ನಿರಂತರ ಅಭ್ಯಾಸ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿಸುತ್ತದೆ ಎನ್‍ಎಸ್‍ಡಿಸಿ ಮಾಜಿ ಸಲಹೆಗಾರ ಎಸ್.ವಿ.ವೆಂಕಟೇಶ್
ಮೈಸೂರು

ನಿರಂತರ ಅಭ್ಯಾಸ ವ್ಯಕ್ತಿಯನ್ನು ಪರಿಪೂರ್ಣನನ್ನಾಗಿಸುತ್ತದೆ ಎನ್‍ಎಸ್‍ಡಿಸಿ ಮಾಜಿ ಸಲಹೆಗಾರ ಎಸ್.ವಿ.ವೆಂಕಟೇಶ್

November 25, 2019

ಮೈಸೂರು,ನ.24(ವೈಡಿಎಸ್)-ನಿರಂತರ ಅಭ್ಯಾಸವು ವ್ಯಕ್ತಿಯನ್ನು ಪರಿ ಪೂರ್ಣನನ್ನಾಗಿಸುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರಿತು, ಸತತ ಪ್ರಯತ್ನದಿಂದ ಸಾಧನೆಗೈಯ್ಯಬೇಕು ಎಂದು ಕೇಂದ್ರ ಸರ್ಕಾರದ ಎನ್‍ಎಸ್‍ಡಿಸಿಯ ಮಾಜಿ ಸಲಹೆಗಾರ ಎಸ್.ವಿ.ವೆಂಕಟೇಶ್ ಸಲಹೆ ನೀಡಿದರು.

ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಕರಾಮುವಿವಿ ಹಾಗೂ ಆರ್‍ಐಐಐಟಿ ವತಿಯಿಂದ ಆಯೋಜಿಸಿದ್ದ `ಆನ್ ಲರ್ನ್ ಟು ಲೀಡ್’ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಕನಸು ಕಾಣಬೇಕು. ಅದನ್ನು ನನಸಾಗಿಸಲು ಪ್ರಯತ್ನಿಸಬೇಕು. ನಾನು ಏನಾಗಬೇಕೆಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿದಾಗ ಮಾತ್ರ ನಮ್ಮ ಸಾಧನೆಯು ನಿರ್ಧಾರವಾಗಿರುತ್ತದೆ. ಈ ರೀತಿಯ ಪ್ರಶ್ನೆಯೊಂದು ಸದಾ ನಮ್ಮನ್ನು ಕಾಡುತ್ತಿರ ಬೇಕು ಎಂದು ಸಲಹೆ ನೀಡಿದರು. ಕೌಶಲ, ಬುದ್ಧಿವಂತಿಕೆಯ ಜೊತೆಗೆ ಮುನ್ನುಗ್ಗುವ ಧೈರ್ಯವು ಮುಖ್ಯ. ಉದ್ಯೋಗಕ್ಕಾಗಿ ಅಲೆದಾಡುವ ಬದಲಾಗಿ ಉದ್ಯೋಗ ಸೃಷ್ಟಿಸಿ, ಇತರರಿಗೆ ಕೆಲಸ ನೀಡುವ ಸಾಮಥ್ರ್ಯ ಬೆಳೆಸಿಕೊಳ್ಳಬೇಕು. ನಿಮ್ಮಗಳ ಶಕ್ತಿ ಸಾಮಥ್ರ್ಯವು ನಿಮಗಲ್ಲದೆ ಬೇರ್ಯಾರಿಗೂ ತಿಳಿದಿರಲು ಸಾಧ್ಯವಿಲ್ಲ. ಪೋಷಕರು, ಶಿಕ್ಷಕರಿಂದ ಎಲ್ಲಾ ರೀತಿಯ ಸಲಹೆಗಳನ್ನು ಪಡೆದುಕೊಳ್ಳಿರಿ. ಆದರೆ, ನಿರ್ಧಾರ ನಿಮ್ಮದಾಗಿರಲಿ ಎಂದು ಹೇಳಿದರು. ಮಕ್ಕಳು ಉನ್ನತ ಹುದ್ದೆ ಅಲಂಕರಿಸಿ, ಉತ್ತಮ ಸಂಬಳ ಪಡೆಯಬೇಕೆಂಬುದು ಪೋಷಕರ ಆಸೆಯಾಗಿರುತ್ತದೆ. ಆದರೆ, ಎಲ್ಲರೂ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯವಿಲ್ಲ. ಹಾಗಾಗಿ ಅವರಿಷ್ಟದಂತೆ ಸಂತೋಷದಿಂದ ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು. ಇಂದು ಎಲ್ಲರದೂ ಇಎಂಐ ಜೀವನ ಎನ್ನುವಂತಾಗಿದೆ. ಸಾಲ ತೀರಿಸುವುದರಲ್ಲೇ ಅರ್ಧ ಜೀವನ ಕಳೆದು ಹೋಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಜೀವನದಲ್ಲಿ ಸಾಧನೆಗೈದವರನ್ನು ಮಾತ್ರವೇ ಸಮಾಜ ಸ್ಮರಿಸುತ್ತದೆ ಎಂಬುದನ್ನು ಅರಿತು ಹಣ, ಆಸ್ತಿ ಮಾಡುವುದಕ್ಕಿಂತ ಮೌಲ್ಯಯುತವಾದ ಜೀವನ ನಡೆಸಬೇಕು ಎಂದರು. ಕರಾಮುವಿವಿ ಕುಲಪತಿ ಎಸ್.ವಿದ್ಯಾಶಂಕರ್, ಚಿಗುರು ಆಶ್ರಮದ ಸುಷ್ಮಾ ರವಿಕುಮಾರ್, ಮುರುಳಿ, ವಾಸುದೇವ್ ಮತ್ತಿತರರು ಉಪಸ್ಥಿತರಿದ್ದರು.

Translate »