ನಿನ್ನೆ ರಾಜ್ಯ ಭೇಟಿ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಜೊತೆ ಪ್ರತ್ಯೇಕವಾಗಿ ನಂತರ ಉಳಿದವರ ಜೊತೆ ಸಮಾಲೋಚನೆ ನಡೆಸಿ, ರಾಜ್ಯ ಮತ್ತು ಜಿಲ್ಲಾ ಘಟಕಗಳಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ನೀವೇ ಬಗೆಹರಿಸಿ, ಜಂಟಿಯಾಗಿ ಚುನಾವಣಾ ಪ್ರಚಾರ ಕೈಗೊಳ್ಳಬೇಕೆಂದು ಆದೇಶಿಸಿದರು. ಈ ಹಿನ್ನೆಲೆಯಲ್ಲಿ ಇಂದು ಉಭಯ ಪಕ್ಷದ ನಾಯಕರು ಸುದೀರ್ಘ ಸಭೆ ನಡೆಸಿ, ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಏಕತೆ ಪ್ರದರ್ಶಿಸಿದರು. ರಾಹುಲ್‍ಗಾಂಧಿ ಅವರ ಸೂಚನೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಇಂದು ಹಾಸನ ಜಿಲ್ಲೆಯ ಕಾಂಗ್ರೆಸ್ ನಾಯಕರ ಜತೆ ಚರ್ಚೆ ನಡೆಸಿದ್ದಲ್ಲದೆ, ಬೇರೆ ಕ್ಷೇತ್ರಗಳ ಪ್ರಮುಖರ ಜತೆಗೂ ಚರ್ಚೆ ನಡೆಸಿದ್ದಾರೆ.

ಮಹಾಸಮರದ ನಂತರ ರಾಹುಲ್‍ಗಾಂಧಿ ಅವರು ಪ್ರಧಾನಿಯಾಗಬೇಕು ಎಂಬ ಬಯಕೆ ನಮ್ಮದು. ಈ ಬಯಕೆಗೆ ಹೊಡೆತ ಕೊಡಬೇಡಿ. ಜೆಡಿಎಸ್‍ನ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ನೀಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿಕೊಂಡಿದ್ದಾರೆ.

ಇಷ್ಟಾದರೂ ಹಾಸನ, ಮಂಡ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ವಿಷಯದಲ್ಲಿ ಸ್ಥಳೀಯ ನಾಯಕರ ಅಸಮಾಧಾನ ಮುಂದುವರಿದಿದ್ದು ಪರಿಸ್ಥಿತಿ ತಮ್ಮ ಕೈ ಮೀರಿ ಹೋಗಿರುವ ಕುರಿತು ಸಿದ್ದರಾಮಯ್ಯ ಚಿಂತಿತರಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‍ನ 20 ಹಾಗೂ ಜೆಡಿಎಸ್‍ನ 8 ಮಂದಿ ಕಣಕ್ಕಿಳಿಯಬೇಕು ಎಂದು ಉಭಯ ಪಕ್ಷಗಳ ವರಿಷ್ಠರು ನಿರ್ಧರಿಸಿದ್ದರು. ಆದರೆ ಈ ನಿರ್ಧಾರದ ಬೆನ್ನಲ್ಲೇ ಸ್ಥಳೀಯ ಮಟ್ಟದಲ್ಲಿ ಗೊಂದಲ ಶುರುವಾಗಿದ್ದು, ದಿನ ಕಳೆದಂತೆ ಅದು ಹೆಚ್ಚಾಗುತ್ತಲೇ ನಡೆದಿದೆ. ಇದೇ ಕಾರಣಕ್ಕಾಗಿ ಅಸಮಾಧಾನ ಗೊಂಡಿರುವ ದೇವೇಗೌಡ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ ಹದಿನೈದು ಸೀಟುಗಳನ್ನಾದರೂ ಗೆಲ್ಲುವ ನಿರೀಕ್ಷೆ ಇರಿಸಿಕೊಳ್ಳಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಗೆಲುವಿನ ಸಂಖ್ಯೆ ಕುಸಿತವಾಗಬಹುದು.

Translate »