ಪುರಾತತ್ವ ಇಲಾಖೆಯಿಂದ ಅರಸನಕೆರೆ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಚಿಂತನೆ
ಮೈಸೂರು

ಪುರಾತತ್ವ ಇಲಾಖೆಯಿಂದ ಅರಸನಕೆರೆ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಚಿಂತನೆ

July 17, 2019

ಮೈಸೂರು,ಜು.16(ಎಸ್‍ಬಿಡಿ)-ಮೈಸೂರಿಗೆ ಸಮೀಪದ ಅರಸನಕೆರೆ ಗ್ರಾಮದಲ್ಲಿ ಪತ್ತೆಯಾಗಿರುವ ಜೋಡಿ ನಂದಿ ವಿಗ್ರಹಗಳ ಸಂರಕ್ಷಣೆಗೆ ಪುರಾತತ್ವ ಇಲಾಖೆ ಚಿಂತನೆ ನಡೆಸಿದೆ.

ಈ ನಿಟ್ಟಿನಲ್ಲಿ ಪುರಾತತ್ವ ಶಾಸ್ತ್ರಜ್ಞ ಎನ್.ಎಲ್.ಗೌಡ ಹಾಗೂ ಇಂಜಿನಿಯರ್ ಸತೀಶ್ ಸ್ಥಳಕ್ಕೆ ಭೇಟಿ ನೀಡಿ, ನಂದಿ ವಿಗ್ರಹಗಳ ಪರಿಶೀಲನೆ ನಡೆಸಿದ್ದಾರೆ. ಬಳಸಿರುವ ಕಲ್ಲು ಹಾಗೂ ಕೆತ್ತನೆ ಶೈಲಿ ಗಮನಿಸಿದರೆ ವಿಗ್ರಹಗಳು ವಿಜಯ ನಗರ ಕಾಲದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ.

ಬಳಪ ಕಲ್ಲಿನಿಂದ ವಿಗ್ರಹಗಳನ್ನು ಕೆತ್ತಲಾಗಿದ್ದು, ಯಾವುದೋ ಕಾರಣದಿಂದ ಪರಿಪೂರ್ಣಗೊಳಿಸಿಲ್ಲ. ಹಾಗಾಗಿ 2 ವಿಗ್ರಹಗಳು ಬಂಡೆಗೆ ಹೊಂದಿಕೊಂಡಂತಿವೆ. ಉತ್ಕøಷ್ಟ ಬಳಪ ಕಲ್ಲು ನೆಲದೊಳಗೆ ಸಿಗುವುದರಿಂದ ಹಳ್ಳ ತೆಗೆಯ ಲಾಗಿದೆ. ಎರಡು ಪ್ರತ್ಯೇಕ ಬಂಡೆಗಳಲ್ಲಿ ವಿಗ್ರಹಗಳನ್ನು ಕೆತ್ತಲಾಗಿದೆ. ಮುಖಾಮುಖಿಯಾಗಿ ಪತ್ತೆಯಾಗಿರು ವುದನ್ನು ನೋಡಿದರೆ ಬೇರೆಡೆಗೆ ಕೊಂಡೊಯ್ಯಲು ಇಲ್ಲಿ ಕೆತ್ತನೆ ಮಾಡಿರಬಹುದು. ಕಾರಣಾಂತರದಿಂದ ಪೂರ್ಣ ಗೊಳಿಸದೆ ಇರಬಹುದು. ಬಳಸಿರುವ ಕಲ್ಲು ಹಾಗೂ ಕೆತ್ತನೆ ಶೈಲಿ ಆಧಾರದಲ್ಲಿ ಈ ವಿಗ್ರಹಗಳು ವಿಜಯನಗರ ಕಾಲದ್ದಾಗಿರಬಹುದು. ಒಂದು ವಿಗ್ರಹ ಮೂರೂವರೆ ಮೀಟರ್ ಅಗಲ ಹಾಗೂ ನಾಲ್ಕೂವರೆ ಮೀಟರ್ ಎತ್ತರವಿದ್ದರೆ, ಮತ್ತೊಂದು ಎರಡೂವರೆ ಮೀಟರ್ ಅಗಲ ಹಾಗೂ ಮೂರು ಮೀಟರ್ ಎತ್ತರವಿದೆ. ಇಲ್ಲಿ ದೇವಾಲಯವಿತ್ತೆಂಬ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಗ್ರಾಮಸ್ಥರಿಗೆ ಸಿಕ್ಕಿರುವ ಇತರೆ ವಿಗ್ರಹಗಳೂ ಅಪೂರ್ಣ ವಾಗಿವೆ. ಹಾಗಾಗಿ ಈ ಭಾಗದಲ್ಲಿ ಹೆಚ್ಚು ಶಿಲ್ಪಿಗಳು ಹಾಗೂ ಉತ್ಕøಷ್ಟವಾದ ಕಲ್ಲು ಸಿಗುತ್ತಿದ್ದ ಕಾರಣಕ್ಕೆ ಕೆತ್ತನೆ ಮಾಡಿಸಿರಬಹುದು ಎಂದು ಪುರಾತತ್ವ ಶಾಸ್ತ್ರಜ್ಞ ಎನ್.ಎಲ್.ಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಗ್ರಾಮದ ಹಳ್ಳವೊಂದರಲ್ಲಿ ನಾಲ್ಕು ದಶಕಗಳ ಹಿಂದೆ ಕಾಣಿಸಿಕೊಂಡ ಜೋಡಿ ನಂದಿ ವಿಗ್ರಹಗಳಿಗೆ ಅಂದಿನಿಂದಲೂ ಗ್ರಾಮಸ್ಥರು ಪೂಜೆ ಸಲ್ಲಿಸಿಕೊಂಡು ಬಂದಿದ್ದಾರೆ. ಹತ್ತಾರು ಅಡಿ ಆಳದಲ್ಲಿ ಹೂತುಹೋಗಿದ್ದ ವಿಗ್ರಹಗಳ ಮುಖಭಾಗ ಮಾತ್ರ ಕಾಣಿಸಿಕೊಂಡಿತ್ತು. ಅಂದಿನಿಂದಲೂ ವಿಗ್ರಹವನ್ನು ಪೂರ್ಣವಾಗಿ ಮಣ್ಣಿನಿಂದ ಹೊರತೆಗೆಯುವ ಪ್ರಯತ್ನ ನಡೆದಿತ್ತು. ಆದರೆ ಹಲವು ಕಾರಣಗಳಿಂದಾಗಿ ಸಾಧ್ಯವಾಗಿರಲಿಲ್ಲ. ಇದೀಗ 4 ದಿನಗಳಿಂದ ಯಂತ್ರೋಪಕರಣಗಳ ಸಹಾಯದೊಂದಿಗೆ ಗ್ರಾಮಸ್ಥರು ಅವಿರತವಾಗಿ ಶ್ರಮಿಸಿ, ವಿಗ್ರಹಗಳನ್ನು ಮಣ್ಣಿನಿಂದ ಬಹುತೇಕ ಬಿಡಿಸಿದ್ದಾರೆ. ಸದ್ಯ ಪುರಾತತ್ವ ಇಲಾಖೆಯವರು ಜೋಡಿನಂದಿ ವಿಗ್ರಹ ರಕ್ಷಣೆಗೆ ಮುಂದಾಗಿದ್ದಾರೆ. ಚಾಮರಾಜ ಒಡೆಯರ್ ಅವರು ಜೋಡಿನಂದಿ ನೋಡಲು ಬಂದಿದ್ದರಾದರೂ ಸಾಧ್ಯವಾಗದೆ ಪೂಜೆ ಸಲ್ಲಿಸಿ, ವಾಪಸ್ಸಾಗಿದ್ದರು ಎಂದು ಹೇಳುವ ಗ್ರಾಮಸ್ಥರು, ಇದೀಗ ಯುವರಾಜ ಯದುವೀರ್ ಅವರನ್ನೂ ಗ್ರಾಮಕ್ಕೆ ಬಂದು ವಿಗ್ರಹಗಳ ಸಂರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

Translate »